ನಟ ಗೌರಿ ಶಂಕರ್ (Gowri Shankar) ಅವರು ‘ಕೆರೆಬೇಟೆ’ ಸಿನಿಮಾ ಮೂಲಕ ಗಮನ ಸೆಳೆದಿದ್ದರು. ಆ ಬಳಿಕ ಸಣ್ಣ ಬ್ರೇಕ್ ತೆಗೆದುಕೊಂಡ ಅವರು ಈಗ ಹೊಸ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ (Om Sai Prakash) ಜೊತೆ ಗೌರಿ ಶಂಕರ್ ಸಿನಿಮಾ ಮಾಡುತ್ತಿದ್ದಾರೆ. ಇದು ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 106ನೇ ಸಿನಿಮಾ. ಈ ಚಿತ್ರಕ್ಕೆ ‘ಕಾಮನ್ ಮ್ಯಾನ್’ (Common Man) ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು.
‘ಕಾಮನ್ ಮ್ಯಾನ್’ ಸಿನಿಮಾದ ಕಥೆ ಏನು ಎಂಬ ಬಗ್ಗೆ ಚಿತ್ರತಂಡದವರು ಮಾಹಿತಿ ನೀಡಿದರು. ಸಾಮಾನ್ಯ ವ್ಯಕ್ತಿಯೊಬ್ಬ ರಾಜ್ಯದ ಮುಖ್ಯಮಂತ್ರಿಯಾದರೆ ಹೇಗಿರುತ್ತದೆ? ಈ ಎಳೆಯನ್ನು ಇಟ್ಟುಕೊಂಡು ಎನ್. ನರಸಿಂಹಮೂರ್ತಿ ಅವರು ಕಥೆ ಬರೆದು ‘ಸುರಭಿ ಫಿಲ್ಮ್ಸ್’ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡಲಾಯಿತು.
ಸುದ್ದಿಗೋಷ್ಠಿಯಲ್ಲಿ ಓಂ ಸಾಯಿ ಪ್ರಕಾಶ್ ಅವರು ಮಾತನಾಡಿದರು. ‘ಜೀವನದಲ್ಲಿ ಪ್ರತಿಯೊಬ್ಬರಿಗೂ ಏನಾದರೂ ಆಸೆ ಇರುತ್ತೆ. ಈ ಕಥೆಯಲ್ಲಿ ನಾಯಕ ಒಬ್ಬ ಲಾಯರ್. ಅನಿರೀಕ್ಷಿತವಾಗಿ ಅವನು ಮುಖ್ಯಮಂತ್ರಿ ಆಗುತ್ತಾನೆ. ನಂತರ ಅವನು ಏನೇನು ಮಾಡಬಹುದು ಎಂಬುದನ್ನು ಕುತೂಹಲಕರವಾಗಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಕಥೆ ಕೇಳಿದ ಕೂಡಲೇ ಇದು ಶೇಕಡ 100ರಷ್ಟು ಓಪನಿಂಗ್ ತೆಗೆದುಕೊಳ್ಳುತ್ತದೆ ಎನಿಸಿತು. ಇದು ಕಂಟೆಂಟ್ ಸಿನಿಮಾ, ಜಾತ್ರೆ ಸಿನಿಮಾ ಅಲ್ಲ’ ಎಂದು ಅವರು ಹೇಳಿದರು.
ರಂಗಭೂಮಿ ನಂಟು ಹೊಂದಿರುವ ನಿರ್ಮಾಪಕ ಎನ್. ನರಸಿಂಹಮೂರ್ತಿ ಮಾತನಾಡಿ, ‘ಈ ಮೊದಲು ಎರಡು ಚಿತ್ರಗಳನ್ನು ನಿರ್ಮಾಣ ಮಾಡಿದ್ದೆ. ಅದರಿಂದ ಸಾಕಷ್ಟು ಪಾಠವನ್ನೂ ಕಲಿತೆ. ಇದು ನನ್ನ ಮೂರನೇ ಸಿನಿಮಾ. ಇಂಥ ನಿರ್ದೇಶಕರ ಜತೆ ಎಷ್ಟು ಸಿನಿಮಾ ಬೇಕಾದರೂ ಮಾಡಬಹುದು. ಮಾತಿನ ಭಾಗ 40 ದಿನ ಚಿತ್ರೀಕರಣ ಎಂದಿದ್ದರು. ಆದರೆ 32 ದಿನಕ್ಕೇ ಮುಗಿಸಿದರು. ಚಿತ್ರದಲ್ಲಿ ನಾನು ಒಬ್ಬ ಮುಖ್ಯಮಂತ್ರಿಯ ಪಾತ್ರ ಮಾಡಿದ್ದೇನೆ’ ಎಂದರು.
ಇದನ್ನೂ ಓದಿ: ‘ಕೆರೆಬೇಟೆ 100 ಪರ್ಸೆಂಟ್ ಚೆನ್ನಾಗಿದೆ’; ಗೆಳೆಯನ ಸಿನಿಮಾ ನೋಡಿ ಮೆಚ್ಚಿದ ಧ್ರುವ ಸರ್ಜಾ
ಓಂ ಸಾಯಿ ಪ್ರಕಾಶ್ ನಿರ್ದೇಶನದ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಗೌರಿ ಶಂಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದರು. ‘ರಾಜಹಂಸ, ಕೆರೆಬೇಟೆ ನಂತರ ನನ್ನ ಅಭಿನಯದ 3ನೇ ಚಿತ್ರವಿದು. ನಿರ್ದೇಶಕರು ಹಾಕಿಕೊಂಡ ಪ್ಲಾನ್ ಪ್ರಕಾರವೇ ಸಿನಿಮಾ ಮಾಡಿ ಮುಗಿಸಿದ್ದಾರೆ. ಕೆರೆಬೇಟೆ ಬಳಿಕ ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೆ. ಬಯಸಿದಂತಹ ಪಾತ್ರವೇ ಹುಡುಕಿಕೊಂಡು ಬಂತು’ ಎಂದು ಗೌರಿ ಶಂಕರ್ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
