ಹೊರಗುತ್ತಿಗೆ ನೌಕರ ರವೀಂದ್ರ ಕುಮಾರ್‌ಗೆ ಪೊಲೀಸ್ ಬಲೆ
ಕೊಪ್ಪಳ, ಆಗಸ್ಟ್ 17: ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (KUDA) ಬರೋಬ್ಬರಿ 8 ಕೋಟಿ 43 ಲಕ್ಷ ರೂಪಾಯಿ ಅಕ್ರಮ ವರ್ಗಾವಣೆಯಾಗಿರುವುದು ಆಡಿಟ್ ವೇಳೆ ಬಯಲಾಗಿದ್ದು, ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಪ್ರಾಧಿಕಾರಕ್ಕೆ ಅಧ್ಯಕ್ಷರು ಹಾಗೂ ಸದಸ್ಯರೇ ಇಲ್ಲದ ಅವಧಿಯನ್ನು ಬಂಡವಾಳ ಮಾಡಿಕೊಂಡ ಖದೀಮರು, ಅನಧಿಕೃತ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಅಧ್ಯಕ್ಷರಿಲ್ಲದ ಅವಧಿಯಲ್ಲೇ ನಕಲಿ ಖಾತೆ ಸೃಷ್ಟಿ!
2022-23ರ ಅವಧಿಯಲ್ಲಿ ಹಾಗೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸುಮಾರು ಒಂದೂವರೆ ವರ್ಷಗಳ ಕಾಲ ಪ್ರಾಧಿಕಾರಕ್ಕೆ ಅಧ್ಯಕ್ಷರ ನೇಮಕವಾಗಿರಲಿಲ್ಲ. ಇದನ್ನೇ ಆಸರೆಯಾಗಿಸಿಕೊಂಡ ಅಕ್ರಮ ರೂವಾರಿಗಳು, ಕೊಪ್ಪಳದ ವಿವಿಧ ಬ್ಯಾಂಕ್‌ಗಳಲ್ಲಿ ಪ್ರಾಧಿಕಾರದ ಹೆಸರಿನಲ್ಲೇ ನಕಲಿ ಖಾತೆಗಳನ್ನು ತೆರೆದು 8.43 ಕೋಟಿ ರೂ. ಹಣವನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ.
“ಇಷ್ಟು ದೊಡ್ಡ ಮಟ್ಟದ ಹಣ ವರ್ಗಾವಣೆ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಇದರ ಹಿಂದೆ ದೊಡ್ಡ ಜಾಲವೇ ಇದೆ” ಎಂದು ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ ಹಾಗೂ ಸ್ಥಳೀಯರು ಆರೋಪಿಸಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 8.43 ಕೋಟಿ ರೂ. ಹಗರಣ: ಆಡಿಟ್‌ನಲ್ಲಿ ಕೋಟಿ ಕೋಟಿ ಲೂಟಿ ಬಯಲು!
ಹೊರಗುತ್ತಿಗೆ ನೌಕರ ರವೀಂದ್ರ ಕುಮಾರ್‌ಗೆ ಪೊಲೀಸ್ ಬಲೆ
ಪ್ರಕರಣದಲ್ಲಿ ಹೊರಗುತ್ತಿಗೆ ನೌಕರ ರವೀಂದ್ರ ಕುಮಾರ್ ಪ್ರಮುಖ ಆರೋಪಿಯಾಗಿದ್ದಾನೆ. ತಾನು ಸರ್ಕಾರಿ ನೌಕರನೆಂದು ಬಿಂಬಿಸಿಕೊಂಡು, ಹೊಸಪೇಟೆಯಲ್ಲಿದ್ದುಕೊಂಡೇ ಕೊಪ್ಪಳ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈತನ ಪಾತ್ರದ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ.
ಅಂದಿನ ಆಯುಕ್ತರು ಹಾಗೂ ರವೀಂದ್ರ ಕುಮಾರ್ ಸೇರಿ ಈ ನಕಲಿ ಖಾತೆ ಸೃಷ್ಟಿಸಿದ್ದಾರೆಯೇ? ಹಣ ಯಾರ ಖಾತೆಗೆ ತಲುಪಿದೆ? ಎಂಬ ಪ್ರಶ್ನೆಗಳಿಗೆ ತನಿಖೆಯಿಂದಷ್ಟೇ ಉತ್ತರ ಸಿಗಬೇಕಿದೆ. ಸದ್ಯ ಪರಾರಿಯಾಗಿರುವ ರವೀಂದ್ರ ಕುಮಾರ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
