ಕರ್ನಾಟಕ ಉಚ್ಛ ನ್ಯಾಯಾಲಯImage Credit source: Karnataka High court website
ಬೆಂಗಳೂರು, ಜುಲೈ 04: ಸರ್ಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿದ್ದರೂ, ಕಳೆದ ಹತ್ತು ವರ್ಷಗಳಿಂದ ಮೂವರು ಅಭ್ಯರ್ಥಿಗಳು ಕೆಲಸಕ್ಕಾಗಿ ಕೋರ್ಟ್ ಮತ್ತು ಸರ್ಕಾರಿ ಕಚೇರಿಗಳ ನಡುವೆ ಅಲೆಯುತ್ತಿದ್ದಾರೆ. ಕರ್ನಾಟಕ ಹೈಕೋರ್ಟ್ (High Court) ಇವರ ಪರವಾಗಿ ಸ್ಪಷ್ಟ ಆದೇಶ ನೀಡಿದ್ದರೂ, ಇಂದಿಗೂ ಇವರಿಗೆ ನೇಮಕಾತಿ ಆದೇಶ ಪತ್ರ ಕೈಸೇರಿಲ್ಲ.
ಕಾನೂನು ಹೋರಾಟಕ್ಕಿಳಿದ ಅಭ್ಯರ್ಥಿಗಳು
ರಾಮನಗರ ಜಿಲ್ಲೆಯ ಹರೀಶ್ ಕುಮಾರ್ ಎಚ್.ಪಿ., ಕೊಪ್ಪಳ ಜಿಲ್ಲೆಯ ವಿಶ್ವನಾಥ್ ಮತ್ತು ವಿಜಯಪುರ ಜಿಲ್ಲೆಯ ಹಂಪಣ್ಣ ಕೊಲಕಾರ್ ಈ ಮೂವರೂ ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ‘ವರ್ಕ್ ಇನ್ಸ್‌ಪೆಕ್ಟರ್’ (Work Inspector) ಹುದ್ದೆಗೆ ಆಯ್ಕೆಯಾಗಿದ್ದರು. ಇಲಾಖೆಯು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ ಹೊರತಾಗಿಯೂ, ಕೆಲವು ಆಡಳಿತಾತ್ಮಕ ಕಾರಣಗಳನ್ನು ಮುಂದಿಟ್ಟುಕೊಂಡು ಇವರಿಗೆ ನೇಮಕಾತಿ ಪತ್ರ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಈ ಮೂವರು ಅಭ್ಯರ್ಥಿಗಳು ಕಾನೂನು ಹೋರಾಟ ಆರಂಭಿಸಿದ್ದರು.
ಹೈಕೋರ್ಟ್ ಆದೇಶಕ್ಕೂ ಬೆಲೆಯಿಲ್ಲವೇ?
ಸುದೀರ್ಘ ಹೋರಾಟದ ನಂತರ, 2026 ಮಾರ್ಚ್ 23ರಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಅಭ್ಯರ್ಥಿಗಳ ಪರವಾಗಿ ಮಹತ್ವದ ತೀರ್ಪು ನೀಡಿತು. “ಸಂಬಂಧಪಟ್ಟ ವೃಂದವನ್ನು (Cadre) ಸರ್ಕಾರ ತಿದ್ದುಪಡಿಗಳ ಮೂಲಕ ರದ್ದುಗೊಳಿಸಿದ್ದರೂ, ಅರ್ಜಿದಾರರಿಗೆ ಉದ್ಯೋಗ ನಿರಾಕರಿಸುವಂತಿಲ್ಲ. ಅವರನ್ನು ತತ್ಸಮಾನ ಹುದ್ದೆಗಳಲ್ಲಿ ನಿಯೋಜಿಸಬೇಕು” ಎಂದು ತಿಳಿಸಿದ ಕೋರ್ಟ್, ಎರಡು ತಿಂಗಳ ಒಳಗಾಗಿ ಇವರಿಗೆ ನೇಮಕಾತಿ ಆದೇಶ ನೀಡುವಂತೆ ಸರ್ಕಾರಕ್ಕೆ ಗಡುವು ವಿಧಿಸಿತ್ತು. ಆದರೆ, ಆ ಗಡುವು ಮುಗಿದರೂ ತಾಂತ್ರಿಕ ಕಾರಣಗಳನ್ನು ಹೇಳಿ ಅಧಿಕಾರಿಗಳು ಪ್ರಕ್ರಿಯೆಯನ್ನು ಮುಂದೂಡುತ್ತಿದ್ದಾರೆ.
ಅಭ್ಯರ್ಥಿಗಳ ಅಳಲು
ಈ ಸುದೀರ್ಘ ಕಾನೂನು ಹೋರಾಟದ ನಡುವೆ ನಾವು ಇತರೆ ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸುವ ವಯೋಮಿತಿಯನ್ನು ಮೀರಿದ್ದೇವೆ. ಇದರಿಂದ ಬೇರೆ ಉದ್ಯೋಗದ ಅವಕಾಶಗಳೂ ನಮಗೆ ಬಂದ್ ಆಗಿವೆ. ಹಣಕಾಸಿನ ಮುಗ್ಗಟ್ಟು, ಕುಟುಂಬದ ಜವಾಬ್ದಾರಿಗಳ ಮಧ್ಯೆ ಬೆಂಗಳೂರಿನ ಕೋರ್ಟ್‌ಗೆ ಅಲೆದಾಡಿ ಸುಸ್ತಾಗಿದ್ದೇವೆ ಎಂದು ಈ ಮೂವರೂ ಅಳಲು ತೋಡಿಕೊಂಡಿದ್ದಾರೆ.
ಸದ್ಯ ಅಭ್ಯರ್ಥಿಗಳು ಹೊಸ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದು, ನಾವು ಈಗ ಕೇವಲ ಕೆಲಸಕ್ಕಾಗಿ ಹೋರಾಡುತ್ತಿಲ್ಲ, ನಮಗಾದ ಅನ್ಯಾಯದ ವಿರುದ್ಧದ ನ್ಯಾಯ ಮತ್ತು ಘನತೆಗಾಗಿ ಹೋರಾಡುತ್ತಿದ್ದೇವೆ ಎಂದು ಕಣ್ಣೀರಿಟ್ಟಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
