ಬೆಂಗಳೂರು, ಜುಲೈ 05: ಬಿಜೆಪಿ ಹಿರಿಯ ಮುಖಂಡರಾದ ಎಸ್.ಆರ್. ವಿಶ್ವನಾಥ್ ಮತ್ತು ಕೆ. ಸುಧಾಕರ್ ನಡುವೆ ಇತ್ತೀಚೆಗೆ ಸಾರ್ವಜನಿಕವಾಗಿ ವ್ಯಕ್ತವಾಗಿದ್ದ ವೈಯಕ್ತಿಕ ಭಿನ್ನಾಭಿಪ್ರಾಯಗಳು ಇದೀಗ ಪಕ್ಷದ ಹಿರಿಯರ ಮಧ್ಯಸ್ಥಿಕೆಯಿಂದ ಬಗೆಹರಿದಿದೆ. ಈ ಕುರಿತು ಮಾತನಾಡಿದ ಎಸ್.ಆರ್. ವಿಶ್ವನಾಥ್, ರಾಜ್ಯ ಅಧ್ಯಕ್ಷ ಪ್ರಲ್ಹಾದ್ ಜೋಶಿ ಮತ್ತು ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಅವರು ನಮ್ಮನ್ನ ಕರೆದು ಮಾತುಕತೆ ಮಾಡಿದ್ದಾರೆ ಎಂದರು. ಮಾಧ್ಯಮಗಳ ಮೂಲಕ ಹೊರಹೊಮ್ಮಿದ್ದ ವೈಯಕ್ತಿಕ ಹೇಳಿಕೆಗಳಿಗೆ ಅಂತ್ಯ ಹಾಡಬೇಕು ಎಂದು ಪಕ್ಷದ ನಾಯಕರು ಸೂಚಿಸಿದ್ದರು. ಇದೀಗ ಎಲ್ಲವನ್ನೂ ಸರಿಪಡಿಸಲಾಗಿದ್ದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದರು. ಮುಂದೆ ನಾವೆಲ್ಲಾ ಒಟ್ಟಾಗಿ ಸಾಗಲಿದ್ದೇವೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾನು, ಕೆ. ಸುಧಾಕರ್ ಮತ್ತು ಇತರ ಎಲ್ಲಾ ಸಂಸದರು, ನಾಯಕರು ಒಗ್ಗೂಡಿ ಕೆಲಸ ಮಾಡುತ್ತೇವೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
