ಖಾಕಿ ಪಡೆಯ ಮಾನವೀಯತೆ: 73 ವೃದ್ಧರು ಹಾಗೂ ಒಂಟಿ ಮಹಿಳೆಯರ ಬಾಳಿಗೆ ಆಸರೆಯಾದ ವಿಜಯಪುರ ಪೊಲೀಸರು! – Kannada News | Karnataka Police Community Outreach: Vijayapura Cops Help 73 Access Social Benefits

ವಿಜಯಪುರ, ಮೇ.13: ಅಪರಾಧ ಕೃತ್ಯಗಳ ತನಿಖೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ಪೊಲೀಸರ ಕೆಲಸ ಎಂದು ಭಾವಿಸಿದವರಿಗೆ ವಿಜಯಪುರ ಜಿಲ್ಲಾ ಪೊಲೀಸರು ತಮ್ಮ ಸಮಾಜಮುಖಿ ಕಾರ್ಯದ ಮೂಲಕ ಹೊಸ ಮಾದರಿ ತೋರಿದ್ದಾರೆ. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದ 73 ಜನ ವೃದ್ಧರು ಮತ್ತು ಒಂಟಿ ಮಹಿಳೆಯರ ಮನೆ ಬಾಗಿಲಿಗೆ ತೆರಳಿ ಅವರಿಗೆ ವಿವಿಧ ಯೋಜನೆಗಳ ಸೌಲಭ್ಯ ದೊರಕಿಸಿಕೊಡುವ ಮೂಲಕ ಪೊಲೀಸರು ‘ಆಸರೆ’ಯಾಗಿದ್ದಾರೆ.

ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನ ಪಿಂಚಣಿ, ಇಂದಿರಾ ಪಿಂಚಣಿ, ಸಂಧ್ಯಾ ಸುರಕ್ಷಾ ಮತ್ತು ಭಾಗ್ಯ ಜ್ಯೋತಿಯಂತಹ ಹತ್ತಾರು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಪೊಲೀಸರು ಫಲಾನುಭವಿಗಳಿಗೆ ನೆರವಾಗಿದ್ದಾರೆ.ಪೊಲೀಸರ ಈ ವಿಶೇಷ ಕಾಳಜಿಯಿಂದಾಗಿ 14 ಮಂದಿಗೆ ವೃದ್ಧಾಪ್ಯ ವೇತನ, 16 ಮಹಿಳೆಯರಿಗೆ ವಿಧವಾ ವೇತನ ಹಾಗೂ 8 ಮಂದಿಗೆ ವಿಕಲಚೇತನ ಪಿಂಚಣಿ ಲಭಿಸಿದೆ. ಅಲ್ಲದೆ, 10 ವೃದ್ಧರಿಗೆ ಹಿರಿಯ ನಾಗರಿಕರ ಗುರುತಿನ ಚೀಟಿ ದೊರಕಿಸಿಕೊಡಲಾಗಿದೆ.

ಇದನ್ನೂ ಓದಿ: ಬೆಳಗಾವಿ ಪಾಲಿಕೆಯಲ್ಲಿ ಗಡಿ ಸಮರ; ‘ಕರ್ನಾಟಕ ಪರ ಗೊತ್ತುವಳಿ’ ಮಂಡನೆ ವೇಳೆ ಎಂಇಎಸ್ ಸದಸ್ಯರ ಕಿರಿಕ್!

ಕೇವಲ ಪಿಂಚಣಿ ಅಷ್ಟೇ ಅಲ್ಲದೆ, 3 ವೃದ್ಧೆಯರಿಗೆ ಉಚಿತ ಕಣ್ಣಿನ ಚಿಕಿತ್ಸೆ ಕೊಡಿಸಲಾಗಿದೆ ಹಾಗೂ 4 ಮಂದಿಗೆ ಅಂಚೆ ಬ್ಯಾಂಕ್ ಖಾತೆಗಳನ್ನು ತೆರೆಯಿಸಿಕೊಡಲಾಗಿದೆ. ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿರುವ ಭಯವನ್ನು ಹೋಗಲಾಡಿಸಿ, ವಿಶ್ವಾಸ ಮೂಡಿಸುವಲ್ಲಿ ಈ ‘ಆಸರೆ’ ಕಾರ್ಯಕ್ರಮ ಯಶಸ್ವಿಯಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *