
ತಮಿಳು ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಸಂಸ್ಥಾಪಕ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಸಿನಿಮಾ ಬಿಡುಗಡೆಗೂ ಮುನ್ನವೇ ಸೋರಿಕೆಯಾಗಿ ದೊಡ್ಡ ವಿವಾದ ಸೃಷ್ಟಿಸಿದೆ. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಸ್ಥಳೀಯ ಕೇಬಲ್ ಟಿವಿ (Cable Tv) ಆಪರೇಟರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೊಯಂಬತ್ತೂರು ಜಿಲ್ಲೆಯ ಕರುಮತ್ತಂಪಟ್ಟಿ ನಿವಾಸಿ ಎಸ್. ಪಳನಿಸ್ವಾಮಿ ಎಂಬಾತ ಬಂಧಿತ ಆರೋಪಿ. ಈತ ಆ ಭಾಗದಲ್ಲಿ ‘ರಾಶಿ ಕೇಬಲ್ ಟಿವಿ’ ಎಂಬ ಚಾನೆಲ್ ನಡೆಸುತ್ತಿದ್ದಾನೆ.
ಏಪ್ರಿಲ್ 11ರಂದು ರಾತ್ರಿ ಪಳನಿಸ್ವಾಮಿ ಒಡೆತನದ ‘ರಾಶಿ ಪ್ರೈಮ್ ಮೂವೀಸ್’ ಎಂಬ ಸ್ಥಳೀಯ ಚಾನೆಲ್ನಲ್ಲಿ ಲೀಕ್ ಆದ ‘ಜನ ನಾಯಗನ್’ ಸಿನಿಮಾವನ್ನು ಪ್ರಸಾರ ಮಾಡಲಾಗಿತ್ತು. ವರದಿಗಳ ಪ್ರಕಾರ, ಚಿತ್ರದ ವಿರಾಮದ ನಂತರ ಸುಮಾರು 21 ನಿಮಿಷಗಳ ಕಾಲ ಸಿನಿಮಾವನ್ನು ಕಾನೂನುಬಾಹಿರವಾಗಿ ಪ್ರಸಾರ ಮಾಡಲಾಗಿದೆ. ಇದನ್ನು ಗಮನಿಸಿದ ವಿಜಯ್ ಅವರ ಪಕ್ಷದ ಪದಾಧಿಕಾರಿ ಮೋಹನಪ್ರಿಯಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಾಗುತ್ತಿದ್ದಂತೆಯೇ ಕರುಮತ್ತಂಪಟ್ಟಿ ಪೊಲೀಸರು ಕೇಬಲ್ ಟಿವಿ ಕಚೇರಿಗೆ ಧಾವಿಸಿ ಪ್ರಸಾರವನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಆದೇಶಿಸಿದರು. ಅಲ್ಲದೇ, ತಲೆಮರೆಸಿಕೊಂಡಿದ್ದ ಪಳನಿಸ್ವಾಮಿಯನ್ನು ಸೋಮವಾರ (ಏಪ್ರಿಲ್ 13) ಪೊಲೀಸರು ಬಂಧಿಸಿದ್ದಾರೆ. ಆತನಿಂದ 4 ಹಾರ್ಡ್ ಡಿಸ್ಕ್ಗಳು ಮತ್ತು 1 ಪರ್ಸನಲ್ ಕಂಪ್ಯೂಟರ್ ವಶಕ್ಕೆ ಪಡೆಯಲಾಗಿದೆ.
ಆರೋಪಿಯ ವಿರುದ್ಧ ಕಾಪಿರೈಟ್ ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಸಿನಿಮಾಟೋಗ್ರಾಫ್ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ‘ಜನ ನಾಯಗನ್ ಸಿನಿಮಾದ ಪೈರಸಿ ಕಾಪಿ ಈತನಿಗೆ ಎಲ್ಲಿಂದ ಸಿಕ್ಕಿತು ಎಂಬ ಬಗ್ಗೆ ನಾವು ಆಳವಾದ ತನಿಖೆ ನಡೆಸುತ್ತಿದ್ದೇವೆ’ ಎಂದು ಡಿಎಸ್ಪಿ ಕರಿಕಾಳ ಪರಿ ಶಂಕರ್ ತಿಳಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಇದಲ್ಲದೇ, ಸೈಬರ್ ಪೊಲೀಸರು ಪೈರಸಿ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಿದ್ದು, 6 ಜನರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ‘ಜನ ನಾಯಗನ್’ ಲೀಕ್ ಬೆನ್ನಲ್ಲೇ ಕಠಿಣ ಕ್ರಮ: ಸೈಬರ್ ಕ್ರೈಂ ಪೊಲೀಸರಿಂದ 6 ಜನರ ಬಂಧನ
‘ಜನ ನಾಯಗನ್’ ಚಿತ್ರವು ವಿಜಯ್ ಅವರ ರಾಜಕೀಯ ಜೀವನದ ದೃಷ್ಟಿಯಿಂದ ಅತ್ಯಂತ ಪ್ರಮುಖ ಚಿತ್ರವಾಗಿದ್ದು, ನೂರಾರು ಕೋಟಿ ಹೂಡಿಕೆ ಮಾಡಲಾಗಿದೆ. ಈ ರೀತಿ ಸಿನಿಮಾ ಲೀಕ್ ಮಾಡಿ ಪ್ರಸಾರ ಮಾಡುವುದು ಚಿತ್ರೋದ್ಯಮಕ್ಕೆ ದೊಡ್ಡ ನಷ್ಟ ಉಂಟುಮಾಡುತ್ತದೆ ಎಂದು ಚಿತ್ರತಂಡ ಆತಂಕ ವ್ಯಕ್ತಪಡಿಸಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ಈ ಸಿನಿಮಾವನ್ನು ನಿರ್ಮಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.