ನವದೆಹಲಿ, ಜುಲೈ 1: ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಅಂತ್ಯಕ್ರಿಯೆಗೆ ಭಾರತದ ಪ್ರಮುಖ ರಾಜಕೀಯ ಮುಖಂಡರಿಗೆ ಆಹ್ವಾನ ಬಂದಿದೆ. ಇರಾನ್‌ನ ದಿವಂಗತ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭಾರತದ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇರಾನ್ ಸರ್ಕಾರ ಅಧಿಕೃತ ಆಹ್ವಾನ ನೀಡಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹತರಾಗಿದ್ದ ಖಮೇನಿ ಅವರ ಅಂತಿಮ ಸಂಸ್ಕಾರದ ವಿಧಿವಿಧಾನಗಳು ಮುಂದಿನ ವಾರ ಇರಾನ್‌ನಲ್ಲಿ ಜರುಗಲಿವೆ.
ಭಾರತ ಸರ್ಕಾರದ ಪರವಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪವಿತ್ರ ಮಾರ್ಗರಿಟಾ ಮತ್ತು ಬಿಹಾರದ ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರು ಈ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸುವ ಸಾಧ್ಯತೆಯಿದೆ. ಭಾರತದಲ್ಲಿ ಸದ್ಯ ಸಾಂವಿಧಾನಿಕ ಹುದ್ದೆಯಲ್ಲಿರುವ ಶಿಯಾ ಸಮುದಾಯದ ಕೆಲವೇ ಕೆಲವು ಗಣ್ಯರಲ್ಲಿ ಒಬ್ಬರಾಗಿರುವ ಬಿಹಾರದ ರಾಜ್ಯಪಾಲ ಹಸ್ನೈನ್ ಮತ್ತು ಸಚಿವ ಮಾರ್ಗರಿಟಾ ಅವರು ಜುಲೈ 4ರಂದು ಟೆಹ್ರಾನ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಕಳೆದ ವಾರವಷ್ಟೇ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು ಪ್ರಧಾನಿ ನರೇಂದ್ರ ಮೋದಿಗೂ ಈ ಅಂತ್ಯಕ್ರಿಯೆಯ ಆಹ್ವಾನ ಪತ್ರಿಕೆಯನ್ನು ಕಳುಹಿಸಿದ್ದರು. ಭಾರತದ ವತಿಯಿಂದ ಯಾರು ಭಾಗವಹಿಸಲಿದ್ದಾರೆ ಎಂಬ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲವಾದರೂ, ಪ್ರಧಾನಿ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಇರಾನ್ ಮನವಿ ಮಾಡಿದ್ದರಿಂದ ನಾಳೆ ದೋಹಾದಲ್ಲಿ ಮಾತುಕತೆ; ಅಮೆರಿಕ ಅಧ್ಯಕ್ಷ ಟ್ರಂಪ್ ಮಾಹಿತಿ
ಭಾರತ ಮಾತ್ರವಲ್ಲದೆ ಚೀನಾ, ರಷ್ಯಾ, ಪಾಕಿಸ್ತಾನ ಮತ್ತು ಕತಾರ್ ದೇಶಗಳ ಪ್ರಮುಖ ನಾಯಕರಿಗೂ ಇರಾನ್ ಆಹ್ವಾನ ನೀಡಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ತಮ್ಮ ದೇಶದ ಅಧಿಕೃತ ನಿಯೋಗವೊಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದೆ ಎಂದು ಈಗಾಗಲೇ ಖಚಿತಪಡಿಸಿದ್ದಾರೆ.
ಫೆಬ್ರವರಿಯಲ್ಲಿ ಖಮೇನಿ ಮೃತಪಟ್ಟ ನಂತರ ಇರಾನ್ ಸರ್ಕಾರವು ಅಂತ್ಯಕ್ರಿಯೆಯ ದಿನಾಂಕವನ್ನು ಹಲವು ಬಾರಿ ಬದಲಾಯಿಸಿತ್ತು. ಆದರೆ ಜೂನ್ ತಿಂಗಳಲ್ಲಿ ಅಂತಿಮ ನಿರ್ಧಾರಕ್ಕೆ ಬಂದಿರುವ ಇರಾನ್ ಅಧಿಕಾರಿಗಳು, ಖಮೇನಿ ಅವರ ಅಂತ್ಯಸಂಸ್ಕಾರದ ಸಂಪೂರ್ಣ ವಿವರಗಳನ್ನು ಬಿಡುಗಡೆ ಮಾಡಿದ್ದಾರೆ.
ಇರಾನ್ ಸರ್ಕಾರಿ ಮಾಧ್ಯಮಗಳ ಪ್ರಕಾರ, ಜುಲೈ 6ರಂದು ಟೆಹ್ರಾನ್, ಜುಲೈ 7ರಂದು ಕೋಮ್ ಮತ್ತು ಜುಲೈ 9ರಂದು ಮಶಾದ್ ನಗರಗಳಲ್ಲಿ ಅಂತಿಮ ದರ್ಶನ ಹಾಗೂ ಶೋಕಾಚರಣೆ ಸಭೆಗಳು ನಡೆಯಲಿವೆ. ನಂತರ ಜುಲೈ 9ರಂದು ಇಮಾಮ್ ರೆಜಾ ಅವರ ಪವಿತ್ರ ದರ್ಗಾದಲ್ಲಿ ಖಮೇನಿಯ ಪಾರ್ಥಿವ ಶರೀರವನ್ನು ದಫನ ಮಾಡಲಾಗುವುದು.
ಇದನ್ನೂ ಓದಿ: ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಗೆ ಪ್ರಧಾನಿ ಮೋದಿಗೆ ಆಹ್ವಾನ
1989ರಿಂದ 2026ರವರೆಗೆ ದೀರ್ಘಕಾಲದವರೆಗೆ ಇರಾನ್ ದೇಶವನ್ನು ಮುನ್ನಡೆಸಿದ್ದ ಅಲಿ ಖಮೇನಿ ಅವರ ಅಂತ್ಯಕ್ರಿಯೆಯನ್ನು ಶಿಯಾ ಮುಸ್ಲಿಮರ ಪವಿತ್ರ ಶೋಕಾಚರಣೆಯ ಮಾಸವಾದ ‘ಮೊಹರಂ’ ಸಮಯದಲ್ಲಿ ಆಯೋಜಿಸಲಾಗಿದೆ. ಆರಂಭದಲ್ಲಿ ಮಾರ್ಚ್ 4ರಂದೇ ಅಂತ್ಯಕ್ರಿಯೆ ನಡೆಸಲು ಯೋಜಿಸಲಾಗಿತ್ತು. ಆದರೆ ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿದ ನಂತರ ಇರಾನ್-ಅಮೆರಿಕ ಯುದ್ಧ ಆರಂಭವಾಗಿದ್ದರಿಂದ ಅಂತ್ಯಕ್ರಿಯೆಯನ್ನು ಮುಂದೂಡಲಾಗಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
