ಬೆಂಗಳೂರು, ಫೆಬ್ರವರಿ 08: ಪ್ರೀತಿಸಿದ ಯುವತಿ ಕೈಕೊಟ್ಟ ಹಿನ್ನೆಲೆ ಬಾಡಿ ಬಿಲ್ಡರ್ ಆತ್ಮಹತ್ಯೆ ನಾಡಿಕೊಂಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿ ನಡೆದಿದೆ. ಮನೆಯಲ್ಲಿ ನೇಣು ಬಿಗಿದುಕೊಂಡು ಕಿರಣ್(26) ಪ್ರಾಣಬಿಟ್ಟಿದ್ದು, 3 ವರ್ಷಗಳಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಯುವತಿಗೆ ಬೇರೆ ಯುವಕನ ಜತೆ ಮದುವೆ ನಿಶ್ಚಯವಾದ ಕಾರಣ, ಯುವತಿ ಹಾಗೂ ಆಕೆಯ ತಾಯಿ ಹೆಸರನ್ನು ಡೆತ್ನೋಟ್ನಲ್ಲಿ ಉಲ್ಲೇಖಿಸಿ ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತನಗೆ ಬೇರೆ ಯುವಕನ ಜೊತೆ ಮದುವೆ ನಿಶ್ಚಯವಾಗಿದೆ ಎಂದು ಯುವತಿ ಕಿರಣ್ಗೆ ಹೇಳಿದ್ದಲ್ಲದೆ ಮದುವೆಯ ಆಮಂತ್ರಣ ಪತ್ರಿಕೆ, ಹೊಸ ಸೀರೆ ತೋರಿಸಿದ್ದಳು. ಇದರಿಂದ ಮನನೊಂದು ನೇರವಾಗಿ ಮನೆಗೆ ಬಂದು ಕಿರಣ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಮಹಾಲಕ್ಷ್ಮೀಲೇಔಟ್ ಠಾಣೆಯ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಹಲವು ವರ್ಷಗಳಿಂದ ಜಿಮ್ ಟ್ರೈನರ್, ಬಾಡಿ ಬಿಲ್ಡಿಂಗ್ ಮಾಡ್ತಿದ್ದ ಕಿರಣ್, ಪ್ರಿಯತಮೆಗೆ ಪ್ರೇಮಿಗಳ ದಿನಾಚರಣೆಗೆ ಗಿಫ್ಟ್ ಕೊಡಲು ಸಹ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಈ ನಡುವೆ ಪ್ರೇಯಸಿ ಮತ್ತೊಬ್ಬನ ಜೊತೆ ಮದುವೆ ವಿಷಯ ಪ್ರಸ್ತಾಪಿಸಿದ ಕಾರಣ ಆಘಾತಕೊಳ್ಳಗಾಗಿದ್ದ ಕಿರಣ್ ದುಡುಕಿನ ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ: ವೇಶ್ಯಾವಾಟಿಕೆ ನಡೆಸುವಂತೆ ಅತ್ತೆಯಿಂದ ಒತ್ತಾಯ; 11 ತಿಂಗಳ ಮಗು ಬಿಟ್ಟು ಗೃಹಿಣಿ ಆತ್ಮಹತ್ಯೆ
ಇನ್ನು ಪ್ರಿಯತಮೆ ಮದುವೆ ವಿಚಾರ ತಿಳಿದು ಬೇಸರದಲ್ಲಿ ಮನೆಗೆ ಬಂದಿದ್ದ ಕಿರಣ್ ನಿನ್ನೆ ಸಂಜೆ ತಾಯಿಯನ್ನ ವೈಟ್ ಶೀಟ್ ಮತ್ತು ಪೆನ್ ಕೇಳಿದ್ದರು. ಇದರಿಂದ ಅನುಮಾನಗೊಂಡ ತಾಯಿ ಯಾಕಪ್ಪಾ ವೈಟ್ ಹಾಳೆ ಎಂದು ವಿಚಾರಿಸಿದಾಗ, ಹೆದರಬೇಡಮ್ಮ ಫೈನಾನ್ಸ್ ಲೆಕ್ಕ ಬರೀತಿನಿ ಎಂದು ಕಿರಣ್ ಹೇಳಿದ್ದರಂತೆ. ಘಟನೆ ಸಂಬಂಧ ಸದ್ಯ ಯುವತಿ ಹಾಗೂ ಕುಟುಂಬಸ್ಥರ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಕಿರಣ್ ಕುಟುಂಬಸ್ಥರು ದೂರು ನೀಡಿದ್ದು, ತನಿಖೆ ಮುಂದುವರಿದಿದೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
