ಬೆಂಗಳೂರು, ಜುಲೈ 04: ದೇಶದಲ್ಲಿ ಜಲ ಸಂರಕ್ಷಣೆ ಮತ್ತು ನೀರಿನ ಸಮರ್ಪಕ ನಿರ್ವಹಣೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯವು ‘7ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು’ (7th National Water Awards) ಘೋಷಿಸಿದೆ. ‘ಜಲ ಸಮೃದ್ಧ ಭಾರತ’ದ ಗುರಿ ಸಾಧನೆಗಾಗಿ ಶ್ರಮಿಸುತ್ತಿರುವ ಸಂಸ್ಥೆಗಳು ಹಾಗೂ ಘಟಕಗಳನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಮುಖ್ಯ ಉದ್ದೇಶವಾಗಿದೆ.
ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಕೆ
ಅರ್ಹ ಆಸಕ್ತರು ಗೃಹ ವ್ಯವಹಾರಗಳ ಸಚಿವಾಲಯದ ಅಧಿಕೃತ ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ (www.awards.gov.in) ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 2026ರ ಆಗಸ್ಟ್ 28 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ಜಾಲತಾಣ www.jalshakti-dowr.gov.in ಗೆ ಭೇಟಿ ನೀಡಬಹುದು.
ಪ್ರಶಸ್ತಿಯ ವಿಭಾಗಗಳು ಮತ್ತು ಅರ್ಹತೆ
ಜಲ ಸಂರಕ್ಷಣೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ರಾಜ್ಯಗಳು, ಜಿಲ್ಲೆಗಳು, ನಗರ ಸ್ಥಳೀಯ ಸಂಸ್ಥೆಗಳು, ಅಣೆಕಟ್ಟು ಮಾಲೀಕತ್ವದ ಏಜೆನ್ಸಿಗಳು ಹಾಗೂ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಅಡಿ ಕೆಲಸ ಮಾಡಿರುವ ಕೈಗಾರಿಕೆಗಳು ಈ ಪ್ರಶಸ್ತಿಗೆ ಅರ್ಹವಾಗಿವೆ.
ಜಲಸಂಪನ್ಮೂಲ ನಿರ್ವಹಣೆ, ‘ಜಲ ಸಂಚಯ್ ಜಲ ಭಾಗಿದಾರಿ’ (JSJB) ಮತ್ತು ‘ಜಲ ಜೀವನ ಮಿಷನ್’ (JJM) ಉಪ-ವರ್ಗಗಳ ಅಡಿಯಲ್ಲಿ ತಲಾ 3 ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ 5 ವಲಯಗಳಿಂದ ತಲಾ 3 ರಂತೆ ಒಟ್ಟು 15 ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ. 5 ವಲಯಗಳಿಂದ ತಲಾ ಒಂದರಂತೆ 5 ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅತ್ಯುತ್ತಮ ಯೋಜನೆ ಅನುಷ್ಠಾನ ಹಾಗೂ ಜಲ ಕ್ಷೇತ್ರದಲ್ಲಿ CSR ಉಪಕ್ರಮ ಕೈಗೊಂಡ ಕೈಗಾರಿಕೆಗಳಿಗೆ ತಲಾ 3 ಪ್ರಶಸ್ತಿಗಳನ್ನು ಮೀಸಲಿಡಲಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಸ್ವೀಕರಿಸಲಾದ ಅರ್ಜಿಗಳನ್ನು ಮೊದಲು ಸ್ಕ್ರೀನಿಂಗ್ ಕಮಿಟಿ ಪರಿಶೀಲಿಸಿ ಶಾರ್ಟ್‌ಲಿಸ್ಟ್ ಮಾಡುತ್ತದೆ. ನಂತರ ತೀರ್ಪುಗಾರರ ಸಮಿತಿಯ ಶಿಫಾರಸಿನ ಮೇರೆಗೆ ಜಲಶಕ್ತಿ ಸಚಿವರ ಅನುಮೋದನೆಯೊಂದಿಗೆ ವಿಜೇತರನ್ನು ಪ್ರಕಟಿಸಲಾಗುತ್ತದೆ. ನವದೆಹಲಿಯಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಅಥವಾ ಉಪರಾಷ್ಟ್ರಪತಿಗಳು ವಿಜೇತರಿಗೆ ಟ್ರೋಫಿ ಮತ್ತು ಪ್ರಶಂಸಾಪತ್ರವನ್ನು ಪ್ರದಾನ ಮಾಡಲಿದ್ದಾರೆ. 2018 ರಲ್ಲಿ ಆರಂಭವಾದ ಈ ಜಲ ಪ್ರಶಸ್ತಿ ಆವೃತ್ತಿಯು ಇದೀಗ ಯಶಸ್ವಿಯಾಗಿ 7ನೇ ವರ್ಷಕ್ಕೆ ಕಾಲಿಟ್ಟಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
