ಕೊಪ್ಪಳದಲ್ಲಿ ಕಾರ್ಖಾನೆಗಳ ವಿರುದ್ಧ ಧರಣಿ: ದಾಖಲೆ ಬರೆದ ಗವಿ ಸಿದ್ದೇಶ್ವರ ಶ್ರೀ ಭಾಗಿಯಾಗಿದ್ದ ಹೋರಾಟ – Kannada News | Koppal: Protest against factories; Gavi Siddeshwara Sri participated Protest make Record

ಬಲ್ಡೋಟಾ, ಪ್ರತಿಭಟನೆImage Credit source: tv9 kannada

ಕೊಪ್ಪಳ, ಫೆಬ್ರವರಿ 01: ಅದು ಸುಮಾರು 54 ಸಾವಿರ ಕೋಟಿ ರೂ ವೆಚ್ಚದಲ್ಲಿ ವಿಸ್ತರಣೆಯಾಗುತ್ತಿರುವ ಕಾರ್ಖಾನೆ (Baldota Factory). ಆ ಕಾರ್ಖಾನೆ ವಿರೋಧಿಸಿ ಅಲ್ಲಿ ದೊಡ್ಡ ಹೋರಾಟ ನಡೆದಿತ್ತು. ಖುದ್ದು ಗವಿ ಸಿದ್ದೇಶ್ವರ ಶ್ರೀಗಳು ಹೋರಾಟದಲ್ಲಿ (Protest) ಭಾಗಿಯಾಗಿದ್ದರು. ಕಾರ್ಖಾನೆ ವಿಸ್ತರಿಸಿದ ಹಿನ್ನೆಲೆ ಕೊಪ್ಪಳ ಬಂದ್ ಕರೆ ನೀಡಲಾಗಿತ್ತು. ಗವಿ ಶ್ರೀಗಳು ಹೋರಾಟಕ್ಕೆ ಧುಮುಕಿದಾಗ ಸರ್ಕಾರ ತಾತ್ಕಾಲಿಕವಾಗಿ ಆ ಕಾರ್ಖಾನೆ ಕೆಲಸ ನಿಲ್ಲಿಸಿತ್ತು. ಆದರೆ ಇದೀಗ ಆ ಕಾರ್ಖಾನೆ ಮತ್ತೆ ಎಂದಿನಂತೆ ಕೆಲಸ ಆರಂಭಿಸಿದೆ. ಇದು ಸಹಜವಾಗಿ ಕೊಪ್ಪಳ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಕಾರ್ಖಾನೆ ವಿರೋಧಿಸಿ ಕೊಪ್ಪಳದಲ್ಲಿ ಕಳೆದ 94 ದಿನಗಳಿಂದ ಹೋರಾಟ ನಡೆಯುತ್ತಿದ್ದು, ಇದೀಗ ಈ ಹೋರಾಟ ದಾಖಲೆ ಬರೆದಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಇಷ್ಟೊಂದು ದಿನ ಹೋರಾಟ ನಡೆದ ಇತಿಹಾಸವೇ ಇಲ್ಲ.

ದಾಖಲೆ ಬರೆದ 94 ದಿನಗಳ ಧರಣಿ 

ಬಲ್ಡೋಟಾ ಸ್ಟೀಲ್ ಆ್ಯಂಡ್ ಪವರ್ ಲಿಮಿಟಿಡ್, ಕೊಪ್ಪಳ ತಾಲೂಕಿನ ಬಸಾಪೂರ ಬಳಿ ಸುಮಾರು 54 ಸಾವಿರ ಕೋಟಿ ರೂ ವೆಚ್ಚದಲ್ಲಿ ವಿಸ್ತರಣೆಯಾಗುತ್ತಿರುವ ಕಾರ್ಖಾನೆ. ಆದರೆ ಈ ಕಾರ್ಖಾನೆ ವಿರೋಧಿಸಿ ಕೊಪ್ಪಳದಲ್ಲಿ ಕಳೆದ 94 ದಿನಗಳಿಂದ ಹೋರಾಟ ನಡೆಯುತ್ತಿದೆ. ಇದೀಗ ಈ ಹೋರಾಟ ದಾಖಲೆ ಬರೆದಿದೆ. ಕೊಪ್ಪಳ ಜಿಲ್ಲೆಯಲ್ಲಿ ನಿರಂತರವಾಗಿ ಇಷ್ಟೊಂದು ದಿನ ಹೋರಾಟ ನಡೆದ ಇತಿಹಾಸವೇ ಇಲ್ಲ. ಕೊಪ್ಪಳ ಜಿಲ್ಲಾ ಬಚಾವೋ ಆಂದಲೋನ ಸಮಿತಿಯಿಂದ ನಿರಂತರ 94 ದಿನಗಳ ಧರಣಿ ಇದೀಗ ದಾಖಲೆ ಬರೆದಿದೆ.

ಇದನ್ನೂ ಓದಿ: ಕಾರ್ಖಾನೆಗಳ ಹೊಗೆಗೆ ರೋಸಿ ಹೋದ ಅನ್ನದಾತ: ಹೋರಾಟಕ್ಕೆ ಗವಿಸಿದ್ದೇಶ್ವರ ಸ್ವಾಮೀಜಿಯನ್ನ ಕರೀತಿವಿ ಎಂದ ರೈತರು

1991ರಲ್ಲಿ ರಾಯಚೂರು ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಯನ್ನ ಪ್ರತ್ಯೇಕಗೊಳಿಸಲು ಹೋರಾಟ ನಡೆದಿತ್ತು. ಅದು 80 ದಿನಗಳ ಕಾಲ ನಿರಂತರ ನಡೆದಿತ್ತು. ಆ ಸಮಯದಲ್ಲಿ ರಾಜೀವ್ ಗಾಂಧಿ ಹತ್ಯೆಯಾದ ಹಿನ್ನಲೆ ಹೋರಾಟ ವಾಪಸ್ ಪಡೆಯಲಾಗಿತ್ತು. ಇದೀಗ ಆ ದಾಖಲೆಯನ್ನ ಮುರಿದು ಕಾರ್ಖಾನೆಗಳ ವಿರುದ್ದ ನಿರಂತರ 94 ದಿನಗಳಿಂದ ಹೋರಾಟ ನಡೆಯುತ್ತಿದೆ. ಕೊಪ್ಪಳದ ನಗರಸಭೆ ಮುಂಭಾಗ ಪರಿಸರವಾದಿಗಳು ಹೋರಾಟ ಆರಂಭಿಸಿದ್ದಾರೆ. ಈಗಾಗಲೇ ನಾಡಿನ ಅನೇಕ ಗಣ್ಯರು ಈ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಚಿಂತಕ ಭಗವಾನ್, ನಟ ಅಹಿಂಸಾ ಚೇತನ್ ಸೇರಿ ಅನೇಕ ಗಣ್ಯರು ಹೋರಾಟದಲ್ಲಿ ಭಾಗಿಯಾಗಿದ್ದಾರೆ, ಆದರೆ ಇದುವರೆಗೂ ಸರ್ಕಾರ ಮಾತ್ರ ಸ್ಪಂದಿಸಿಲ್ಲ ಎಂದು ಹೋರಾಟಗಾರ ಅಲ್ಲಮಪ್ರಭು ಬೆಟದೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಬಲ್ಡೋಟಾ ಸೇರಿ ಅನೇಕ ಕಾರ್ಖಾನೆಗಳ ವಿರುದ್ದ ಕಳೆದ 94 ದಿನಗಳಿಂದ ನಿರಂತರ ಧರಣಿ ನಡೆಯುತ್ತಿದೆ. ಕಾರ್ಖಾನೆಗಳು ಹೊರಸುಸುವ ಹೊಗೆಯಿಂದ ಈಗಾಗಲೇ ಕೊಪ್ಪಳ ತಾಲೂಕಿನ ಅನೇಕ ಹಳ್ಳಿಗಳಿಗೆ ಸಮಸ್ಯೆ ಉಂಟಾಗಿದೆ. ಅಲ್ಲಾನಗರ, ಬಸಾಪೂರ, ಹಾಲವರ್ತಿ, ಕುಣಿಕೇರಿ, ಹಿರೇಬಗನಾಳ ಸೇರಿ ಹತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಸಮಸ್ಯೆ ಎದುರಾಗಿದೆ. ಈ ಕಾರಣಕ್ಕೆ ಬಲ್ಡೋಟಾ ವಿಸ್ತರಣೆ ಬೇಡ ಎಂದು ಹೋರಾಟ ನಡೆದಿದೆ.

ಮತ್ತೊಮ್ಮೆ ಬಂದ್? 

ಕಳೆದ ವರ್ಷ ಫೆಬ್ರುವರಿ 24 ರಂದು ಕೊಪ್ಪಳ ಜಿಲ್ಲೆಯ ಬಂದ್ ಮಾಡಿ ಹೊರಾಟ ಮಾಡಲಾಗಿತ್ತು. ಹೋರಾಟದಲ್ಲಿ ಗವಿಮಠದ ಅಭಿನವ ಗವಿ ಸಿದ್ದೇಶ್ವರ ಶ್ರೀಗಳು ಭಾಗಿಯಾಗಿದ್ದರು. ಇದಾದ ಬಳಿಕ ಶ್ರೀಗಳು ಮೌನಕ್ಕೆ ಜಾರಿದ್ದಾರೆ. ಮತ್ತೊಂದು ಕಡೆ ಜಿಲ್ಲೆಯ ಜನ ಪ್ರತಿನಿಧಿಗಳು ಹೋರಾಟಗಾರರ ಮನವಿಗೆ ಸ್ಪಂದಿಸುತ್ತಿಲ್ಲ. ಕಳೆದ ತಿಂಗಳು ಕಾಟಾಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹೋರಾಟಗಾರರನ್ನು ಭೇಟಿ ಮಾಡಿ ಹೋಗಿದ್ದಾರೆ. ಆದರೆ ಇದುವರೆಗೂ ಕಾರ್ಖಾನೆ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿಲುವು ತಿಳಿಸಿಲ್ಲ. ಇದೀಗ 94 ದಿನಗಳಾಗಿದ್ದು, ಫೆಬ್ರವರಿ 24 ರಂದು ಕೊಪ್ಪಳ ಬಂದ್​ಗೆ ಒಂದು ವರ್ಷವಾಗುವ ಹಿನ್ನಲೆ ಹೋರಾಟಗಾರರು ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ಧಗೊಂಡಿದ್ದಾರೆ. ಸುಮಾರು 2000ಕ್ಕೂ ಅಧಿಕ ಜನ ಸೇರಿ ಮತ್ತೊಮ್ಮೆ ಹೋರಾಟದ ಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಮತ್ತೆ‌ ಮುನ್ನಲೆಗೆ ಬಂದ ಬಲ್ಡೋಟಾ ಕಾರ್ಖಾನೆ ವಿವಾದ: ಹೋರಾಟಕ್ಕಿಳಿದ ರೈತರು

ಒಟ್ಟಾರೆ ಬಲ್ಡೋಟಾ ಕಾರ್ಖಾನೆ ವಿರುದ್ಧದ ನಿರಂತರ ಧರಣಿ ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿ ದಾಖಲೆಯಾಗಿದೆ. ಇಷ್ಟೊಂದು ನಿರಂತರ ಧರಣಿ ನಡೆದ ಉದಾಹರಣೆ ಕೊಪ್ಪಳದಲ್ಲಿ ಇಲ್ಲವೇ ಇಲ್ಲ. ಅನೇಕ ಹೋರಾಟಗಳು ನಡೆದರೂ ನಿರಂತರ 94 ದಿನಗಳವರೆಗೂ ಯಾವ ಹೋರಾಟವೂ ನಡೆದಿರಲಿಲ್ಲ. 371 ತಿದ್ದುಪಡಿಗಾಗಿ ನಡೆದ ದೊಡ್ಡ ಹೋರಾಟವೂ ಇಷ್ಟು ದಿನ ನಡೆದಿರಲಿಲ್ಲ. ಆದರೂ ಸರ್ಕಾರ ಮಾತ್ರ ಹೋರಾಟಗಾರರಿಗೆ ಕ್ಯಾರೇ ಅನ್ನುತ್ತಿಲ್ಲ. ಮುಂದೆ ಆಗುವ ಅನಾಹುತಕ್ಕೆ ಸರ್ಕಾರವೇ ನೇರಹೊಣೆ ಎಂದು ಈಗಾಗಲೇ ಹೋರಾಟಗಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *