ಖ್ಯಾತ ಹಿರಿಯ ಚಲನಚಿತ್ರ ನಿರ್ದೇಶಕ ಕೆ.ಸಿ. ಬೊಕಾಡಿಯಾ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಅಪಾರ ಸರಳತೆಯ ಕುರಿತು ನೆನಪಿನ ಬುತ್ತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ‘ಹಿಂದಿ ರಶ್’ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಜನಿಕಾಂತ್ ಅವರ (Rajinikanth) ನಮ್ರತೆ ಮತ್ತು ಅಹಂಕಾರವಿಲ್ಲದ ಗುಣವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ವಿವರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಗಮನ ಸೆಳೆದಿವೆ.
- ರಜನಿಕಾಂತ್ ಸರಳತೆ ಬಿಚ್ಚಿಟ್ಟ ನಿರ್ದೇಶಕ ಕೆ.ಸಿ. ಬೊಕಾಡಿಯಾ
- ವಾಹನ ಸಿಗದಿದ್ದರೂ ಶೂಟಿಂಗ್ ಸೆಟ್‌ಗೆ ಟ್ಯಾಕ್ಸಿಯಲ್ಲಿ ಬಂದ ರಜನಿ
- ಕೋಪ ಮಾಡಿಕೊಳ್ಳದೆ ಟ್ಯಾಕ್ಸಿ ಬಾಡಿಗೆ ಕೇಳಿದ ಸೂಪರ್‌ಸ್ಟಾರ್
ಸಿನಿಮಾ ಶೂಟಿಂಗ್ ಸೆಟ್‌ನ ಘಟನೆಯೊಂದನ್ನು ನೆನಪಿಸಿಕೊಂಡ ಬೊಕಾಡಿಯಾ, ‘ಒಮ್ಮೆ ರಜನಿಕಾಂತ್ ಅವರನ್ನು ಕರೆತರಲು ಸೆಟ್‌ನಿಂದ ಯಾರೂ ಹೋಗಿರಲಿಲ್ಲ. ಆದರೆ, ಇದಕ್ಕಾಗಿ ಅವರು ಯಾವುದೇ ಕೋಪ ಮಾಡಿಕೊಳ್ಳಲಿಲ್ಲ. ಬದಲಿಗೆ ತಾವೇ ಸ್ವತಃ ಒಂದು ಸಾಮಾನ್ಯ ಟ್ಯಾಕ್ಸಿ ಮಾಡಿಕೊಂಡು ಶೂಟಿಂಗ್ ಸೆಟ್‌ಗೆ ಬಂದು ತಲುಪಿದರು’ ಎಂದಿದ್ದಾರೆ.
ಅಷ್ಟಕ್ಕೇ ನಿಲ್ಲದ ರಜನಿಕಾಂತ್, ಸೆಟ್‌ಗೆ ಬಂದ ತಕ್ಷಣ ಅತ್ಯಂತ ವಿನಮ್ರವಾಗಿ ನಿರ್ದೇಶಕರ ಬಳಿ ಬಂದು, ‘ನನ್ನನ್ನು ಕರೆತರಲು ಯಾರೂ ಬರಲಿಲ್ಲ, ಹಾಗಾಗಿ ನಾನು ಟ್ಯಾಕ್ಸಿಯಲ್ಲಿ ಬಂದಿದ್ದೇನೆ. ದಯವಿಟ್ಟು ಆ ಟ್ಯಾಕ್ಸಿ ಚಾಲಕನಿಗೆ ಬಾಡಿಗೆ ಹಣ ಪಾವತಿಸಲು ಸ್ವಲ್ಪ ಹಣ ನೀಡುತ್ತೀರಾ?’ ಎಂದು ಅತ್ಯಂತ ಮರ್ಯಾದೆಯಿಂದ ಕೇಳಿದ್ದರು ಎಂದು ಬೊಕಾಡಿಯಾ ನೆನೆದಿದ್ದಾರೆ. ಕ್ಯಾಬ್ಗೆ ಹಣ ಕೊಡಲು ರಜನಿ ಬಳಿ ಹಣ ಇರಲಿಲ್ಲ.
ಇಷ್ಟು ದೊಡ್ಡ ಸೂಪರ್‌ಸ್ಟಾರ್ ಆಗಿದ್ದರೂ ರಜನಿಕಾಂತ್ ಅವರಿಗೆ ಯಾವುದೇ ರೀತಿಯ ಅಹಂ ಇರಲಿಲ್ಲ. ಅವರ ಈ ಅದ್ಭುತ ನಮ್ರತೆ ಮತ್ತು ಸರಳ ಗುಣವೇ ಅವರನ್ನು ಇಂದು ಇಷ್ಟು ಎತ್ತರಕ್ಕೆ ಬೆಳೆಸಿದೆ ಎಂದು ಕೆ.ಸಿ. ಬೊಕಾಡಿಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಜನಿಕಾಂತ್ ಅವರ ಈ ಹಳೆಯ ಅಪರೂಪದ ಕಥೆ ಈಗ ಸಿನಿ ಪ್ರೇಮಿಗಳ ಮನ ಗೆಲ್ಲುತ್ತಿದೆ.
ಇದನ್ನೂ ಓದಿ: ರಜನಿಕಾಂತ್ ಅವರ ಈ ಚಿತ್ರದಿಂದ ಸ್ಫೂರ್ತಿ ಪಡೆದಿದೆ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ
ಟ್ಯಾಕ್ಸಿ ಕಳಿಸಿಲ್ಲ ಎಂದು ರಜನಿಕಾಂತ್ ಅವರು ಬಂದು ತಮ್ಮ ಕೋಪ ಹೊರಹಾಕಬಹಹುದಿತ್ತು. ಆದರೆ, ಅವರು ಆರೀತಿ ಮಾಡಿಲ್ಲ. ಇದು ರಜನಿಕಾಂತ್ ಅವರ ಹೆಚ್ಚುಗಾರಿಕೆ. ಇದು ಅನೇಕರಿಗೆ ಮಾದರಿ ಆಗುವಂಥದ್ದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
