ರೈತರಿಂದ ಪ್ರತಿಭಟನೆImage Credit source: Tv9 Kannada
ಮಂಡ್ಯ, ಜೂನ್ 23: ಕೃಷಿ ಉತ್ಪನ್ನಗಳ ವಾಹನಗಳಿಗೆ ಟೋಲ್ ಹಾಕುತ್ತಿರುವ ಆರೋಪ ಹಿನ್ನೆಲೆ ಮಂಡ್ಯ ಜಿಲ್ಲೆಯ ಗಣಂಗೂರು ಬಳಿಯ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯ ಟೋಲ್ ಪ್ಲಾಜಾ ಬಳಿ ಭಾರಿ ಹೈಡ್ರಾಮಾವೇ ನಡೆದಿದೆ. ಕಾನೂನು ಬಾಹಿರವಾಗಿ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ರೈತರು, ಎಕ್ಸ್‌ಪ್ರೆಸ್ ವೇ ಮಾಡಲು ರೈತರು ಭೂಮಿ ಕೊಟ್ಟಿದ್ದರು. ಈಗ ಅದೇ ರೈತರ ಉತ್ಪನ್ನಗಳ ವಾಹನಕ್ಕೂ ಟೋಲ್ ಕಟ್ಟಿ ಅಂದ್ರೆ ಹೇಗೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪಂಜಾಬ್ ಮಾದರಿ ಟೋಲ್ ಸಂಗ್ರಹಕ್ಕೆ ಆಗ್ರಹ
ಕೇಂದ್ರ ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿದ್ದಲ್ಲದೆ, ಟೋಲ್ ಸ್ಟಿಕ್‌ಗಳನ್ನು ಮುರಿದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿರುವ ರೈತರು, ಪಂಜಾಬ್ ಮಾದರಿ ಟೋಲ್ ಸಂಗ್ರಹಕ್ಕೆ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ. ಈ ವೇಳೆ ಟೋಲ್ ಕಟ್ಟಬೇಡಿ ಎಂದು ವಾಹನಗಳನ್ನು ರೈತರು ಕಳುಹಿಸಿದ್ದು, ಪ್ರತಿಭಟನಾಕಾರರ ಮನವೊಲಿಕೆಗೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಮುತ್ತಿಗೆ ಹಿಂಪಡೆದು ತೆರಳುವಂತೆ ಮನವಿಯನ್ನೂ ಮಾಡಿದ್ದಾರೆ.
ಇದನ್ನೂ ಓದಿ: ಕಾವೇರಿ ಕೊಳ್ಳದಲ್ಲಿ ಕೈ ಕೊಟ್ಟ ಮುಂಗಾರು, ಈ ಬಾರಿ ಬೆಳೆಗಳಿಗಿಲ್ಲ ಕೆಆರ್‌ಎಸ್ ನೀರು
ಅಧಿಕಾರಿಗೆ ಪ್ರತಿಭಟನಾ ನಿರತರಿಂದ ತರಾಟೆ
ಪ್ರತಿಭಟನೆ ಜಾಗಕ್ಕೆ ಬಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯನ್ನು ರೈತರು ತರಾಟೆಗೆ ಪಡೆದಿದ್ದಾರೆ. ಕನ್ನಡ ಬರಲ್ಲ ಎಂದು ಅಧಿಕಾರಿ ಹೇಳಿದ ಪರಿಣಾಮ ಗರಂ ಆದ ಅನ್ನದಾತರು, ಇಲ್ಲಿನ ಭಾಷೆ ಬರದ ಅಧಿಕಾರಿಯನ್ನು ಏಕೆ ಮಂಡ್ಯದಲ್ಲಿ ಇಟ್ಟುಕೊಂಡಿದ್ದೀರಿ. ಕೂಲಿ ಮಾಡೋಕೆ ಇಲ್ಲಿಯವರು ಬೇಕು. ಅಧಿಕಾರಿಗಳು ಮಾತ್ರ ಬೇರೆ ಭಾಷೆಯವರು ಬೇಕಾ? ಮೊದಲು ಕನ್ನಡ ಬರುವ ಅಧಿಕಾರಿಯನ್ನು ಕರೆಸಿ ಎಂದು ಪಟ್ಟು ಹಿಡಿದ ಪ್ರಸಂಗವೂ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
