ಲಂಕಾ ಪ್ರಿಮೀಯರ್ ಲೀಗ್ನ (Lanka Premier League) 18ನೇ ಪಂದ್ಯದಲ್ಲಿ ಜಾಫ್ನಾ ಕಿಂಗ್ಸ್ ಮತ್ತು ಕ್ಯಾಂಡಿ ರಾಯಲ್ಸ್ (Jaffna Kings vs Kandy Royals) ತಂಡಗಳು ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಜಾಫ್ನಾ ಕಿಂಗ್ಸ್ 21 ರನ್‌ಗಳಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಾಫ್ನಾ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 221 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಇದಕ್ಕೆ ಉತ್ತರವಾಗಿ, ಗುರಿ ಬೆನ್ನಟ್ಟಿದ ಕ್ಯಾಂಡಿ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 200 ರನ್ ಕಲೆಹಾಕಲಷ್ಟೇ ಶಕ್ತವಾಗಿ 21 ರನ್‌ಗಳಿಂದ ಸೋತಿತು. ಇದು ಪಂದ್ಯದ ಫಲಿತಾಂಶವಾದರೆ ಈ ಪಂದ್ಯದ ಮತ್ತೊಂದು ಹೈಲೇಟ್ಸ್ ಎಂದರೆ, ಕೊನೆಯ ಓವರ್‌ನಲ್ಲಿ ಒಂದೇ ಒಂದು ರನ್ ಬಾರಿಸದೆ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ಭಾರತದ ವಿಜಯ್ ಶಂಕರ್ ಅವರ ಬ್ಯಾಟಿಂಗ್.
221 ರನ್ ಕಲೆಹಾಕಿದ ಜಾಫ್ನಾ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಾಫ್ನಾ ಕಿಂಗ್ಸ್ ತಂಡಕ್ಕೆ ಆರಂಭಿಕರಾದ ಕಮಿಲ್ ಮಿಶಾರ ಮತ್ತು ಅವಿಷ್ಕಾ ಫರ್ನಾಂಡೊ ಉತ್ತಮ ಆರಂಭ ನೀಡಿದರು. ಮಿಶಾರ ಕೇವಲ 26 ಎಸೆತಗಳಲ್ಲಿ 5 ಸಿಕ್ಸರ್‌ಗಳೊಂದಿಗೆ 49 ರನ್ ಗಳಿಸಿದರೆ, ಫರ್ನಾಂಡೊ 22 ಎಸೆತಗಳಲ್ಲಿ 36 ರನ್‌ಗಳ ಕಾಣಿಕೆ ನೀಡಿದರು. ನಂತರ ಕ್ರೀಸ್‌ಗೆ ಬಂದ ಚಾಮಿಂದು ವಿಕ್ರಮಸಿಂಘೆ ಕೇವಲ 15 ಎಸೆತಗಳಲ್ಲಿ 4 ಸಿಕ್ಸರ್‌ಗಳು ಮತ್ತು 3 ಬೌಂಡರಿಗಳ ಸಹಾಯದಿಂದ 43 ರನ್‌ಗಳ ವಿಧ್ವಂಸಕ ಇನ್ನಿಂಗ್ಸ್ ಆಡಿದರು. ಶಕೀಬ್ ಅಲ್ ಹಸನ್ ಮತ್ತು ತೌಹಿದ್ ಹೃದಯ್ಡಾಯ್ ಕೂಡ ಉಪಯುಕ್ತ ರನ್‌ಗಳ ಕೊಡುಗೆ ನೀಡಿದರು. ಇತ್ತ ಕ್ಯಾಂಡಿ ರಾಯಲ್ಸ್ ಪರ ಮೊಯಿನ್ ಅಲಿ ಮತ್ತು ವನಿಂಡು ಹಸರಂಗ ತಲಾ ಎರಡು ವಿಕೆಟ್ ಪಡೆದರು.
ಕ್ಯಾಂಡಿ ರಾಯಲ್ಸ್ಗೆ ಉತ್ತಮ ಆರಂಭ
222 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಕ್ಯಾಂಡಿ ರಾಯಲ್ಸ್ ಕೂಡ ಉತ್ತಮ ಆರಂಭ ಪಡೆಯಿತು. ಪವನ್ ಸಂದೇಶ್ 21 ಎಸೆತಗಳಲ್ಲಿ 48 ರನ್ ಗಳಿಸಿದರೆ, ಲಹಿರು ಇಗಲಗಮಗೆ 15 ಎಸೆತಗಳಲ್ಲಿ 30 ರನ್‌ಗಳ ಇನ್ನಿಂಗ್ಸ್ ಆಡಿದರು. ನಂತರ ವನಿಂದು ಹಸರಂಗ ಮತ್ತು ಶಾಹೀನ್ ಶಾ ಅಫ್ರಿದಿ ತಲಾ 24 ರನ್ ಗಳಿಸಿ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು. ಜಾಫ್ನಾ ಬೌಲರ್‌ಗಳು ನಿಯಮಿತವಾಗಿ ವಿಕೆಟ್ ಪಡೆಯುತ್ತಿದ್ದರೂ, ವಿಜಯ್ ಶಂಕರ್ ಕ್ರೀಸ್‌ನಲ್ಲಿದ್ದರಿಂದ ಪಂದ್ಯ ಕ್ಯಾಂಡಿ ರಾಯಲ್ಸ್ ಪರವಾಗಿ ವಾಲಿತು.
20ನೇ ಓವರ್ ಆರಂಭವಾಗುವುದಕ್ಕೂ ಮುನ್ನ ವಿಜಯ್ ಶಂಕರ್ 15 ಎಸೆತಗಳಲ್ಲಿ 25 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಹೀಗಾಗಿ ಅಂತಿಮ ಓವರ್‌ನಲ್ಲಿ ಕ್ಯಾಂಡಿ ರಾಯಲ್ಸ್ ತಂಡದ ಗೆಲುವಿಗೆ 22 ರನ್‌ಗಳ ಅಗತ್ಯತೆ ಇದ್ದಾಗ ವಿಜಯ್ ಶಂಕರ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಆದರೆ ಓವರ್ ಆರಂಭವಾದ ಬಳಿಕ ಎಲ್ಲರ ನಿರೀಕ್ಷೆ ಹುಸಿಯಾಯಿತು.
20ನೇ ಓವರ್‌ನಲ್ಲಿ ವಿಜಯ್ ವಿಫಲ
ಜಾಫ್ನಾ ತಂಡದ ಪರ ಕೊನೆಯ 20 ನೇ ಓವರ್ ಎಸೆಯಲು ದಿಲ್ಶನ್ ಮಧುಶಂಕ ಬಂದರೆ, ಇತ್ತ ಸ್ಟ್ರೈಕ್ನಲ್ಲಿ ವಿಜಯ್ ಶಂಕರ್ ಇದ್ದರು. ಈ ಪಂದ್ಯವನ್ನು ಕ್ಯಾಂಡಿ ರಾಯಲ್ಸ್ ಗೆಲ್ಲಬೇಕಾದರೆ, ವಿಜಯ್ ಶಂಕರ್ ಕನಿಷ್ಠ ಪಕ್ಷ 3 ಸಿಕ್ಸರ್‌ಗಳನ್ನು ಬಾರಿಸಬೇಕಿತ್ತು. ಆದರೆ ದಿಲ್ಶನ್ ಮಧುಶಂಕ ಎಸೆದ ನಿಖರವಾದ ಯಾರ್ಕರ್ಗಳ ಮುಂದೆ ವಿಜಯ್ ಶಂಕರ್ ಆಟ ನಡೆಯಲಿಲ್ಲ. ಸತತ 5 ಎಸೆತಗಳು ಡಾಟ್ ಆದವು. ಅಂದರೆ ಈ 5 ಎಸೆತಗಳಲ್ಲಿ ವಿಜಯ್ ಶಂಕರ್ಗೆ ಒಂದೇ ಒಂದು ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಇನ್ನು ಓವರ್‌ನ ಕೊನೆಯ ಎಸೆತದಲ್ಲಿ ರನ್ ಗಳಿಸುವ ಪ್ರಯತ್ನದಲ್ಲಿ ವಿಜಯ್ ಶಂಕರ್ ತಮ್ಮ ವಿಕೆಟ್ ಒಪ್ಪಿಸಿದರು. ಇದರೊಂದಿಗೆ, ಮಧುಶಂಕ ಕೊನೆಯ ಓವರ್ ಅನ್ನು ವಿಕೆಟ್ ಮೇಡನ್ ಮಾಡಿ ಜಾಫ್ನಾ ಕಿಂಗ್ಸ್‌ಗೆ ಅಭೂತಪೂರ್ವ ಜಯ ತಂದುಕೊಟ್ಟರು.
