
ಪ್ರೇಮ್ (prem) ನಿರ್ದೇಶಿಸಿ, ಧ್ರುವ ಸರ್ಜಾ ನಟಿಸಿರುವ ‘ಕೆಡಿ’ ಸಿನಿಮಾದ ‘ಸರ್ಸೆ ಸೆರಗ ಸರ್ಸೆ’ ಹಾಡು ಇತ್ತೀಚೆಗಷ್ಟೆ ಬಿಡುಗಡೆ ಆಯ್ತು. ಕನ್ನಡದಲ್ಲಿ ಮಾತ್ರವೇ ಅಲ್ಲದೆ ಹಿಂದಿ ಸೇರಿದಂತೆ ಇನ್ನೂ ಹಲವು ಭಾಷೆಗಳಲ್ಲಿ ಸಿನಿಮಾದ ಹಾಡು ಬಿಡುಗಡೆ ಆಗಿದೆ. ಆದರೆ ಈ ಹಾಡಿನ ಸಾಹಿತ್ಯ ತೀರ ಅಶ್ಲೀಲವಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ದೆಹಲಿ, ಮುಂಬೈ ನಗರಗಳಲ್ಲಿ ಹಾಡಿನ ವಿರುದ್ಧ, ನಿರ್ದೇಶಕ ಪ್ರೇಮ್ ಸೇರಿದಂತೆ ಚಿತ್ರತಂಡದ ಇತರೆ ಸದಸ್ಯರ ವಿರುದ್ಧ ದೂರುಗಳು ದಾಖಲಾಗಿವೆ. ಇದೀಗ ಪ್ರೇಮ್ ಅವರ ಪತ್ನಿ ರಕ್ಷಿತಾ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
‘ಕೆಡಿ’ ಸಿನಿಮಾದ ಹಾಡು ‘ಸರಿ’ ಎಂದು ಹೇಳುತ್ತಿಲ್ಲ ಎಂದು ಹೇಳುತ್ತಲೇ ತಮ್ಮ ಪತಿ, ನಿರ್ದೇಶಕ ಪ್ರೇಮ್ ಅವರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದಿದ್ದಾರೆ ರಕ್ಷಿತಾ, ಪರ ಭಾಷೆ ಹಾಡುಗಳ ಉದಾಹರಣೆ ನೀಡಿರುವ ರಕ್ಷಿತಾ ಪ್ರೇಮ್, ‘ಡ್ರೀಮಂ ವೇಕಪಂ’ ಹಿಂದಿಯ ‘ಚೋಲಿ ಕೆ ಪೀಚೆ ಕ್ಯಾ ಹೈ’ ಅಂಥಹಾ ನೂರಾರು ಹಾಡುಗಳು ಚಿತ್ರರಂಗದಲ್ಲಿ ಬಂದಿವೆ. ಒಂದು ಸಿನಿಮಾದಲ್ಲಿಯಂತೂ ಇಡೀ ಸಿನಿಮಾನಲ್ಲಿಯೇ ಸೆಕ್ಸ್ ಬಗ್ಗೆ ಮಾತನಾಡಲಾಗಿದೆ. ಆದರೆ ಅದೆಲ್ಲವನ್ನೂ ಬಿಟ್ಟು ಇದೀಗ ಒಂದು ಹಾಡನ್ನು ದೊಡ್ಡ ಸುದ್ದಿ ಮಾಡಲಾಗುತ್ತಿದೆ’ ಎಂದಿದ್ದಾರೆ ರಕ್ಷಿತಾ.
‘ಈ ಒಂದು ಹಾಡನ್ನು ಇರಿಸಿಕೊಂಡು ಪ್ರೇಮ್ ಅನ್ನು ದೂಷಿಸಲಾಗುತ್ತಿದೆ. ಅವರು ಹಿಂದೆ ಮಾಡಿರುವ ಸಿನಿಮಾ, ಬರೆದಿರುವ ಹಾಡುಗಳನ್ನು ನಿರ್ಲಕ್ಷಿಸಲಾಗುತ್ತಿದೆ ಅಲ್ಲದೆ, ಹಿಂದಿನ ಅವರ ಕೆಲಸಗಳ ಬಗ್ಗೆಯೂ ಟೀಕೆ ವ್ಯಕ್ತಪಡಿಸಲಾಗುತ್ತಿದೆ. ಅವರ ಸಿನಿಮಾ ಮತ್ತು ಪ್ರಚಾರ ಶೈಲಿಯನ್ನು ಗಿಮಿಕ್ ಎಂದು ಕರೆಯಲಾಗುತ್ತಿದೆ. ಕೆಲವು ಸಿನಿಮಾ ಸರಿಯಾಗಿ ಪ್ರದರ್ಶನ ಕಾಣಲಿಲ್ಲ ಎಂದ ಮಾತ್ರಕ್ಕೆ ಅವರು ಕೆಟ್ಟ ನಿರ್ದೇಶಕ ಎಂದಲ್ಲ. ನಿಮಗೆ ಅವರನ್ನು ಪ್ರಶ್ನೆ ಮಾಡುವ, ಟೀಕೆ ಮಾಡುವ ಹಕ್ಕು ಖಂಡಿತ ಇದೆ ಆದರೆ ಅವರನ್ನು ನಿಂದಿಸುವ ಹಕ್ಕು ಯಾರಿಗೂ ಇಲ್ಲ’ ಎಂದಿದ್ದಾರೆ ರಕ್ಷಿತಾ.
ಇದನ್ನೂ ಓದಿ:‘ಕೆಡಿ’ ಹಾಡು ವಿವಾದ: ಪ್ರೇಮ್ ವಿರುದ್ಧ ದೆಹಲಿ, ಮುಂಬೈನಲ್ಲಿ ದೂರು
‘ಈಗಿನ ಚಿತ್ರರಂಗದಲ್ಲಿ ಪ್ರತಿದಿನವೂ ಇಂಥಹಾ ಹಾಡುಗಳನ್ನು ಮಾಡಲಾಗುತ್ತಿದೆ. ಪ್ರತಿದಿನವೂ ಐಟಂ ಹಾಡುಗಳ ಚಿತ್ರೀಕರಣ ಆಗುತ್ತಿವೆ. ಬಹುಷಃ ಸಿನಿಮಾಗಳಲ್ಲಿ ಈಗಿನಷ್ಟು ರಕ್ತಪಾತವನ್ನು ಪ್ರೇಕ್ಷಕ ಎಂದೂ ನೋಡಿರಲಿಲ್ಲ. ಆದರೆ ಪ್ರೇಮ್ ಮಾಡಿದಾಗ ಅದು ತಪ್ಪಾಗಿ ಕಂಡಿದೆ. ಅವರ ಶೈಲಿಯಲ್ಲಿ ಗಿಮಿಕ್ ಎಂದು ಟೀಕಿಸಲಾಗುತ್ತದೆ. ನಾನು ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ಈಗಿನ ಕಾಲಘಟ್ಟದಲ್ಲಿ ಒಂದು ಸಿನಿಮಾವನ್ನು ಟಿವಿ, ಒಟಿಟಿಗೆ ಮಾರಾಟ ಮಾಡುವುದು ಬಹಳ ಕಷ್ಟ, ಅದಕ್ಕೆ ದೊಡ್ಡ ಮಟ್ಟದ ಪ್ರಚಾರ ಮಾಡಬೇಕು, ಆ ಕಾರ್ಯವನ್ನು ಪ್ರೇಮ್ ತಮ್ಮದೇ ಶೈಲಿಯಲ್ಲಿ ಮಾಡುತ್ತಾ ಬಂದಿದ್ದಾರೆ, ಯಶಸ್ಸು ಸಹ ಕಂಡಿದ್ದಾರೆ. ಅದು ನಿಮಗೆ ಗಿಮಿಕ್ ಎನಿಸಬಹುದು ಆದರೆ ಅದು ಪರಿಣಾಮಕಾರಿ ಆಗಿದೆ’ ಎಂದು ಪತಿಯನ್ನು ಕೊಂಡಾಡಿದ್ದಾರೆ ನಟಿ.
‘ನನ್ನ ದೇಹದ ತೂಕದ ಕಾರಣಕ್ಕೆ ನನ್ನನ್ನು ಪ್ರತಿದಿನ ಟ್ರೋಲ್ ಮಾಡಲಾಗುತ್ತದೆ. ಆದರೆ ಅಷ್ಟೇ ಪ್ರೀತಿಯೂ ಸಹ ನನಗೆ ಸಿಕ್ಕಿದೆ. ನಾವು ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ಎಲ್ಲವನ್ನೂ ನಾವು ನಿಭಾಯಿಸುತ್ತೇವೆ. ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಶಕ್ತವಾಗಿದ್ದೇವೆ. ಇದು ಕೆಟ್ಟ ಸಮಯ ಅಷ್ಟೆ, ಎಲ್ಲವೂ ಸರಿ ಹೋಗಲಿದೆ, ನಾವು ಎಲ್ಲವನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದ್ದೇವೆ’ ಎಂದಿದ್ದಾರೆ ನಟಿ ರಕ್ಷಿತಾ ಪ್ರೇಮ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ