ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 8.43 ಕೋಟಿ ರೂ. ಹಗರಣ: ಆಡಿಟ್‌ನಲ್ಲಿ ಕೋಟಿ ಕೋಟಿ ಲೂಟಿ ಬಯಲು! – Kannada News | Koppal Urban Development Authority Scam: Rs 8.43 Crore Fraud Unearthed

ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ರವೀಂದ್ರ

ಕೊಪ್ಪಳ, ಆಗಸ್ಟ್ 16: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (KKRDB) ಅಕ್ರಮದ ಬೆನ್ನಲ್ಲೇ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (KUDA) ಬೃಹತ್ ಹಣಕಾಸು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ನಿವೇಶನ ಕೊಡುವುದಾಗಿ ನಂಬಿಸಿ ಪ್ರಾಧಿಕಾರದ ಅನಧಿಕೃತ ಬ್ಯಾಂಕ್ ಖಾತೆ ಸೃಷ್ಟಿಸಿ, ಬರೋಬ್ಬರಿ 8.43 ಕೋಟಿ ರೂಪಾಯಿಗೂ ಅಧಿಕ ಹಣ ಲೂಟಿ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.

ಹೊರಗುತ್ತಿಗೆ ನೌಕರನಿಂದ ಕೋಟಿ ಕೋಟಿ ವಂಚನೆ

ಪ್ರಾಧಿಕಾರದಲ್ಲಿ ಕಳೆದ 18 ವರ್ಷಗಳಿಂದ ದಿನಗೂಲಿ ಆಧಾರದ ಮೇಲೆ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ರವೀಂದ್ರ ಎಂಬಾತ ಈ ಹಗರಣದ ಮುಖ್ಯ ರೂವಾರಿ ಎನ್ನಲಾಗಿದೆ. ಕೊಪ್ಪಳ ಕಿಮ್ಸ್ ಹಿಂಭಾಗದ ಸರೋಜಾ ಬಡಾವಣೆಯಲ್ಲಿ ನಿವೇಶನ ಕೊಡುವುದಾಗಿ ಸಾರ್ವಜನಿಕರನ್ನು ನಂಬಿಸಿ, ಪ್ರಾಧಿಕಾರದ ಹೆಸರಿನಲ್ಲೇ ಅನಧಿಕೃತ ಬ್ಯಾಂಕ್ ಖಾತೆ ತೆಗೆದು ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗಿದೆ. ಇತ್ತೀಚೆಗೆ ನಡೆದ ಆಡಿಟ್ ವರದಿಯಲ್ಲಿ ಈ ಕೋಟಿ ಕೋಟಿ ಅಕ್ರಮ ಬಹಿರಂಗಗೊಂಡಿದ್ದು, ಪ್ರಸ್ತುತ ಆಯುಕ್ತ ಶರಣಪ್ಪ ಅವರು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರವೀಂದ್ರನನ್ನು ಈಗಾಗಲೇ ಕೆಲಸದಿಂದ ವಜಾಗೊಳಿಸಲಾಗಿದೆ.

ಉನ್ನತಾಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಶಾಮೀಲು ಶಂಕೆ

ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, “ಇದು ಕೇವಲ ಒಬ್ಬ ಸಿಬ್ಬಂದಿಯ ಕೆಲಸವಲ್ಲ. ಪ್ರಾಧಿಕಾರದ ಒಳಗಿನವರು, ಹೊರಗಿನವರು ಹಾಗೂ ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿರುವ ಶಂಕೆ ಇದೆ. ನೌಕರ ರವೀಂದ್ರ ಕೆಲಸದಿಂದ ವಜಾಗೊಂಡ ಮೇಲೂ ಹಣ ವರ್ಗಾವಣೆಯಾಗಿದೆ. ಪ್ರಾಧಿಕಾರದ ಕೆಲ ಅಧಿಕಾರಿಗಳ ಸಹಿಗಳೂ ಪತ್ತೆಯಾಗಿದ್ದು, ಸಮಗ್ರ ಡಿಟೇಲ್ ರಿಪೋರ್ಟ್ ಸಿದ್ಧಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು,” ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ‘ಎಟಿಎಂ’ ಆಗಿದೆ: ಆರ್. ಅಶೋಕ್ ವಾಗ್ದಾಳಿ

ಕೊಪ್ಪಳ ನಗರಾಭಿವೃದ್ಧಿ ಹಗರಣದ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರವಿಲ್ಲದ ಇಲಾಖೆಯೇ ಇಲ್ಲ. ನಗರಾಭಿವೃದ್ಧಿ ಇಲಾಖೆಯು ಕಾಂಗ್ರೆಸ್ ನಾಯಕರ ಎಟಿಎಂ ಆಗಿದೆ. ಇದು ಕೇವಲ ಕೆಳಹಂತದ ಸಿಬ್ಬಂದಿಯ ಕೆಲಸವಲ್ಲ, ಸರ್ಕಾರದ ಸಾಂಸ್ಥಿಕ ಲೂಟಿ. ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ತಕ್ಷಣ ಜೈಲಿಗಟ್ಟಬೇಕು,” ಎಂದು ಸಿಎಂ  ಅವರನ್ನು ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *