ಬೆಂಗಳೂರು, (ಆಗಸ್ಟ್ 12): ಡಿಕೆ ಶಿವಕುಮಾರ್ ಸರ್ಕಾರ ಬರುತ್ತಿದ್ದಂತೆಯೇ ಪಕ್ಷದಲ್ಲಿ ಒಂದಲ್ಲ ಒಂದು ಗೊಂದಲಗಳು ಉದ್ಭವಿಸುತ್ತಲೇ ಇವೆ. ಮೊನ್ನೆ ಅಷ್ಟೇ ಸಚಿವ ಸಂಪುಟ ಪುನಾರಚನೆಯಲ್ಲಿ ಹೈಕಮಾಂಡ್ ಕಳುಹಿಸಿದ್ದ ಪಟ್ಟಿ ಬೆಂಗಳೂರಿನಲ್ಲಿ ಬದಲಾಗಿತ್ತು. ಹೌದು…ಇನ್ನೇನು ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಬೇಕೆನ್ನುವಷ್ಟರಲ್ಲೇ ಪಟ್ಟಿಯಲ್ಲಿದ್ದ ಮಾಂಕಾಳ ವೈದ್ಯ ಹೆಸರನ್ನು ಕೈಬಿಟ್ಟು ಎಸ್ಎಸ್ ಮಲ್ಲಿಕಾರ್ಜುನ ಹೆಸರು ಸೇರ್ಪಡೆ ಮಾಡಲಾಗಿತ್ತು. ಇನ್ನು ಹೈಕಮಾಂಡ್ ಪಟ್ಟಿಯಲ್ಲಿ ಎಂಎಲ್ಸಿ ಗಾಯತ್ರಿ ಹೆಸರು ಸಹ ಇತ್ತು. ಅವರಿಗೂ ಸಹ ಬ್ರೇಕ್ ಹಾಕಲಾಗಿತ್ತು. ಇದೀಗ ಡೆಪ್ಯೂಟಿ ಸ್ಪೀಕರ್ಗೆ ಶಿಫಾರಸ್ಸು ಮಾಡಲಾಗಿದ್ದ ಹೆಸರನ್ನು ಸಹ ಬಲಾವಣೆ ಮಾಡಲಾಗಿದೆ. ಡೆಪ್ಯೂಟಿ ಸ್ಪೀಕರ್ ಆಗಬೇಕಿದ್ದ ಪೊನ್ನಣ್ಣ ಅವರನ್ನು ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದ. ಇನ್ನು ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ಮಾಂಕಾಳ ವೈದ್ಯ ಅವರನ್ನ ಆಯ್ಕೆ ಮಾಡಲಾಗಿದೆ.
ಇನ್ನುಕಾಂಗ್ರೆಸ್ ಹಿರಿಯ ಶಾಸಕ ಆರ್ವಿ ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲೂ ಸಚಿವ ಸ್ಥಾನ ಕೈತಪ್ಪಿದ್ದು, ಈ ಬಾರಿ ಡಿಕೆ ಶಿವಕುಮಾರ್ ಸರ್ಕಾರದಲ್ಲೂ ಸಹ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಅವರನ್ನು ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
