ಕೋರ್ಟ್​​ನಲ್ಲೇ ವಾಮಾಚಾರ ನಡೆಸಿದ ಆರೋಪ: 65 ವರ್ಷದ ಮಹಿಳೆ ಬಂಧಿಸಿದ ಚಿಕ್ಕಬಳ್ಳಾಪುರ ಪೊಲೀಸರು – Kannada News | 65 Year Old Woman Arrested for Performing Black Magic on Judge’s Chair Inside Court Hall

ಕೋರ್ಟ್​​ನಲ್ಲೇ ವಾಮಾಚಾರ ನಡೆಸಿದ ಆರೋಪ: ಮಹಿಳೆ ಅರೆಸ್ಟ್​Image Credit source: ANI

ಚಿಕ್ಕಬಳ್ಳಾಪುರ, ಜುಲೈ 14: ನ್ಯಾಯಾಧೀಶರ ಕುರ್ಚಿಯ ಮೇಲೆ ವಾಮಾಚಾರ ನಡೆಸಿದ ಆರೋಪದಡಿ 65 ವರ್ಷದ ಮಹಿಳೆಯನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮಂಜುಳಾ ಎಂದು ಗುರುತಿಸಲಾಗಿದೆ. ಚಿಕ್ಕಬಳ್ಳಾಪುರದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಕೋರ್ಟ್‌ ಹಾಲ್‌ಗೆ ಪ್ರವೇಶಿಸಿದ್ದ ಈಕೆ, ನ್ಯಾಯಾಧೀಶರ ಕುರ್ಚಿಯ ಮೇಲೆ ಮಂತ್ರಿಸಿದ ಬಿಳಿ ಸಾಸಿವೆ ಕಾಳುಗಳನ್ನು ಎರಚಿದ್ದಾಳೆ ಎನ್ನಲಾಗಿದೆ.

ಆರೋಪಿ ಮಹಿಳೆಗೆ 14 ದಿನ ನ್ಯಾಯಾಂಗ ಬಂಧನ

ಎರಡು ದಿನಗಳ ಹಿಂದೆ ಮಹಿಳೆ ವಾಮಾಚಾರ ನಡೆಸಿದ್ದಾಳೆ ಎನ್ನಲಾಗಿರುವ ಘಟನೆ ನ್ಯಾಯಾಲಯದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದರಲ್ಲಿ ಮಹಿಳೆ ನ್ಯಾಯಾಧೀಶರ ಕುರ್ಚಿಯ ಮೇಲೆ ಬಿಳಿ ಸಾಸಿವೆ ಕಾಳುಗಳನ್ನು ಎರಚುತ್ತಿರುವುದು ಕಂಡುಬಂದಿದೆ. ಈ ಕುರಿತು ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ನೇತ್ರಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮಹಿಳೆಯನ್ನು ಬಂಧಿಸಿದ್ದಾರೆ. ಈಕೆ ವಿರುದ್ಧ ಕರ್ನಾಟಕ ಅಮಾನವೀಯ ದುಷ್ಟ ಆಚರಣೆಗಳು ಮತ್ತು ಮಾಟ-ಮಂತ್ರಗಳ ತಡೆ ಹಾಗೂ ನಿರ್ಮೂಲನೆ ಕಾಯ್ದೆ, 2017ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯವು ಆರೋಪಿ ಮಹಿಳೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇದನ್ನೂ ಓದಿ: ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆ, ಪುತ್ರನ ಬಂಧಿಸಿದ ಬಾಗೇಪಲ್ಲಿ ಪೊಲೀಸರು

ಇಷ್ಟು ದಿನ ಅಲ್ಲಲ್ಲಿ ವರದಿಯಾಗುತ್ತಿದ್ದ ಮಾಟ-ಮಂತ್ರ ಪ್ರಕರಣಗಳು ಈಗ ಕೋರ್ಟ್​​ ವರೆಗೂ ತಲುಪಿರುವುದು ಆತಂಕಕ್ಕೆ ಕಾರಣವಾಗಿದೆ. ಆರೋಪಿ ಮಹಿಳೆ ಯಾವ ಕಾರಣಕ್ಕಾಗಿ ವಾಮಾಚಾರ ನಡೆಸಲು ಮುಂದಾಗಿದ್ದಳು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ಸಂಬಂಧ ಪೊಲೀಸರಿಂದ ತನಿಖೆ ಮುಂದುವರಿದಿದ್ದು, ಸತ್ಯಾಸತ್ಯತೆ ಆ ಬಳಿಕವೇ ಬಹಿರಂಗಗೊಳ್ಳಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *