ನೀರುಪಾಲಾದ ಕಿರಣ್Image Credit source: Tv9 Kannada
ಕೋಲಾರ, ಏಪ್ರಿಲ್ 23: ಈಜಲು ಹೋಗಿ ನೀರುಪಾಲಾಗುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಲೇ ಇದ್ದು, ತಲಕಾಡು ಬಳಿ ಮೊನ್ನೆ ಮೊನ್ನೆಯಷ್ಟೇ ವಿದ್ಯಾರ್ಥಿನಿಯರು ನೀರುಪಾಲಾದ ಘಟನೆ ಮಾಸುವ ಮುನ್ನವೇ ಇತ್ತ ಕೋಲಾರದಲ್ಲಿಯೂ SSLC ಪರೀಕ್ಷೆ ಪಾಸ್ ಆದ ಖುಷಿಯಲ್ಲಿದ್ದ ಬಾಲಕನೋರ್ವ ಈಜಲು ಹೋಗಿ ಜಲಸಮಾಧಿಯಾಗಿರುವ ಘಟನೆ ನಡೆದಿದೆ. ಕಿರಣ್(15) ಮೃತ ಬಾಲಕನಾಗಿದ್ದು, ಎಸ್ಎಸ್ಎಲ್ಸಿ ಫಲಿತಾಂಶ ಬಂದ ಬಳಿಕ ಸ್ನೇಹಿತರ ಜೊತೆ ಈತ ಈಜಲು ತೆರಳಿದ್ದ ವೇಳೆ ಬಾವಿಯ ನೀರಲ್ಲಿ ಮುಳುಗಿ ಅವಘಡ ನಡೆದಿದೆ ಎನ್ನಲಾಗಿದೆ.
ರಘುಪತಿ ಎಂಬವರ ಪುತ್ರನಾದ ಕಿರಣ್, ಇಂದು ಎಸ್ಎಸ್ಎಲ್ಸಿ ಫಲಿತಾಂಶ ಬಂದ ಖುಷಿಯಲ್ಲಿದ್ದ. 625ಕ್ಕೆ 239 ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದ ಈತ ಪರೀಕ್ಷೆ ಪಾಸಾದೆ ಎಂದು ಸಂತಸಪಟ್ಟಿದ್ದ. ಆದರೆ ಈಜಲು ತೆರಳಿದ್ದ ಕಿರಣ್ ಸ್ಮಿಮ್ಮಿಂಗ್ ಬಾರದ ಕಾರಣ ಬಾವಿಯ ನೀರಲ್ಲಿ ಮುಳುಗಿದ್ದಾನೆ. ಘಟನೆ ಬೆನ್ನಲ್ಲೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕಿರಣ್ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಹುಡುಕಾಟ ನಡೆಯುತ್ತಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಕಾಲು ಜಾರಿ ಕೆರೆಗೆ ಬಿದ್ದ ಅಳಿಯನ ರಕ್ಷಣೆಗೆ ಹೋದ ಮಾವನೂ ಸಾವು; ಅತ್ತ ಪಿರಿಯಾಪಟ್ಟಣದಲ್ಲಿ ಇಬ್ಬರು ಯುವಕರು ನೀರು ಪಾಲು
ರಾಜ್ಯದಲ್ಲಿ ಸಾಲು ಸಾಲು ಅವಘಡ
- ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡಿನ ನಿಸರ್ಗಧಾಮದಲ್ಲಿ ಕಾವೇರಿ ನದಿಗೆ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರುಪಾಲಾಗಿರುವ ಘಟನೆ ಏಪ್ರಿಲ್ 21ಎಂದು ನಡೆದಿತ್ತು. ಅವಘಡದಲ್ಲಿ ಚಾರ್ವಿ(15), ರಮ್ಯಾ(16) ಪ್ರಾಣ ಕಳೆದುಕೊಂಡಿದ್ದರು.
- ಕಾಲು ಜಾರಿ ಕೆರೆಗೆ ಬಿದ್ದ ಬಾಲಕನ ರಕ್ಷಣೆ ಗೆ ಹೋದ ಮಾವನೂ ದಾರುಣವಾಗಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಎನ್. ಹೊಸಳ್ಳಿ ಗ್ರಾಮದಲ್ಲಿ ನಡೆದಿತ್ತು. ಪ್ರಭಾಕರ್ (45), ಪ್ರತೀಕ್ (12) ಏಪ್ರಿಲ್ 20ರಂದು ಮೃತಪಟ್ಟಿದ್ದರು.
- ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಪ್ರಾಣಬಿಟ್ಟಿರುವ ಘಟನೆ ಪಿರಿಯಾಪಟ್ಟಣದ ದೊಡ್ಡ ಹರವೆ ಗ್ರಾಮದ ಬಳಿ ಏಪ್ರಿಲ್ 19ರಂದು ನಡೆದಿತ್ತು. ಗಣೇಶ್ (22) ಮತ್ತು ಇಮ್ರಾನ್ (28) ಜಲಸಮಾಧಿಯಾಗಿದ್ದರು.
- ಕಾವೇರಿ ನದಿಯಲ್ಲಿ ಮುಳುಗಿ 6 ಜನ ದುರ್ಮರಣ ಹೊಂದಿರುವ ಘಟನೆ ಮೈಸೂರು ಜಿಲ್ಲೆ K.R.ನಗರದ ಅರ್ಕೇಶ್ವರ ದೇಗುಲದ ಬಳಿ ಏಪ್ರಿಲ್ 19ರಂದು ನಡೆದಿತ್ತು. ಬೆಂಗಳೂರಿನ ಯಾಸಿನ್(23) ಹಾಗೂ ಹೈಮಾ(13), ಊಟಿ ಮೂಲದ 38 ವರ್ಷದ ಸೈದ್ ಫಾತಿಮಾ, ಮೈಸೂರು ಜಿಲ್ಲೆಯ ನೇಹಾ(20), ಉಮೇರ್(7), ಅಫಿಯಾ(20) ಮೃತಪಟ್ಟಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 3:58 pm, Thu, 23 April 26
