ಮುಂಬರುವ ಬಾಂಗ್ಲಾದೇಶf ಪ್ರವಾಸಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕೇಂದ್ರ ಸರ್ಕಾರದ ಅನುಮತಿ ಕೇಳಲು ಮುಂದಾಗಿದೆ. ಉಭಯ ದೇಶಗಳ ನಡುವಿನ ಇತ್ತೀಚಿನ ರಾಜಕೀಯ ಉದ್ವಿಗ್ನತೆ ಮತ್ತು ಭದ್ರತಾ ಆತಂಕಗಳಿಂದಾಗಿ ಕ್ರಿಕೆಟ್ ಸಂಬಂಧದಲ್ಲಿ ಏರುಪೇರಾಗಿದೆ. ಈ ಸೂಕ್ಷ್ಮ ಸನ್ನಿವೇಶದಲ್ಲಿ, ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದರೆ ಮಾತ್ರ ಟೀಮ್ ಇಂಡಿಯಾ ಬಾಂಗ್ಲಾದೇಶಕ್ಕೆ ಪ್ರಯಾಣಿಸಲಿದೆ. ಹೀಗಾಗಿ ಬಿಸಿಸಿಐನ ಈ ನಡೆ ಈಗ ಕ್ರಿಕೆಟ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ರಾಜತಾಂತ್ರಿಕ ಉದ್ವಿಗ್ನತೆ:
ಕಳೆದ ಕೆಲವು ತಿಂಗಳುಗಳಿಂದ ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳ ನಡುವೆ ತೀವ್ರ ಭಿನ್ನಾಭಿಪ್ರಾಯಗಳು ಮೂಡಿವೆ. ಮೂಲತಃ ಈ ಸರಣಿಯು 2025ರ ಆಗಸ್ಟ್‌ನಲ್ಲಿ ನಡೆಯಬೇಕಿತ್ತು. ಆದರೆ ಬಾಂಗ್ಲಾದೇಶದಲ್ಲಿದ್ದ ರಾಜಕೀಯ ಅಸ್ಥಿರತೆ ಮತ್ತು ಭದ್ರತಾ ಆತಂಕಗಳಿಂದಾಗಿ ಇದನ್ನು ಮುಂದೂಡಲಾಗಿತ್ತು.
ಇತ್ತೀಚೆಗೆ ಐಪಿಎಲ್‌ನ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಲ್ಲಿದ್ದ ಬಾಂಗ್ಲಾದೇಶ್ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಬಿಸಿಸಿಐ ಸೂಚಿಸಿದ ನಂತರ ವಿವಾದ ಮತ್ತಷ್ಟು ಉಲ್ಬಣಿಸಿತು. ಇದಕ್ಕೆ ಪ್ರತಿಯಾಗಿ, ಬಾಂಗ್ಲಾದೇಶ್ ಸರ್ಕಾರವು ಭಾರತದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್‌ಗೆ ತನ್ನ ತಂಡವನ್ನು ಕಳುಹಿಸಲು ನಿರಾಕರಿಸಿತು.
ಆ ಬಳಿಕ ಬಾಂಗ್ಲಾದೇಶ್ ತಂಡದ ಸ್ಥಾನದಲ್ಲಿ ಐಸಿಸಿ ಸ್ಕಾಟ್‌ಲ್ಯಾಂಡ್ ತಂಡವನ್ನು ಸೇರಿಸಿತು. ಇದರ ಬೆನ್ನಲ್ಲೇ, ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರವನ್ನು ಸಹ ಅನಿರ್ದಿಷ್ಟಾವಧಿಗೆ ನಿಷೇಧಿಸಲಾಗಿತ್ತು.
ಇದೀಗ ಭಾರತ ಮತ್ತು ಬಾಂಗ್ಲಾದೇಶ್ ನಡುವಿನ ಪ್ರಸ್ತಾವಿತ ವೈಟ್-ಬಾಲ್ ಕ್ರಿಕೆಟ್ ಸರಣಿಯನ್ನು ಸೆಪ್ಟೆಂಬರ್ 2026 ರಲ್ಲಿ ನಡೆಸಲು ಬಾಂಗ್ಲಾದೇಶ್ ಕ್ರಿಕೆಟ್ ಮಂಡಳಿ (BCB) ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ. ಈ ಹಿನ್ನಲೆಯಲ್ಲಿ ಸರಣಿಯಲ್ಲಿ ಭಾಗವಹಿಸಲು ಬಿಸಿಸಿಐ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ.
ಒಂದು ವೇಳೆ ಭಾರತ ಸರ್ಕಾರವು ಈ ಪ್ರವಾಸಕ್ಕೆ ಹಸಿರು ನಿಶಾನೆ ತೋರಿದರೆ, ಬಿಸಿಸಿಐ ತನ್ನ ಸ್ವದೇಶಿ ಕ್ರಿಕೆಟ್ ವೇಳಾಪಟ್ಟಿಯಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಬಾಂಗ್ಲಾ ಪ್ರವಾಸಕ್ಕೆ ಜಾಗ ಮಾಡಿಕೊಡಲು ಅಫ್ಘಾನಿಸ್ತಾನ್ ವಿರುದ್ಧ ನಿಗದಿಯಾಗಿರುವ ಟಿ20 ಸರಣಿಯನ್ನು ಮುಂದೂಡುವ ಸಾಧ್ಯತೆಯಿದೆ. ಆದರೆ, ಸರ್ಕಾರ ಅನುಮತಿ ನಿರಾಕರಿಸಿದರೆ ಈ ಪ್ರವಾಸ ಸಂಪೂರ್ಣವಾಗಿ ರದ್ದಾಗಲಿದೆ.
ಎಷ್ಟು ಪಂದ್ಯಗಳ ಸರಣಿ?
ಬಾಂಗ್ಲಾದೇಶ್ ಪ್ರವಾಸದಲ್ಲಿ ಭಾರತ ತಂಡ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿಗಾಗಿ ಬಾಂಗ್ಲಾದೇಶ್ ಕ್ರಿಕೆಟ್ ಮಂಡಳಿ 2026ರ ಆಗಸ್ಟ್ 29 ರಿಂದ ಸೆಪ್ಟೆಂಬರ್ 15 ರವರೆಗಿನ ದಿನಾಂಕವನ್ನು ನಿಗದಿಪಡಿಸಿದೆ.
ಏಕದಿನ ಸರಣಿ ವೇಳಾಪಟ್ಟಿ:
- ಸೆಪ್ಟೆಂಬರ್ 1, 2026: ಮೊದಲನೇ ಏಕದಿನ ಪಂದ್ಯ
- ಸೆಪ್ಟೆಂಬರ್ 3, 2026: ಎರಡನೇ ಏಕದಿನ ಪಂದ್ಯ
- ಸೆಪ್ಟೆಂಬರ್ 6, 2026: ಮೂರನೇ ಏಕದಿನ ಪಂದ್ಯ
ಟಿ20 ಸರಣಿ ವೇಳಾಪಟ್ಟಿ:
- ಸೆಪ್ಟೆಂಬರ್ 9, 2026: ಮೊದಲನೇ ಟಿ20 ಪಂದ್ಯ
- ಸೆಪ್ಟೆಂಬರ್ 12, 2026: ಎರಡನೇ ಟಿ20 ಪಂದ್ಯ
- ಸೆಪ್ಟೆಂಬರ್ 13, 2026: ಮೂರನೇ ಟಿ20 ಪಂದ್ಯ
ಒಟ್ಟಾರೆಯಾಗಿ ಹೇಳುವುದಾದರೆ, ಭಾರತ ಮತ್ತು ಬಾಂಗ್ಲಾದೇಶ್ ನಡುವಿನ ಈ ಪ್ರಸ್ತಾವಿತ ಸರಣಿಯು ಕೇವಲ ಕ್ರೀಡಾ ಮೈದಾನಕ್ಕೆ ಸೀಮಿತವಾಗಿರದೆ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಮತ್ತು ಭದ್ರತಾ ಸನ್ನಿವೇಶಗಳ ಪರೀಕ್ಷೆಯಾಗಿದೆ. ಕಳೆದ ಕೆಲವು ಸಮಯದಿಂದ ಉಂಟಾಗಿರುವ ಉದ್ವಿಗ್ನತೆಯ ನಡುವೆಯೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಹೊಸ ಚಿಂತೆ: NCA ಸೇರಿದ 13 ಆಟಗಾರರು!
ಆದರೆ, ಟೀಮ್ ಇಂಡಿಯಾ ಬಾಂಗ್ಲಾ ಮಣ್ಣಿಗೆ ಕಾಲಿಡಬೇಕೇ ಬೇಡವೇ ಎಂಬ ಸಂಪೂರ್ಣ ನಿಯಂತ್ರಣ ಈಗ ಭಾರತ ಸರ್ಕಾರದ ಕೈಯಲ್ಲಿದೆ. ಕೇಂದ್ರ ಸರ್ಕಾರದ ಭದ್ರತಾ ಹಸಿರು ನಿಶಾನೆ ಸಿಕ್ಕರೆ ಮಾತ್ರ ಈ ಸರಣಿ ನಡೆಯಲಿದೆ.
