ಕೊಡಗು ಭೀಕರ ಪ್ರವಾಹ ಸಂತ್ರಸ್ತರಿಗೆ 7 ವರ್ಷಗಳಾದರೂ ಸಿಗದ ಪುನರ್ವಸತಿ ಆಸರೆ: ಮಳೆಗಾಲದಲ್ಲಿ ಪ್ರವಾಹದ ಭೀತಿ – Kannada News

ಪ್ಲಾಸ್ಟಿಕ್ ಶೀಟ್ ಹೊದಿಸಿದ ಶೆಡ್​​ನಲ್ಲಿ ಕೊಡಗು ಪ್ರವಾಹ ಸಂತ್ರಸ್ತರುImage Credit source: tv9

ಮಡಿಕೇರಿ, ಜೂನ್ 3: ಇನ್ನೇನು ಮಳೆಗಾಲ ಆರಂಭವಾಗುತ್ತಿದ್ದು ಕೊಡಗು (Kodagu) ಜಿಲ್ಲೆಯ ನಿವಾಸಿಗಳಲ್ಲಿ, ಅದರಲ್ಲೂ ಕುಶಾಲನಗರ ಭಾಗದಲ್ಲಿ ಜಲಪ್ರಳಯದ ಕರಾಳ ನೆನಪುಗಳು ಮತ್ತೆ ನಡುಕ ಹುಟ್ಟಿಸಿವೆ. ನದಿತೀರದ ಗ್ರಾಮಸ್ಥರಿಗೆ ವರ್ಷದ 365 ದಿನಗಳೂ ಕಾಡುಪ್ರಾಣಿಗಳ ಉಪಟಳ ಒಂದೆಡೆಯಾದರೆ, ಮುಂಗಾರು ಮಳೆ ಚುರುಕಾಗುತ್ತಿದ್ದಂತೆಯೇ ಉಕ್ಕಿ ಹರಿಯುವ ಕಾವೇರಿ ನದಿ ತಮ್ಮ ಬದುಕನ್ನು ಎಲ್ಲಿ ಕಸಿದುಕೊಳ್ಳುತ್ತದೋ ಎಂಬ ಜೀವಭಯ ಮತ್ತೊಂದೆಡೆ ಕಾಡುತ್ತಿದೆ. ಸುರಕ್ಷಿತ ಜಾಗದಲ್ಲಿ ಆಶ್ರಯ ಕಲ್ಪಿಸಿಕೊಡಿ ಎಂದು ಈ ಭಾಗದ ನಿರಾಶ್ರಿತರು ವರ್ಷಗಳಿಂದ ಅದೆಷ್ಟು ಚೀರಿಕೊಂಡರೂ, ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮಾತ್ರ ಇವರ ಕರುಣಾಜನಕ ಕೂಗು ಕೇಳಿಸುತ್ತಲೇ ಇಲ್ಲ.

ಮುಖ್ಯಾಂಶಗಳು

  • 2018ರ ಮಹಾಪ್ರವಾಹದಲ್ಲಿ ಮನೆ ಕಳೆದುಕೊಂಡು ಪ್ಲಾಸ್ಟಿಕ್ ಶೆಡ್‌ಗಳಲ್ಲೇ ವಾಸಿಸುತ್ತಿರುವ ನದಿತೀರದ ನೂರಾರು ಕುಟುಂಬಗಳು.
  • ಸಂತ್ರಸ್ತರ ಪುನರ್ವಸತಿಗಾಗಿ ಅಭ್ಯತ್ ಮಂಗಳ ಗ್ರಾಮದಲ್ಲಿ 7 ಎಕರೆ ಜಾಗ ಗುರುತಿಸಿದರೂ 7 ವರ್ಷಗಳಿಂದ ಅನುಷ್ಠಾನಗೊಳ್ಳದ ವಸತಿ ಯೋಜನೆ.
  • ಕಂದಾಯ ಇಲಾಖೆ ಹಾಗೂ ವಸತಿ ಸಚಿವಾಲಯದ ನಡುವಿನ ಸಮನ್ವಯದ ಕೊರತೆಯಿಂದಾಗಿ ನೆನೆಗುದಿಗೆ ಬಿದ್ದ ಸರ್ಕಾರದ ಆಶ್ರಯ ಯೋಜನೆ.

ಬೀದಿಗೆ ಬಿದ್ದ ಹೊಳೆಯಂಚಿನ ಬದುಕು: ಆಡಳಿತದ ನಿರ್ಲಕ್ಷ್ಯ

2018 ಮತ್ತು ತದನಂತರದ ಪ್ರವಾಹದ ಸಂದರ್ಭದಲ್ಲಿ ಕುಶಾಲನಗರ ತಾಲ್ಲೂಕಿನ ಸಿದ್ದಾಪುರ, ನೆಲ್ಲಿಹುದಿಕೇರಿ, ಕರಡಿಗೋಡು, ಕುಂಬಾರಗುಂಡಿ ಹಾಗೂ ನಲ್ವತ್ತೆಕರೆ ಸೇರಿದಂತೆ ಹತ್ತಾರು ಗ್ರಾಮಗಳ ನೂರಾರು ನಿವಾಸಿಗಳು ತಮ್ಮ ಮನೆ-ಮಠಗಳನ್ನು ಕಳೆದುಕೊಂಡು ಸಂಪೂರ್ಣ ನಿರಾಶ್ರಿತರಾಗಿದ್ದರು. ಅಕ್ಷರಶಃ ಬೀದಿಗೆ ಬಿದ್ದಿದ್ದ ಈ ಸಂತ್ರಸ್ತರ ಪೈಕಿ ಕಾವೇರಿ ನದಿ ತಟದಲ್ಲಿ ವಾಸವಿದ್ದ ಸುಮಾರು 140 ಜನರಿಗೆ ಪರ್ಯಾಯ ವಸತಿ ಕಲ್ಪಿಸಲು ಸರ್ಕಾರ ಮುಂದಾಗಿತ್ತು. ಇದಕ್ಕಾಗಿ ಇದೇ ತಾಲ್ಲೂಕಿನ ಅಭ್ಯತ್ ಮಂಗಳ ಸಮೀಪ 7 ಎಕರೆ ಸರ್ಕಾರಿ ಜಮೀನನ್ನು ಗುರುತಿಸಲಾಗಿತ್ತು.

Kodagu Flood Victims Despair: 140 Families Live in Fear as Rehabilitation Project Delayed for 7 Years

ತಮಗೂ ಸ್ವಂತ ಭೂಮಿ ಸಿಗುತ್ತದೆ, ಮನೆ ಕಟ್ಟಲು ಹಣ ಸಿಗುತ್ತದೆ ಎಂದು ಸಂತ್ರಸ್ತರು ಆಸೆಯಿಂದ ಕಾಯುತ್ತಿದ್ದಾರೆ. ಆದರೆ, ಈ ಭರವಸೆ ನೀಡಿ ಏಳು ವರ್ಷಗಳಾಗುತ್ತಾ ಬಂದರೂ ಇದುವರೆಗೆ ಸಂತ್ರಸ್ತರಿಗೆ ಭೂಮಿಯೂ ಸಿಕ್ಕಿಲ್ಲ, ಹಣವೂ ಮಂಜೂರಾಗಿಲ್ಲ. ಇದರ ನಡುವೆ ಸ್ಥಳೀಯಾಡಳಿತವು ನದಿ ತೀರದ ಜನರಿಗೆ ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡಲು ಸಜ್ಜಾಗಿರುವುದು ಇವರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇಲಾಖೆಗಳ ಮುನಿಸು; ಜನರ ಬದುಕು ಅತಂತ್ರ

ಈ ಕುರಿತು ಅಳಲು ತೋಡಿಕೊಂಡಿರುವ ಸಂತ್ರಸ್ತೆ ರುಕ್ಮಿಣಿ, ‘ಪ್ರತಿ ವರ್ಷ ಮಳೆಗಾಲ ಬಂದಾಗ ನಾವು ಮನೆ ಬಿಟ್ಟು ಎಲ್ಲೆಲ್ಲೋ ಕಂಡವರ ಮನೆಗಳಲ್ಲಿ ಆಶ್ರಯ ಪಡೆಯಬೇಕಾಗಿದೆ. ಇದರಿಂದ ಮಕ್ಕಳ ಶಿಕ್ಷಣ, ನಿತ್ಯದ ಕೆಲಸ ಕಾರ್ಯಗಳೆಲ್ಲವೂ ಏರುಪೇರಾಗುತ್ತವೆ. ಮಳೆ ಕಡಿಮೆಯಾಗಿ ವಾಪಸ್ ಬರುವಷ್ಟರಲ್ಲಿ ನಮ್ಮ ಮನೆಗಳು ಕುಸಿಯುವ ಹಂತ ತಲುಪಿರುತ್ತವೆ’ ಎಂದು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ಕೋಗಿಲು ನಿರಾಶ್ರಿತರಿಗೆ ಫಟಾಫಟ್ ಪರಿಹಾರ! ಚಿಕ್ಕಮಗಳೂರು, ಮಡಿಕೇರಿ ಪ್ರವಾಹ ಸಂತ್ರಸ್ತರಿಗೆ ಮನೆ ಯಾವಾಗ? 

ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ರಜಾಕ್ ಮಾತನಾಡಿ, ‘ಇವರೆಲ್ಲರೂ ಕಳೆದ 40 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ. ಮಾನವೀಯ ಉದ್ದೇಶದಿಂದ ಇವರನ್ನು ತೆರವುಗೊಳಿಸಿ ಹೊಸ ಜಾಗ ನೀಡಬೇಕಿರುವುದು ಸರ್ಕಾರದ ಕರ್ತವ್ಯ. ಆದರೆ, ಕಳೆದ ಸರ್ಕಾರದ ಅವಧಿಯಲ್ಲೂ ಇವರನ್ನು ನಿರ್ಲಕ್ಷಿಸಲಾಯಿತು. ಈಗಿನ ಸರ್ಕಾರ ಬಂದು ಎರಡೂವರೆ ವರ್ಷ ಕಳೆದರೂ ಭೂಮಿ ನೀಡಲು ಮೀನ-ಮೇಷ ಎಣಿಸುತ್ತಿದೆ. ಕಂದಾಯ ಇಲಾಖೆ ಹಾಗೂ ವಸತಿ ಸಚಿವಾಲಯದ ನಡುವಿನ ಹೊಂದಾಣಿಕೆ ಕೊರತೆಯೇ ಈ ಯೋಜನೆ ನೆನೆಗುದಿಗೆ ಬೀಳಲು ಕಾರಣ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹವಾಮಾನ ಇಲಾಖೆ ಮಳೆಗಾಲದ ಮುನ್ಸೂಚನೆ ನೀಡಿರುವ ಬೆನ್ನಲ್ಲೇ ಈ ಜನರ ಅತಂತ್ರ ಬದುಕು ಮತ್ತೆ ಬೀದಿಗೆ ಬೀಳುವ ಆತಂಕ ಎದುರಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:14 pm, Wed, 3 June 26

Source link

Leave a Reply

Your email address will not be published. Required fields are marked *