IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 67ನೇ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅದು ಕೂಡ ಸನ್‌ರೈಸರ್ಸ್ ಹೈದರಾಬಾದ್ ತಂಡದ ತವರು ಮೈದಾನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ. ಆರ್‌ಸಿಬಿ ವಿರುದ್ಧದ ಈ ಪಂದ್ಯವು ಸನ್‌ರೈಸರ್ಸ್ ಹೈದರಾಬಾದ್ ಪಾಲಿಗೆ ತುಂಬಾ ಮಹತ್ವದ್ದು.
ಏಕೆಂದರೆ ಈ ಮ್ಯಾಚ್ನಲ್ಲಿ ಭರ್ಜರಿ ಜಯ ಸಾಧಿಸಿದರೆ ಸನ್‌ರೈಸರ್ಸ್ ಹೈದರಾಬಾದ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಬಹುದು. ಅತ್ತ ಸಿಎಸ್‌ಕೆ ವಿರುದ್ಧ ಗುಜರಾತ್ ಟೈಟಾನ್ಸ್ ಕೂಡ ಅಮೋಘ ಗೆಲುವು ದಾಖಲಿಸಿದರೂ ಮೊದಲ ಸ್ಥಾನವನ್ನು ಅಲಂಕರಿಸಬಹುದು.
ಈ ಎರಡೂ ತಂಡಗಳು ಕೊನೆಯ ಲೀಗ್ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದರೆ, ಪ್ರಸ್ತುತ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಇದರಿಂದ ಪ್ಲೇಆಫ್ ಸುತ್ತಿನಲ್ಲಿ ಎಲಿಮಿನೇಟರ್ ಪಂದ್ಯವಾಡಬೇಕಾದ ಅನಿವಾರ್ಯತೆ ಎದುರಾಗಬಹುದು.
- ಐಪಿಎಲ್ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವಾಡಲಿದೆ.
- ಮೂರನೇ ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯವಾಡಲಿದೆ.
- ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೇರಿದರೆ, ಸೋಲುವ ತಂಡಕ್ಕೆ ಎರಡನೇ ಕ್ವಾಲಿಫೈಯರ್ ಪಂದ್ಯವಾಡುವ ಅವಕಾಶ ದೊರೆಯಲಿದೆ.
- ಅದೇ ಎಲಿಮಿನೇಟರ್ ಪಂದ್ಯದಲ್ಲಿ ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ.
- ಹೀಗಾಗಿಯೇ ಎಲ್ಲಾ ತಂಡಗಳು ಟಾಪ್-2 ನಲ್ಲಿ ಸ್ಥಾನ ಪಡೆದು ಮೊದಲ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಲು ಮುಂದಾಗಲಿದೆ.
RCB ಗೆಲ್ಲದಿದ್ದರೂ ಈ ಅಂತರದಿಂದ ಸೋಲಲೇ ಬಾರದು!
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಜಯ ಸಾಧಿಸಿದರೆ ಒಟ್ಟು 18 ಅಂಕಗಳನ್ನು ಪಡೆಯಲಿದೆ. ಅತ್ತ ಆರ್‌ಸಿಬಿ ಗೆದ್ದರೆ 20 ಅಂಕಗಳೊಂದಿಗೆ ಮೊದಲ ಕ್ವಾಲಿಫೈಯರ್ ಪಂದ್ಯವಾಡುವುದನ್ನು ಖಚಿತಪಡಿಸಿಕೊಳ್ಳಲಿದೆ.
ಒಂದು ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ಭಾರೀ ಅಂತರದಿಂದ ಗೆದ್ದರೆ ಅಂಕ ಪಟ್ಟಿಯಲ್ಲಿ ಆರ್‌ಸಿಬಿ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಬಹುದು. ಹೀಗೆ ಆರ್‌ಸಿಬಿ (+1.065) ತಂಡವನ್ನು ಯಾವ ಅಂತರದಿಂದ ಸೋಲಿಸಿದರೆ ಎಸ್‌ಆರ್‌ಹೆಚ್ (+0.350) ಅಂಕ ಪಟ್ಟಿಯಲ್ಲಿ ನೆಟ್ ರನ್ ರೇಟ್ ಮೂಲಕ ಮೊದಲ ಸ್ಥಾನಕ್ಕೇರಬಹುದು ಎಂದು ನೋಡುವುದಾದರೆ…
- ಮೊದಲು ಬ್ಯಾಟಿಂಗ್ ಮಾಡಿದರೆ:-
- ಸನ್‌ರೈಸರ್ಸ್ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್ ಮಾಡಿ ನಿಖರವಾಗಿ 250 ರನ್ ಗಳಿಸಿದರೆ, ಆರ್‌ಸಿಬಿ ತಂಡವನ್ನು 162 ರನ್ ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ನಿಯಂತ್ರಿಸಬೇಕಾಗುತ್ತದೆ.
- ಸನ್‌ರೈಸರ್ಸ್ ಹೈದರಾಬಾದ್ ತಂಡವು ಮೊದಲು ಬ್ಯಾಟ್ 200 ರನ್ ಗಳಿಸಿದರೆ, ಆರ್‌ಸಿಬಿ ತಂಡವನ್ನು ಕೇವಲ 115 ರನ್‌ಗಳ ಒಳಗಾಗಿ ಆಲೌಟ್ ಮಾಡಬೇಕು
- ಅಂದರೆ ಕನಿಷ್ಠ 85+ ರನ್‌ಗಳ ಅಂತರದಿಂದ ಗೆದ್ದರೆ ಮಾತ್ರ ಸನ್‌ರೈಸರ್ಸ್ ಹೈದರಾಬಾದ್ ತಂಡವು ಅಂಕ ಪಟ್ಟಿಯಲ್ಲಿ ಆರ್‌ಸಿಬಿ ತಂಡವನ್ನು ಹಿಂದಿಕ್ಕಬಹುದು.
- ಚೇಸಿಂಗ್ ಮಾಡಿದರೆ:-
- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬ್ಯಾಟ್ ಮಾಡಿದ 200 ರನ್‌ಗಳ ಗುರಿ ನೀಡಿದರೆ, ಈ ಗುರಿಯನ್ನು ಎಸ್‌ಆರ್‌ಹೆಚ್ ತಂಡವು ಕೇವಲ 11 ಓವರ್‌ಗಳಲ್ಲಿ (66 ಎಸೆತಗಳು) ಅಥವಾ ಅದಕ್ಕಿಂತ ಕಡಿಮೆ ಓವರ್‌ಗಳಲ್ಲಿ ಚೇಸ್ ಮಾಡಬೇಕು.
- ಆರ್‌ಸಿಬಿ 180 ರನ್‌ಗಳ ಗುರಿಯನ್ನು ನೀಡಿದರೆ ಎಸ್‌ಆರ್‌ಹೆಚ್ ತಂಡವು ಕೇವಲ 11 ರಿಂದ 12 ಓವರ್‌ಗಳಲ್ಲಿ ಈ ಟಾರ್ಗೆಟ್ ಅನ್ನು ಬೆನ್ನಟ್ಟಬೇಕಾಗುತ್ತದೆ.
- ಅಂದರೆ ಇಲ್ಲಿ ಕನಿಷ್ಠ 65+ ಎಸೆತಗಳನ್ನು ಬಾಕಿಯಿರಿಸಿ ಗೆದ್ದರೆ ಮಾತ್ರ ಸನ್‌ರೈಸರ್ಸ್ ಹೈದರಾಬಾದ್ ತಂಡವು ಅಂಕ ಪಟ್ಟಿಯಲ್ಲಿ ಆರ್‌ಸಿಬಿ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಅಲಂಕರಿಸಬಹುದು.
- ನೆಟ್ ರನ್ ರೇಟ್ ವ್ಯತ್ಯಾಸ: RCB (+1.065) vs SRH (+0.350) ನಡುವೆ 0.715 ರಷ್ಟು ದೊಡ್ಡ ನೆಟ್ ರನ್ ರೇಟ್ ವ್ಯತ್ಯಾಸವಿದೆ.
SRH ಅಮೋಘ ಗೆಲುವು ಸಾಧಿಸಿದರೆ ಏನಾಗಲಿದೆ?
ಒಂದು ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆರ್‌ಸಿಬಿ ವಿರುದ್ಧ ಈ ಮೇಲೆ ತಿಳಿಸಿದರೆ 85+ ರನ್‌ಗಳ ಅಂತರದಿಂದ ಅಥವಾ 11 ಓವರ್‌ಗಳಲ್ಲಿ ಚೇಸ್ ಮಾಡಿ ಗೆದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಕುಸಿಯಲಿದೆ. ಇತ್ತ ದ್ವಿತೀಯ ಸ್ಥಾನದಿಂದ ಆರ್‌ಸಿಬಿ ತಂಡವನ್ನು ಹಿಂದಿಕ್ಕಲು ಗುಜರಾತ್ ಟೈಟಾನ್ಸ್ ತಂಡಕ್ಕೂ ಅವಕಾಶ ಇದೆ.
ಅಂದರೆ ಇಂದಿನ ಮ್ಯಾಚ್ನಲ್ಲಿ ಗುಜರಾತ್ ಟೈಟಾನ್ಸ್ ತಂಡವು ಸಿಎಸ್‌ಕೆ ವಿರುದ್ಧ ಭಾರೀ ಅಂತರದಿಂದ ಗೆದ್ದರೆ, ನೆಟ್ ರನ್ ರೇಟ್ ಏರಿಕೆಯಾಗಲಿದೆ. ಇದರಿಂದ ಎಸ್‌ಆರ್‌ಹೆಚ್ ವಿರುದ್ಧ ಆರ್‌ಸಿಬಿ ಹೀನಾಯವಾಗಿ ಸೋತರೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಬಹುದು.
ಇಲ್ಲಿ ಗುಜರಾತ್ ಟೈಟಾನ್ಸ್ ತಂಡವು ಆರ್‌ಸಿಬಿ ತಂಡದ ನೆಟ್ ರನ್ ರೇಟ್ ಹಿಂದಿಕ್ಕಬೇಕಿದ್ದರೆ ಈ ಕೆಳಗೆ ನೀಡಲಾದ ಅಂತರದಿಂದ ಸಿಎಸ್‌ಕೆ ತಂಡವನ್ನು ಮಣಿಸಬೇಕಾಗುತ್ತದೆ.
- ಮೊದಲ ಬ್ಯಾಟಿಂಗ್ ಮಾಡಿದರೆ:-
- ಗುಜರಾತ್ ಟೈಟಾನ್ಸ್ ತಂಡವು ಮೊದಲ ಬ್ಯಾಟಿಂಗ್ ಮಾಡಿ 220 ರನ್ಗಳಿಸಿದರೆ, ಸಿಎಸ್‌ಕೆ ತಂಡವನ್ನು 100 ರನ್‌ಗಳ ಒಳಗೆ ನಿಯಂತ್ರಿಸಬೇಕು. ಅಂದರೆ ಬರೋಬ್ಬರಿ 120 ರನ್‌ಗಳ ಅಮೋಘ ಜಯ ಸಾಧಿಸಬೇಕು.
- ಗುಜರಾತ್ ಟೈಟಾನ್ಸ್ 200 ರನ್ ಬಾರಿಸಿದರೆ, ಸಿಎಸ್‌ಕೆ ತಂಡವನ್ನು ಕೇವಲ 80 ರಿಂದ 85 ರನ್‌ಗಳಿಗೆ ಆಲೌಟ್ ಮಾಡಬೇಕು.
- ಅಂದರೆ ಕನಿಷ್ಠ 100+ ರನ್‌ಗಳ ಭಾರಿ ಅಂತರದ ಗೆಲುವು ಸಾಧಿಸಿದರೆ ಮಾತ್ರ ಗುಜರಾತ್ ಟೈಟಾನ್ಸ್ ತಂಡಕ್ಕೆ ಆರ್‌ಸಿಬಿ ತಂಡವನ್ನು ಅಂಕ ಪಟ್ಟಿಯಲ್ಲಿ ಹಿಂದಿಕ್ಕಬಹುದು.
- ಚೇಸಿಂಗ್ ಮಾಡಿದರೆ:-
- ಒಂದು ವೇಳೆ ಗುಜರಾತ್ ಟೈಟಾನ್ಸ್ ತಂಡವು ಚೇಸಿಂಗ್ ಮಾಡಿದರೆ, ಸಿಎಸ್‌ಕೆ ತಂಡ ನೀಡುವ 200 ರನ್‌ಗಳ ಗುರಿಯನ್ನು 9.4 ಓವರ್‌ಗಳಲ್ಲಿ ಚೇಸ್ ಮಾಡಬೇಕು.
- ಸಿಎಸ್‌ಕೆ 180 ರನ್‌ಗಳ ಗುರಿ ನೀಡಿದರೆ ಗುಜರಾತ್ ಟೈಟಾನ್ಸ್ ತಂಡವು ಈ ಟಾರ್ಗೆಟ್ ಅನ್ನು 10 ರಿಂದ 11 ಓವರ್‌ಗಳ ಒಳಗೆ ಚೇಸ್ ಮಾಡಬೇಕಾಗುತ್ತದೆ.
- ಅಂದರೆ ಕನಿಷ್ಠ 60 ಎಸೆತಗಳನ್ನು ಬಾಕಿಯಿರಿಸಿ ಗೆದ್ದರೆ ಮಾತ್ರ ಗುಜರಾತ್ ಟೈಟಾನ್ಸ್ ತಂಡವು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಬಹುದು.
- RCB (+1.065) vs GT (+0.400) ನಡುವೆ 0.665 ರಷ್ಟು ದೊಡ್ಡ ನೆಟ್ ರನ್ ರೇಟ್ ವ್ಯತ್ಯಾಸವಿದೆ.
ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಇಂದು (ಮೇ.21) ಪಂದ್ಯವಾಡಲಿದೆ ಎಂಬುದು. ಅದೇ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ (ಮೇ.22) ನಾಳೆ ಪಂದ್ಯವಾಡಲಿದೆ.
ಅಂದರೆ ಗುಜರಾತ್ ಟೈಟಾನ್ಸ್ ಮೊದಲ ಕ್ವಾಲಿಫೈಯರ್ ಆಡಲು ಸಿಎಸ್‌ಕೆ ವಿರುದ್ಧ ಭರ್ಜರಿ ಜಯ ಸಾಧಿಸಿ ನೆಟ್ ರನ್ ರೇಟ್ ಉತ್ತಮಪಡಿಸಿಕೊಳ್ಳಬೇಕಿರುವುದು ಅನಿವಾರ್ಯ.
ಇಲ್ಲದಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಗುಜರಾತ್ ಟೈಟಾನ್ಸ್ ತಂಡದ ನೆಟ್ ರನ್ ರೇಟ್ ಅನ್ನು ಸಹ ಟಾರ್ಗೆಟ್ ಮಾಡಲಿದೆ. ಈ ಮೂಲಕ ದ್ವಿತೀಯ ಸ್ಥಾನಕ್ಕೇರುವ ಮೂಲಕ ಮೊದಲ ಕ್ವಾಲಿಫೈಯರ್ಗೇರಲು ಪ್ಲ್ಯಾನ್ ರೂಪಿಸಲಿದೆ.
ಇದನ್ನೂ ಓದಿ: IPL 2026: ಹೀಗಾದ್ರೆ CSK ಪ್ಲೇಆಫ್ಗೇರುವುದು ಖಚಿತ..!
ಒಂದು ವೇಳೆ ಗುಜರಾತ್ ಟೈಟಾನ್ಸ್ ತಂಡವು ಸಿಎಸ್‌ಕೆ ವಿರುದ್ಧ ಅಮೋಘ ಗೆಲುವು ದಾಖಲಿಸಿ ನೆಟ್ ರನ್ ರೇಟ್ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಆರ್‌ಸಿಬಿ ತಂಡವನ್ನು ಹಿಂದಿಕ್ಕಿ ಅಂಕ ಪಟ್ಟಿಯಲ್ಲಿ ದ್ವಿತೀಯ ಅಥವಾ ಪ್ರಥಮ ಸ್ಥಾನಕ್ಕೇರಲು ಸನ್‌ರೈಸರ್ಸ್ ಹೈದರಾಬಾದ್ ತಂಡ ಪ್ಲ್ಯಾನ್ ರೂಪಿಸಲಿದೆ.
ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಕೊನೆಯ ಪಂದ್ಯದಲ್ಲಿ ಗೆಲ್ಲಲು ಸಾಧ್ಯವಾಗದೇ ಇದ್ದರೆ, ಭಾರೀ ಅಂತರದಿಂದ ಸೋಲುವುದನ್ನು ತಪ್ಪಿಸಿಕೊಳ್ಳಬೇಕು. ಈ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್-2 ನಲ್ಲಿ ಕಾಣಿಸಿಕೊಳ್ಳುವ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯವಾಡಬಹುದು.
Published On – 2:20 pm, Thu, 21 May 26