
ಬೆಂಗಳೂರು, (ಏಪ್ರಿಲ್ 02): ಲೋಕಾಯುಕ್ತ ಎಡಿಜಿಪಿ ಮತ್ತು ಎಸ್ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್ (Lokayukta AdGP Chandrashekhar) ಅವರಿಗೆ ಮತ್ತು ಅವರ ಕುಟುಂಬಕ್ಕೆ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ (hd kumaraswamy) ಬೆದರಿಕೆ ಹಾಕಿರುವ ಪ್ರಕರಣ ರಾಜಿ ಸಂಧಾನ ಮಾತುಕತೆ ಹಂತಕ್ಕೆ ಬಂದಿದೆ. ಹೌದು.. ಹೈಕೋರ್ಟ್ ಸಲಹೆಯಂತೆ ಆರೋಪಿ ಎಚ್.ಡಿ.ಕುಮಾರಸ್ವಾಮಿ ಹಾಗೂ ದೂರುದಾರ ಚಂದ್ರಶೇಖರ್ ರಾಜಿ ಸಂಧಾನದ ಮಾತುಕತೆಗೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಹೈಕೋರ್ಟ್ (Karnataka High Court).ರಾಜಿ ಸಂಧಾನಕ್ಕೆ ಸೂಕ್ತ ಮಧ್ಯಸ್ಥಿಕೆದಾರರನ್ನು ನೇಮಿಸಲಾಗುವುದು ಎಂದು ಹೇಳಿದ್ದು, ಹಾಜರಾಗಬೇಕಾದ ದಿನಾಂಕ, ಸ್ಥಳವನ್ನು ತಿಳಿಸಲಾಗುವುದು ಎಂದು ಇಬ್ಬರು ಕಡೆ ವಕೀಲರಿಗೆ ಹೇಳಿ ವಿಚಾರಣೆಯನ್ನು ಏಪ್ರಿಲ್ 30ಕ್ಕೆ ಮುಂದೂಡಿದೆ.
ಸುದ್ದಿಗೋಷ್ಠಿಯಲ್ಲಿ ಸಾಲು ಸಾಲು ಆರೋಪ ಮಾಡಿರುವ ಸಂಬಂಧ ಎಂ ಚಂದ್ರಶೇಖರ್ ಅವರು ಕುಮಾರಸ್ವಾಮಿ ವಿರುದ್ಧ ಬೆದರಿಕೆ ಪ್ರಕರಣ ದಾಖಲಿಸಿದ್ದರು. ಬಳಿಕ ಪ್ರಕರಣ ರದ್ದುಕೋರಿ ಕುಮಾರಸ್ವಾಮಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು ಹೈಕೋರ್ಟ್ ಸಹ ಈ ಅರ್ಜಿಯನ್ನು ಹಲವು ಬಾರಿ ವಿಚಾರಣೆ ನಡೆಸಿದೆ. ಕೊನೆಗೆ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಿ ಎಂದು ಕುಮಾರಸ್ವಾಮಿ ಹಾಗೂ ಚಂದ್ರಶೇಖರ್ ಪರ ವಕೀಲರಿಗೆ ಸಲಹೆ ನೀಡಿತ್ತು. ಅದರಂತೆ ಇದೀಗ ರಾಜಿ ಸಂಧಾನ ಮಾತುಕತೆಗೆ ಇಬ್ಬರು ಕಡೆ ವಕೀಲರು ಸಮ್ಮಿತಿಸಿದ್ದಾರೆ. ಇದರಿಂದ ಕೋರ್ಟ್, ರಾಜಿ ಸಂಧಾನಕ್ಕೆ ಸೂಕ್ತ ಮಧ್ಯಸ್ಥಿಕೆದಾರರನ್ನು ನೇಮಿಸಲಾಗುವುದು. ಹಾಜರಾಗಬೇಕಾದ ದಿನಾಂಕ, ಸ್ಥಳವನ್ನು ತಿಳಿಸಲಾಗುವುದು ಎಂದು ಎರಡೂ ಕಡೆ ವಕೀಲರಿಗೆ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಪೀಠ ಸೂಚಿಸಿ ವಿಚಾರಣೆ ಏಪ್ರಿಲ್ 30ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಬೆದರಿಕೆ ಆರೋಪ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದ ಎಡಿಜಿಪಿ ಚಂದ್ರಶೇಖರ್
ಪ್ರಕರಣದ ಹಿನ್ನೆಲೆ
ನಿಯಮ ಉಲ್ಲಂಘಿಸಿ ಸಾಯಿ ಮಿನರಲ್ಸ್ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪದ ಮೇಲೆ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ಲೋಕಾಯುಕ್ತ ಎಸ್ಐಟಿ ಎಡಿಜಿಪಿ ಚಂದ್ರಶೇಖರ್ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇದರಿಂದ ಕುಮಾರಸ್ವಾಮಿ, ನಿಖಿಲ್ ಮತ್ತು ಶಾಸಕ ಸುರೇಶ್ ಬಾಬು ಮಾಧ್ಯಮಗಳಲ್ಲಿ ಚಂದ್ರಶೇಖರ್ ಅವರ ವಿರುದ್ಧ ಕೆಲವೊಂದು ಆರೋಪ ಮಾಡಿದ್ದರು.
ಈ ಸಂಬಂಧ ಎಡಿಜಿಪಿ ಚಂದ್ರಶೇಖರ್ ಅವರು ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮತ್ತು ಸುರೇಶ್ ಬಾಬು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಪೊಲೀಸರು ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪ ಸಂಬಂಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 223 ಮತ್ತು 224 ಅಡಿ ಎಫ್ಐಆರ್ ದಾಖಲಿಸಿದ್ದರು. ಬಳಿಕ ಕುಮಾರಸ್ವಾಮಿ, ಈ ಪ್ರಕರಣವನ್ನು ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.