ರಾಕಿಂಗ್ ಸ್ಟಾರ್ ಯಶ್ ಪ್ರತಿ ಬಾರಿ ಹೊಸ ಹೊಸ ಜವಾಬ್ದಾರಿ ಹೊತ್ತು ಸಾಗುತ್ತಿದ್ದಾರೆ. ಅವರ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾ ಕರ್ನಾಟಕದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ರಾಜ್ಯದ ಬಾಕ್ಸ್ ಆಫೀಸ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ಬಿಡುಗಡೆ ಕಾಣಲು ಈ ಸಿನಿಮಾ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಭಿಮಾನಿಗಳಲ್ಲಿ ಈಗಾಗಲೇ ಭಾರಿ ಕುತೂಹಲ ಮೂಡಿಸಿರುವ ಈ ಚಿತ್ರವು ಹೊಸ ದಾಖಲೆಯನ್ನು ಬರೆಯಲಿದೆ. ಈ ಚಿತ್ರದ ಮೂಲಕ ಯಶ್ ಅವರು ಡಿಸ್ಟ್ರಿಬ್ಯೂಟರ್ ಕೂಡ ಆಗುತ್ತಿದೆ.
ದೊಡ್ಡ ಸಂಖ್ಯೆಯಲ್ಲಿ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗಲಿದೆ ಎಂದು ವರದಿ ಆಗಿದೆ. ಮೊದಲ ದಿನವೇ ಅತ್ಯಂತ ಹೆಚ್ಚಿನ ಶೋ ಪ್ರದರ್ಶನಗಳನ್ನು ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ರಾಜಧಾನಿ ಬೆಂಗಳೂರು ಒಂದರಲ್ಲೇ ಮೊದಲ ದಿನ ದಾಖಲೆ ಮಟ್ಟದ ಶೋಗಳು ಪ್ರದರ್ಶನ ಕಾಣಲಿವೆ. ಮುಂಜಾನೆ ವಿಶೇಷ ಫ್ಯಾನ್ ಶೋಗಳನ್ನು ಆಯೋಜನೆ ಮಾಡಲಾಗುತ್ತಿದೆ.
ಈ ಬಿಗ್ ಬಜೆಟ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿವೆ. ಈ ಎರಡೂ ಸಂಸ್ಥೆಗಳೇ ಸ್ವತಃ ಕರ್ನಾಟಕದಾದ್ಯಂತ ಸಿನಿಮಾವನ್ನು ವಿತರಣೆ ಮಾಡುತ್ತಿರುವುದು ವಿಶೇಷ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇದು ಅತ್ಯಂತ ಮಹತ್ವಾಕಾಂಕ್ಷೆಯ ಸಿನಿಮಾ ಆಗಿದೆ.
ಗೀತು ಮೋಹನ್‌ದಾಸ್ ಅವರು ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಏಕಕಾಲದಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದೆ. ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದೆ.
ಇದನ್ನೂ ಓದಿ: ಗೂಗ್ಲಿಯಲ್ಲಿ ಯಶ್ಗೆ ಬರೆದ ಡೈಲಾಗ್ ನಿಜವಾಯ್ತು; ಜಾಗತಿಕ ಮಟ್ಟದಲ್ಲಿ ಟಾಕ್ಸಿಕ್ ಹವಾ
ವೆಂಕಟ್ ಕೆ ನಾರಾಯಣ್ ಹಾಗೂ ನಟ ಯಶ್ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಯಶ್ ನಾಯಕನಾಗಿ ನಟಿಸಿದ್ದು, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ 2026ರ ಆಗಸ್ಟ್ 26ರಂದು ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
