ಹಾರೋಹಳ್ಳಿ, ಫೆ.24 : ಕೌಟುಂಬಿಕ ಸಮಸ್ಯೆ ಹಾಗೂ ಮಾನಸಿಕ ಖಿನ್ನತೆಯಿಂದ ನೊಂದು ಯುವಕನೊಬ್ಬ ನೇಣಿಗೆ ಶರಣಾಗಿರುವ ದಾರುಣ ಘಟನೆ ಮರಿಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಮಗನ ಸಾವಿನ ಸುದ್ದಿ ತಿಳಿದು ಆತನ ತಾಯಿಯೂ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಮರಿಗೌಡನದೊಡ್ಡಿ ಗ್ರಾಮದ ನಿವಾಸಿ ವಿಶಾಲ್ (25) ಎಂಬುವವರು ಜಕ್ಕಸಂದ್ರ ಗ್ರಾಮದ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದ ನಂತರ ವಿಶಾಲ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇದರ ಜೊತೆಗೆ ಕೌಟುಂಬಿಕ ಸಮಸ್ಯೆಗಳೂ ಅವರನ್ನು ಕಾಡುತ್ತಿದ್ದವು.
ಪ್ರೀತಿಯ ಮಗ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆಯೇ ಆಘಾತಕ್ಕೊಳಗಾದ ತಾಯಿ ಗೌರಮ್ಮ, ತಾವೂ ಸಹ ಜೀವನ ಅಂತ್ಯಗೊಳಿಸಲು ಮುಂದಾಗಿದ್ದಾರೆ. ತಕ್ಷಣವೇ ಗಮನಿಸಿದ ಸ್ಥಳೀಯರು ಅವರನ್ನು ರಕ್ಷಿಸಿದ್ದು, ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಸಾಲ ತೀರಿಸಲು ಕೆನರಾ, HDFC ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನ: ಸೈರನ್ ಸದ್ದಿಗೆ ಬೆದರಿ ಓಡಿದ್ದ ಕಳ್ಳ ಈಗ ಪೊಲೀಸ್ ವಶಕ್ಕೆ!
ವಿಶಾಲ್ ಅವರ ಕುಟುಂಬಕ್ಕೆ ಸಾವು ಹೊಸತಲ್ಲ. ಸುಮಾರು ನಾಲ್ಕು ವರ್ಷಗಳ ಹಿಂದೆ ವಿಶಾಲ್ ಅವರ ತಂದೆ ಕೂಡ ಯಾವುದೋ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದರು. ಈಗ ಮಗನೂ ತಂದೆಯ ಹಾದಿಯನ್ನೇ ಹಿಡಿದಿರುವುದು ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.ಘಟನೆಗೆ ಸಂಬಂಧಿಸಿದಂತೆ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
