ನವದೆಹಲಿ, ಆಗಸ್ಟ್ 1: ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿ ಕಂತಿನ ರೂಪದಲ್ಲಿ ₹1,09,019 ಕೋಟಿ ತೆರಿಗೆ ಪಾಲು (Tax Devolution) ಹಣವನ್ನು ಬಿಡುಗಡೆ ಮಾಡಿದೆ. ಆಗಸ್ಟ್ 10 ರಂದು ಬಿಡುಗಡೆಯಾಗಬೇಕಿರುವ ನಿಯಮಿತ ಮಾಸಿಕ ತೆರಿಗೆ ಹಂಚಿಕೆಯ ಹೊರತಾಗಿ, ಈ ಮುಂಗಡ ಕಂತನ್ನು (Advance Instalment) ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.
ರಾಜ್ಯಗಳ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುವುದು ಹಾಗೂ ಬಂಡವಾಳ ವಿನಿಯೋಗ ಮತ್ತು ಅಭಿವೃದ್ಧಿ ವೆಚ್ಚಗಳನ್ನು (Capital and Developmental Expenditure) ವೇಗಗೊಳಿಸುವ ಉದ್ದೇಶದಿಂದ ಈ ಹಣವನ್ನು ಬಿಡುಗಡೆ ಮಾಡಲಾಗಿದೆ.
ಪ್ರಸ್ತುತ ನಿಯಮಗಳ ಪ್ರಕಾರ, ಕೇಂದ್ರ ಸರ್ಕಾರವು ಸಂಗ್ರಹಿಸುವ ಒಟ್ಟು ತೆರಿಗೆಯಲ್ಲಿ ಶೇ. 41 ರಷ್ಟು ಭಾಗವನ್ನು ಹಣಕಾಸು ವರ್ಷದಲ್ಲಿ 14 ಕಂತುಗಳ ಮೂಲಕ ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ.
ಇದನ್ನೂ ಓದಿ: ಜುಲೈನಲ್ಲಿ ಭರ್ಜರಿ ಜಿಎಸ್ಟಿ ಕಲೆಕ್ಷನ್ಸ್; ಸರ್ಕಾರದ ಖಜಾನೆ ಮುಟ್ಟಿದ ತೆರಿಗೆ ಮೊತ್ತ 2 ಲಕ್ಷ ಕೋಟಿ ರೂಗೂ ಅಧಿಕ
ಕರ್ನಾಟಕಕ್ಕೆ ಸಿಕ್ಕಿದ್ದು 4,505 ಕೋಟಿ ರೂ, ಉ.ಪ್ರ.ಗೆ ಗರಿಷ್ಠ ಪಾಲು
ನಿರೀಕ್ಷೆಯಂತೆ ಉತ್ತರಪ್ರದೇಶಕ್ಕೆ ಅತಿಹೆಚ್ಚು ತೆರಿಗೆ ಪಾಲು ಸಿಕ್ಕಿದೆ. ಆ ರಾಜ್ಯಕ್ಕೆ 19,208 ಕೋಟಿ ರೂ ಬಂದಿದೆ. ಇತರ ಹಿಂದುಳಿದ ರಾಜ್ಯಗಳೆನಿಸಿರುವ ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳಕ್ಕೂ ಹೆಚ್ಚು ಟ್ಯಾಕ್ಸ್ ಆದಾಯವನ್ನು ಕೇಂದ್ರ ಸರ್ಕಾರ ವರ್ಗಾಯಿಸಿದೆ. ವಿವಿಧ ರಾಜ್ಯಗಳಿಗೆ ಸಿಕ್ಕ ತೆರಿಗೆ ಪಾಲಿನ ವಿವರ ಇಂತಿದೆ:
- ಉತ್ತರ ಪ್ರದೇಶ: ₹19,208
- ಬಿಹಾರ: ₹10,845
- ಮಧ್ಯ ಪ್ರದೇಶ: ₹8,010
- ಪಶ್ಚಿಮ ಬಂಗಾಳ: ₹7,866
- ಮಹಾರಾಷ್ಟ್ರ: ₹7,022
- ರಾಜಸ್ಥಾನ: ₹6,460
- ಒಡಿಶಾ: ₹4,819
- ಆಂಧ್ರ ಪ್ರದೇಶ: ₹4,597
- ಕರ್ನಾಟಕ: ₹4,504
- ತಮಿಳುನಾಡು: ₹4,466
- ಗುಜರಾತ್: ₹4,094
ಇದನ್ನೂ ಓದಿ: ಎಥನಾಲ್ ಮಿಶ್ರಣ ಇಲ್ಲದಿದ್ದರೆ ಪೆಟ್ರೋಲ್ ಬೆಲೆ ಈ ಹೊತ್ತಿಗೆ 125 ರೂಗೆ ಏರಿರುತ್ತಿತ್ತು: ಕೇಂದ್ರ ಸರ್ಕಾರ
ತೆರಿಗೆ ಹಂಚಿಕೆ ಹೇಗೆ?
ಭಾರತದಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ಒಟ್ಟು ತೆರಿಗೆ ಆದಾಯವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಾಗೂ ರಾಜ್ಯ ರಾಜ್ಯಗಳ ನಡುವೆ ಹಂಚಿಕೆ ಮಾಡಲು ಹಣಕಾಸು ಆಯೋಗ (Finance Commission) ಒಂದು ಸೂತ್ರವನ್ನು ರೂಪಿಸುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ 15ನೇ ಹಣಕಾಸು ಆಯೋಗದ ಪ್ರಕಾರ, ಕೇಂದ್ರದ ಒಟ್ಟು ತೆರಿಗೆ ಆದಾಯದ (Divisible Pool) 41% ಭಾಗವನ್ನು ರಾಜ್ಯಗಳಿಗೆ ನೀಡಲಾಗುತ್ತದೆ. ಈ 41% ಹಣವನ್ನು (Vertical Devolution) ಪ್ರತಿಯೊಂದು ರಾಜ್ಯಕ್ಕೂ ಹೇಗೆ ವಿಂಗಡಿಸಬೇಕು ಎಂಬುದಕ್ಕೆ ಈ ಕೆಳಗಿನ ಮಾನದಂಡಗಳನ್ನು (Weightage) ಬಳಸಲಾಗುತ್ತದೆ:
15ನೇ ಹಣಕಾಸು ಆಯೋಗದ ಹಂಚಿಕೆ ಸೂತ್ರ
ರಾಜ್ಯಗಳ ಆದಾಯ ಅಂತರ, ಜನಸಂಖ್ಯೆ, ವಿಸ್ತೀರ್ಣ, ಜನಸಂಖ್ಯೆ ನಿರ್ವಹಣೆ, ಪರಿಸರ ಮತ್ತು ತೆರಿಗೆ ಶಿಸ್ತು ಅಂಶಗಳ ಆಧಾರದ ಮೇಲೆ ರಾಜ್ಯಗಳಿಗೆ ತೆರಿಗೆ ಹಂಚಿಕೆ (Horizontal Devolution) ಮಾಡಲಾಗುತ್ತದೆ. ಇಲ್ಲಿ ಆದಾಯ ಅಂತರಕ್ಕೆ ಶೇ. 45ರಷ್ಟು ತೂಕ ಇರುತ್ತದೆ. ತೆರಿಗೆ ಶಿಸ್ತಿಗೆ ಕನಿಷ್ಠ ಶೇ. 2.5 ವೈಟೇಜ್ ಕೊಡಲಾಗಿದೆ.
ಇಲ್ಲಿ ಆದಾಯ ಅಂತರ ಎಂದರೆ, ಅತಿ ಹೆಚ್ಚು ತಲಾ ಆದಾಯವಿರುವ ರಾಜ್ಯಕ್ಕಿಂತ ಇತರ ರಾಜ್ಯಗಳ ಆದಾಯ ಎಷ್ಟು ಹಿಂದುಳಿದಿದೆ ಎಂದು. ಒಂದು ರಾಜ್ಯವು ಈ ಲೆಕ್ಕಾಚಾರದಲ್ಲಿ ಅತಿ ಹಿಂದುಳಿದಿದ್ದರೆ ಅತಿ ಹೆಚ್ಚು ತೆರಿಗೆ ಪಾಲು ಸಿಗುತ್ತದೆ. ಜನಸಂಖ್ಯೆ ಹೆಚ್ಚು ಇರುವ ರಾಜ್ಯಗಳಿಗೂ ಹೆಚ್ಚಿನ ತೆರಿಗೆ ಪಾಲು ಸಿಗುತ್ತದೆ. ಈ ಕಾರಣಕ್ಕೆ ದಕ್ಷಿಣ ರಾಜ್ಯಗಳಿಗಿಂತ ಉತ್ತರದ ರಾಜ್ಯಗಳಿಗೆ ಹೆಚ್ಚಿನ ಟ್ಯಾಕ್ಸ್ ಹಂಚಿಕೆ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
