ಕೊಲಂಬಿಯಾ, ಆಗಸ್ಟ್ 10: ದಕ್ಷಿಣ ಅಮೆರಿಕದ ಕೊಲಂಬಿಯಾದಲ್ಲಿ ಸಂಭವಿಸಿದ 7.4 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ (Earthquake) 47 ಜನರು ಮೃತಪಟ್ಟಿದ್ದಾರೆ. ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಸ್ಥಿತಿ ತೀವ್ರ ಆತಂಕಕಾರಿಯಾಗಿದೆ. ಭೂಕಂಪದ ಕೇಂದ್ರಬಿಂದು ಕೊಲಂಬಿಯಾದ ಚೊಕೊ ಪ್ರದೇಶದ ‘ಸ್ಯಾನ್ ಜೋಸ್ ಡೆಲ್ ಪಾಲ್ಮಾರ್’ ಬಳಿ ದಾಖಲಾಗಿದೆ. ಇದರ ತೀವ್ರತೆ ರಾಜಧಾನಿ ಬೊಗೋಟಾ ಹಾಗೂ ನೆರೆರಾಷ್ಟ್ರಗಳಿಗೂ ಹಬ್ಬಿದೆ.
ಅಮೆರಿಕದ ಸ್ಥಳೀಯ ಸಮಯ ಬೆಳಿಗ್ಗೆ 7.34ಕ್ಕೆ ಸಂಭವಿಸಿದ ಈ ಭೂಕಂಪದ ಕೇಂದ್ರಬಿಂದು ಸ್ಯಾನ್ ಜೋಸ್ ಡೆಲ್ ಪಾಲ್ಮಾರ್‌ನಿಂದ ಪೂರ್ವಕ್ಕೆ ಸುಮಾರು 3 ಮೈಲಿ ದೂರದಲ್ಲಿದೆ. ಈ ಪ್ರಬಲ ಭೂಕಂಪಕ್ಕೆ ಕನಿಷ್ಠ 47 ಜನರು ಪ್ರಾಣ ಕಳೆದುಕೊಂಡಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಹತ್ತಾರು ಕಟ್ಟಡಗಳು ನೆಲಸಮಗೊಂಡಿದ್ದು, ಸಿಲುಕಿರುವವರನ್ನು ಹೊರತೆಗೆಯಲು ರಕ್ಷಣಾ ಕಾರ್ಯಪಡೆಗಳು ಶ್ರಮಿಸುತ್ತಿವೆ.
ಇದನ್ನೂ ಓದಿ: Japan Earthquake: ಜಪಾನ್‌ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ, ಕಟ್ಟಡಗಳು ನೆಲಸಮ
ಈ ಭೂಕಂಪವು ಕೊಲಂಬಿಯಾದ ಚೊಕೊ ಪ್ರದೇಶದ ಸ್ಯಾನ್ ಜೋಸ್ ಡೆಲ್ ಪಾಲ್ಮಾರ್ ಎಂಬ ಸಣ್ಣ ಪಟ್ಟಣದಲ್ಲಿ ಸಂಭವಿಸಿದೆ. ಇದು ರಾಜಧಾನಿ ಬೊಗೋಟಾದಿಂದ ಪಶ್ಚಿಮಕ್ಕೆ ಸುಮಾರು 400 ಕಿಲೋಮೀಟರ್ ದೂರದಲ್ಲಿದೆ. ಇದು ಸುಮಾರು 4,800 ಜನಸಂಖ್ಯೆಯನ್ನು ಹೊಂದಿದೆ. ಯುಎಸ್ ಜಿಯೋಲಾಜಿಕಲ್ ಸರ್ವೇ (USGS) ಮತ್ತು ಕೊಲಂಬಿಯಾದ ಭೂಕಂಪಶಾಸ್ತ್ರ ಸಂಸ್ಥೆಯ ಪ್ರಕಾರ, ಭೂಕಂಪವು ಭೂಮಿಯ ಅಡಿಯಲ್ಲಿ ಸುಮಾರು 107 ಕಿಲೋಮೀಟರ್ (66 ಮೈಲಿ) ಆಳದಲ್ಲಿ ಸಂಭವಿಸಿದೆ. ಈ ಭಾರಿ ಕಂಪನ ನೆರೆಯ ರಾಷ್ಟ್ರ ಎಕ್ವಡಾರ್‌ನಲ್ಲೂ ವರದಿಯಾಗಿದೆ.
ವಿಮಾನ ನಿಲ್ದಾಣಗಳ ಸ್ಥಗಿತ:
ಕಟ್ಟಡಗಳು ಮತ್ತು ಮೂಲಸೌಕರ್ಯಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ಪಶ್ಚಿಮ ಕೊಲಂಬಿಯಾದ 6 ಪ್ರಮುಖ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: Peru Earthquake: ಪೆರುವಿನಲ್ಲಿ ಅವಳಿ ಭೂಕಂಪ: 6 ಮಂದಿ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ,ಐತಿಹಾಸಿಕ ಚರ್ಚ್ ನೆಲಸಮ
ತುರ್ತು ರಕ್ಷಣಾ ಕಾರ್ಯಾಚರಣೆ:
‘ಕಾಲಿ’ ಸೇರಿದಂತೆ ವಿವಿಧ ನಗರಗಳಲ್ಲಿ ಕಟ್ಟಡಗಳ ಅಡಿಯಲ್ಲಿ ಜನರು ಸಿಲುಕಿರುವ ಶಂಕೆಯಿದ್ದು, ಸೇನೆ ಹಾಗೂ ದುರಂತ ನಿರ್ವಹಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪರಿಸ್ಥಿತಿ ತೀವ್ರ ಗಂಭೀರವಾಗಿದ್ದು, ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
