ಬೆಂಗಳೂರು, ಜೂ.10: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (KIADB) ಇನ್ನು ಮುಂದೆ ಜಮೀನು ಭೂಸ್ವಾಧೀನ ಮತ್ತು ನಿವೇಶನ ಮಂಜೂರಾತಿಯ ಪ್ರತಿಯೊಂದು ಪ್ರಕ್ರಿಯೆಯೂ ಸಂಪೂರ್ಣವಾಗಿ ಹೈಟೆಕ್ ಆಗಲಿದೆ. ಕೆಐಎಡಿಬಿ ವ್ಯಾಪ್ತಿಯ ಎಲ್ಲಾ ಸೇವೆಗಳನ್ನು ಮುಂದಿನ 100 ದಿನಗಳ ಒಳಗಾಗಿ ಸಂಪೂರ್ಣವಾಗಿ ಡಿಜಿಟಲೀಕರಣ (Digitization) ಗೊಳಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಗಡುವು ನೀಡಿದ್ದಾರೆ. ಖನಿಜ ಭವನದಲ್ಲಿ ಇಂದು (ಜೂ.10) ನಡೆದ ಕೈಗಾರಿಕಾ ಇಲಾಖೆಯ ಎರಡನೇ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಇ-ಗವರ್ನೆನ್ಸ್ (ಇ-ಆಡಳಿತ) ಇಲಾಖೆಯು ಹೊಂದಿರುವ ‘ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ’ಯ ಅಡಿಯಲ್ಲೇ ಈಗ ರಾಜ್ಯದ ಹಳೆಯ ಮತ್ತು ಹೊಸ ಕೈಗಾರಿಕಾ ಪ್ರದೇಶಗಳಲ್ಲಿನ ನಿವೇಶನಗಳ ಪ್ರತಿಯೊಂದು ವಿವರವನ್ನೂ ಡಿಜಿಟಲೀಕರಣ ಮಾಡಲಾಗುವುದು. ಈ ಹೊಸ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಪ್ರತಿ ನಿವೇಶನಕ್ಕೆ ಸಂಬಂಧಿಸಿದಂತೆ ಒಟ್ಟು 77 ಕಾಲಂಗಳಲ್ಲಿ ಇಂಚಿಂಚೂ ಮಾಹಿತಿಯನ್ನು ಸಂಗ್ರಹಿಸಿಡಲಾಗುತ್ತದೆ.
ಈ ಮಹತ್ವದ ಸುಧಾರಣೆಯಿಂದಾಗಿ ಕೈಗಾರಿಕಾ ನಿವೇಶನದ ಮಂಜೂರಾತಿ, ಅದರ ಸದ್ಯದ ಸ್ಥಿತಿಗತಿ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆ, ಮಾಡಲಾಗಿರುವ ಒಟ್ಟು ಹೂಡಿಕೆ, ಸೃಷ್ಟಿಯಾಗಿರುವ ಉದ್ಯೋಗಾವಕಾಶಗಳು, ಭೂಮಿ ಕಳೆದುಕೊಂಡ ಸಂತ್ರಸ್ತ ರೈತರಿಗೆ ಕೊಟ್ಟಿರುವ ಪರಿಹಾರದ ಮೊತ್ತ, ಕೋರ್ಟ್ ಕೇಸುಗಳ ಇತಿಹಾಸ ಹಾಗೂ ಹೂಡಿಕೆದಾರರಿಗೆ ನೀಡಿರುವ ಕಾಲಾವಕಾಶದಂತಹ ಎಲ್ಲಾ ಪ್ರಮುಖ ವಿವರಗಳು ಇನ್ನು ಮುಂದೆ ಒಂದೇ ಕ್ಲಿಕ್ನಲ್ಲಿ ಕ್ಷಣಾರ್ಧದಲ್ಲಿ ಲಭ್ಯವಾಗಲಿವೆ. ಈ ಹಿಂದೆ ಕೆಐಎಡಿಬಿಯಲ್ಲಿ ಸರಿಯಾದ ಡಿಜಿಟಲ್ ದಾಖಲೆಗಳು ಇಲ್ಲದ ಕಾರಣ, ಒಂದೇ ಜಮೀನಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎರಡೆರಡು ಬಾರಿ ಪರಿಹಾರದ ಹಣ ನೀಡಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿದ ಹಲವು ಪ್ರಕರಣಗಳು ಕಂಡುಬಂದಿದೆ. ಆದರೆ, ಹೊಸ ವ್ಯವಸ್ಥೆಯಿಂದ ಸಂಪೂರ್ಣ ಪಾರದರ್ಶಕತೆ ಬರಲಿದ್ದು, ಇಂತಹ ಅವ್ಯವಹಾರಗಳಿಗೆ ಶಾಶ್ವತ ಬ್ರೇಕ್ ಬೀಳಲಿದೆ. ಜೊತೆಗೆ, ಹೂಡಿಕೆದಾರರು ತಾವು ಇದ್ದ ಜಾಗದಿಂದಲೇ ತಮಗೆ ಬೇಕಾದ ಅಧಿಕೃತ ಮಾಹಿತಿ ಪಡೆಯಬಹುದಾಗಿದ್ದು, ಕೆಐಎಡಿಬಿ ಕಚೇರಿಗಳಲ್ಲಿ ಮಧ್ಯವರ್ತಿಗಳ (ಬ್ರೋಕರ್ಸ್) ಹಾವಳಿ ಸಂಪೂರ್ಣವಾಗಿ ನಿಲ್ಲಲಿದೆ.
ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: 1,280 ವೈದ್ಯರು, ನರ್ಸ್ಗಳ ಭರ್ತಿಗೆ ಯು.ಟಿ. ಖಾದರ್ ಆದೇಶ
ರಾಜ್ಯಾದ್ಯಂತ ಸದ್ಯ 224 ಕೈಗಾರಿಕಾ ಪ್ರದೇಶಗಳಿದ್ದು, ಇಲ್ಲಿರುವ ಸಾವಿರಾರು ನಿವೇಶನಗಳ ಹಂಚಿಕೆ ಮಾಹಿತಿಯನ್ನು ಕೇವಲ ಒಂದು ತಿಂಗಳೊಳಗೆ ಸ್ಕ್ಯಾನ್ ಮಾಡಿ ಮುಗಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ. ಈ ದತ್ತಾಂಶವನ್ನು ಬಳಸಿಕೊಂಡು ಕೆಐಎಡಿಬಿಗೆ ಒಪ್ಪುವ ಸಾಫ್ಟ್ವೇರ್ ಅಭಿವೃದ್ಧಿಪಡಿಸಿ, ಬಳಿಕ ಅದನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ‘ಇ-ಸ್ವತ್ತು’ ತಂತ್ರಾಂಶದ ಜತೆ ಜೋಡಣೆ ಮಾಡಲಾಗುತ್ತದೆ. ಇದರಿಂದ ಕೈಗಾರಿಕೆಗಳಿಗೆ ಆನ್ಲೈನ್ ಮೂಲಕವೇ ಸುಲಭವಾಗಿ ‘ಇ-ಖಾತಾ’ ನೀಡಲು ಅನುಕೂಲವಾಗುತ್ತದೆ. ಈ ಉನ್ನತ ಮಟ್ಟದ ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯಲ್, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ ಹಾಗೂ ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
