ಕ್ಯಾರಿ ಬ್ಯಾಗ್​ಗೆ ₹10 ವಸೂಲಿ; ಶೂ ಕಂಪನಿಗೆ ಬಿತ್ತು ₹8,000 ದಂಡ; ಇದು ವ್ಯಾಪಾರಿಗಳು, ಗ್ರಾಹಕರಿಗೆ ಕಣ್ತೆರೆಸುವ ಪ್ರಕರಣ – Kannada News | Carrybag charge by Red Tape, consumer wins case in Haryana court, footwear company gets huge fine

ನವದೆಹಲಿ, ಜೂನ್ 18: ಖ್ಯಾತ ಶೂ ಬ್ರ್ಯಾಂಡ್ ಆದ ‘ರೆಡ್ ಟೇಪ್’ (Red Tape Ltd) ಗ್ರಾಹಕರೊಬ್ಬರಿಗೆ ಕ್ಯಾರಿ ಬ್ಯಾಗ್ ನೀಡಲು ₹10 ಹೆಚ್ಚುವರಿ ಶುಲ್ಕ ವಸೂಲಿ ಮಾಡಿದ್ದಕ್ಕಾಗಿ ಹರಿಯಾಣದ ಗ್ರಾಹಕ ನ್ಯಾಯಾಲಯವು ಕಂಪನಿಗೆ ಭಾರಿ ದಂಡ ವಿಧಿಸಿದೆ. ಈ ₹10 ಮೊತ್ತವನ್ನು ಗ್ರಾಹಕನಿಗೆ ವಾಪಸ್ ನೀಡುವಂತೆ ಮತ್ತು ಮಾನಸಿಕ ಕಿರಿಕಿರಿ ಹಾಗೂ ಕಾನೂನು ವೆಚ್ಚಕ್ಕಾಗಿ ಒಟ್ಟು ₹8,000 ಪರಿಹಾರ ನೀಡುವಂತೆ ಆದೇಶಿಸಿದೆ.

ಹರಿಯಾಣದ ರೋಹ್ಟಕ್ ನಿವಾಸಿಯಾದ 27 ವರ್ಷದ ಅನಿಲ್ ಕುಮಾರ್ ಎಂಬ ಗ್ರಾಹಕರು ಏಪ್ರಿಲ್ 1, 2023 ರಂದು ಸ್ಥಳೀಯ ರೆಡ್ ಟೇಪ್ ಶೋರೂಮ್‌ನಿಂದ ₹2,069.70 ಮೌಲ್ಯದ ಕಪ್ಪು ಬಣ್ಣದ ಶೂಗಳನ್ನು ಖರೀದಿಸಿದ್ದರು. ಬಿಲ್ ಮಾಡುವಾಗ ಶೋರೂಮ್ ಸಿಬ್ಬಂದಿ ಕ್ಯಾರಿ ಬ್ಯಾಗ್‌ಗಾಗಿ ಪ್ರತ್ಯೇಕವಾಗಿ ₹10 ವಸೂಲಿ ಮಾಡಿದ್ದರು. ಗ್ರಾಹಕರು ಉಚಿತವಾಗಿ ಬ್ಯಾಗ್ ನೀಡುವಂತೆ ವಿನಂತಿಸಿದರೂ, ಇದು ‘ಕಂಪನಿ ಪಾಲಿಸಿ’ ಎಂದು ಸಿಬ್ಬಂದಿ ನಿರಾಕರಿಸಿದ್ದರು. ಇದರಿಂದ ಅಸಮಾಧಾನಗೊಂಡ ಗ್ರಾಹಕರು ಗ್ರಾಹಕ ವೇದಿಕೆಯ ಮೆಟ್ಟಿಲೇರಿದ್ದರು.

ನ್ಯಾಯಾಲಯದ ತೀರ್ಪಿನ ಮುಖ್ಯಾಂಶಗಳು

ರೋಹ್ಟಕ್‌ನ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗದ (District Consumer Commission) ಅಧ್ಯಕ್ಷ ನಾಗೇಂದರ್ ಸಿಂಗ್ ಕಾಡಿಯನ್ ನೇತೃತ್ವದ ಪೀಠವು ಜೂನ್ 12 ರಂದು ಈ ಮಹತ್ವದ ತೀರ್ಪನ್ನು ನೀಡಿದೆ:

ಗ್ರಾಹಕರಿಂದ ಕ್ಯಾರಿ ಬ್ಯಾಗ್‌ಗಾಗಿ ಪ್ರತ್ಯೇಕವಾಗಿ ₹10 ವಸೂಲಿ ಮಾಡಿರುವುದು ‘ಸೇವೆಯಲ್ಲಿನ ನ್ಯೂನತೆ’ (Deficiency in Service) ಮತ್ತು ‘ಅನ್ಯಾಯದ ವ್ಯಾಪಾರ ಪದ್ಧತಿ’ (Unfair Trade Practice) ಎಂದು ನ್ಯಾಯಾಲಯ ಖಂಡಿಸಿದೆ.

ಇದನ್ನೂ ಓದಿ: 2025-26ಕ್ಕೆ ಶೇ. 8.25 ಇಪಿಎಫ್ ಬಡ್ಡಿಗೆ ಅನುಮೋದನೆ; ಸಕ್ರಿಯವಲ್ಲದ ಇಪಿಎಫ್ ಖಾತೆಗಳಿಗೂ ಸಿಗುತ್ತಾ ಹಣ?

ಗ್ರಾಹಕರು ಖರೀದಿಸಿದ ವಸ್ತುವನ್ನು ಸುಲಭವಾಗಿ ಕೊಂಡೊಯ್ಯುವ ಸ್ಥಿತಿಯಲ್ಲಿ (Deliverable State) ಒದಗಿಸುವುದು ವ್ಯಾಪಾರಿಗಳು ಮತ್ತು ಕಂಪನಿಗಳ ಮೂಲಭೂತ ಕರ್ತವ್ಯವಾಗಿದೆ. ಈ ಬ್ಯಾಗ್‌ಗಳ ವೆಚ್ಚವನ್ನು ಕಂಪನಿಗಳೇ ತಮ್ಮ ವ್ಯವಹಾರದ ನಿರ್ವಹಣಾ ವೆಚ್ಚವಾಗಿ ಭರಿಸಬೇಕೇ ವಿನಃ ಗ್ರಾಹಕರ ಮೇಲೆ ಹೇರಬಾರದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ರೆಡ್ ಟೇಪ್ ಕಂಪನಿಯ ವಾದವೇನಿತ್ತು?

ಪರಿಸರ ಸ್ನೇಹಿ ಅಭ್ಯಾಸಗಳನ್ನು ಉತ್ತೇಜಿಸಲು ಮತ್ತು ಪ್ಲಾಸ್ಟಿಕ್/ಬ್ಯಾಗ್‌ಗಳ ಅನಗತ್ಯ ಬಳಕೆಯನ್ನು ಕಡಿಮೆ ಮಾಡಲು ಈ ಶುಲ್ಕವನ್ನು ವಿಧಿಸಲಾಗುತ್ತಿದೆ. ಹಾಗೂ ಗ್ರಾಹಕರು ತಮ್ಮ ಸ್ವಂತ ಬ್ಯಾಗ್ ತರಲು ಮುಂಚಿತವಾಗಿ ತಿಳಿಸಲಾಗುತ್ತದೆ ಎಂದು ರೆಡ್ ಟೇಪ್ ಕಂಪನಿಯು ತನ್ನ ಸಮರ್ಥನೆಯಲ್ಲಿ ವಾದಿಸಿತ್ತು. ಆದರೆ, ಕಂಪನಿಯು ಸಲ್ಲಿಸಿದ ಅಫಿಡವಿಟ್‌ನಲ್ಲೇ ಈ ಶುಲ್ಕ ಅನಗತ್ಯವಾಗಿತ್ತು ಎಂಬುದನ್ನು ಒಪ್ಪಿಕೊಳ್ಳುವಂತಹ ಹೇಳಿಕೆಗಳಿದ್ದವು ಎಂಬುದನ್ನು ಕಮಿಷನ್ ಗಮನಿಸಿದೆ.

ಗ್ರಾಹಕ ನ್ಯಾಯಾಲಯ ನೀಡಿದ ತೀರ್ಪು

ಮೂರು ವರ್ಷಗಳ ಕಾನೂನು ಪ್ರಕ್ರಿಯೆಯ ನಂತರ ಗ್ರಾಹಕನ ಪರವಾಗಿ ತೀರ್ಪು ಬಂದಿದ್ದು, ರೆಡ್ ಟೇಪ್ ಕಂಪನಿಗೆ ಈ ಕೆಳಗಿನ ನಿರ್ದೇಶನಗಳನ್ನು ನೀಡಲಾಗಿದೆ:

  • ಗ್ರಾಹಕರಿಂದ ಪಡೆದ ₹10 ಕ್ಯಾರಿ ಬ್ಯಾಗ್ ವೆಚ್ಚವನ್ನು ತಕ್ಷಣವೇ ಹಿಂತಿರುಗಿಸಬೇಕು.
  • ಸೇವೆಯಲ್ಲಿನ ನ್ಯೂನತೆಗಾಗಿ ₹4,000 ಪರಿಹಾರ ನೀಡಬೇಕು.
  • ಗ್ರಾಹಕನ ಕಾನೂನು ಹೋರಾಟದ ವೆಚ್ಚವಾಗಿ (Litigation Expenses) ಹೆಚ್ಚುವರಿ ₹4,000 ನೀಡಬೇಕು.

ಕೋರ್ಟ್ ಈ ಆದೇಶವನ್ನು 30 ದಿನಗಳ ಒಳಗಾಗಿ ಪಾಲಿಸುವಂತೆ ಕಂಪನಿಗೆ ಗಡುವು ನೀಡಿದೆ. ಒಂದು ವೇಳೆ ವಿಳಂಬ ಮಾಡಿದರೆ, ಗ್ರಾಹಕನಿಗೆ ಪ್ರತಿ ವಾರಕ್ಕೆ ₹50 ರಂತೆ ಹೆಚ್ಚುವರಿ ದಂಡವನ್ನು ಕಂಪನಿ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ಪಿಎಂ ಕಿಸಾನ್ 23ನೇ ಕಂತು ಬಿಡುಗಡೆ ದಿನಾಂಕ ಪ್ರಕಟ; ಇನ್ನೆರಡು ದಿನದಲ್ಲಿ ರೈತರ ಖಾತೆಗೆ ಬರಲಿದೆ 2,000 ರೂ

ದೊಡ್ಡ ಬ್ರ್ಯಾಂಡ್‌ಗಳು ಮತ್ತು ಮಾಲ್‌ಗಳು ಬ್ರಾಂಡಿಂಗ್ ಹೊಂದಿರುವ ಕ್ಯಾರಿ ಬ್ಯಾಗ್‌ಗಳಿಗೆ ಗ್ರಾಹಕರಿಂದ ಕಡ್ಡಾಯವಾಗಿ ಹಣ ವಸೂಲಿ ಮಾಡುವುದು ಕಾನೂನುಬಾಹಿರ ಎಂಬುದನ್ನು ಈ ತೀರ್ಪು ಮತ್ತೊಮ್ಮೆ ಸಾಬೀತುಪಡಿಸಿದೆ. ಬೆಂಗಳೂರು ಸೇರಿದಂತೆ ದೇಶಾದ್ಯಂತ ಬಹುತೇಕ ಎಲ್ಲಾ ಮಾಲ್​ಗಳು, ದೊಡ್ಡ ಅಂಗಡಿಗಳಲ್ಲಿ ಕ್ಯಾರಿ ಬ್ಯಾಗ್​ಗಳಿಗೆ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ. ರೋಹ್ಟಕ್​ನ ಗ್ರಾಹಕ ನ್ಯಾಯಾಲಯದ ನೀಡಿದ ತೀರ್ಪು ಬಿಗ್ ಬಜಾರ್ ಇತ್ಯಾದಿ ಈ ಅಂಗಡಿ ಮುಂಗಟ್ಟುಗಳಿಗೆ ಎಚ್ಚರಿಕೆಯ ಪಾಠವಾಗಬಹುದು, ಗ್ರಾಹಕರಿಗೆ ಅರಿವು ಮೂಡಿಸಲು ಸಹಾಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *