Headlines

ಖಾಸಗಿ ರಾಕೆಟ್ ‘ವಿಕ್ರಮ್-1’ ಉಡಾವಣೆ ಯಶಸ್ವಿ: ಸ್ಕೈರೂಟ್ ತಂಡದೊಂದಿಗೆ ಮಾತನಾಡಿ, ಅಭಿನಂದಿಸಿದ ಪ್ರಧಾನಿ ಮೋದಿ – Kannada News | Vikram 1 Rocket Launch: India’s Private Space Triumph and Skyroot’s Historic Feat

ಶ್ರೀಹರಿಕೋಟ, ಜುಲೈ 18: ಭಾರತದ ಪ್ರಪ್ರಥಮ ಖಾಸಗಿ ರಾಕೆಟ್ ‘ವಿಕ್ರಮ್-1’ (Vikram-1)ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಈ ದೊಡ್ಡ ಸಾಧನೆಯ ಬೆನ್ನಲ್ಲೇ ಸ್ಕೈರೂಟ್ ಏರೋಸ್ಪೇಸ್ ತಂಡದೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದು ಭಾರತದ ಬಾಹ್ಯಾಕಾಶ ಪಯಣದಲ್ಲಿ ಅತ್ಯಂತ ನಿರ್ಣಾಯಕ ಕ್ಷಣವಾಗಿದೆ. ನಮ್ಮ ಖಾಸಗಿ ವಲಯದ ಹೆಚ್ಚುತ್ತಿರುವ ಪಾಲ್ಗೊಳ್ಳುವಿಕೆಯು ಹೊಸ ಆವಿಷ್ಕಾರಗಳಿಗೆ ದಾರಿ ಮಾಡಿಕೊಡುತ್ತಿದೆ. ಈ ಮಹಾನ್ ಸಾಧನೆಯು ದೇಶದ ಲಕ್ಷಾಂತರ ಯುವಕರು ದೊಡ್ಡದಾಗಿ ಕನಸು ಕಾಣಲು ಮತ್ತು ನಿರ್ಭಯವಾಗಿ ಆವಿಷ್ಕಾರಗಳನ್ನು ಮಾಡಲು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ಈ ಮಿಷನ್ ಏಕೆ ಇಷ್ಟೊಂದು ವಿಶೇಷ?
ಇಸ್ರೋ ಮಾಜಿ ವಿಜ್ಞಾನಿಗಳ ಕನಸು: ಹೈದರಾಬಾದ್ ಮೂಲದ ಸ್ಕೈರೂಟ್ ಸಂಸ್ಥೆಯನ್ನು ಇಸ್ರೋದ (ISRO) ಮಾಜಿ ವಿಜ್ಞಾನಿಗಳಾದ ಪವನ್ ಚಂದ್ನಾ ಮತ್ತು ನಾಗಾ ಭರತ್ ಡಾಕಾ ಸ್ಥಾಪಿಸಿದ್ದರು. ಇಂದು ಅವರ ಪರಿಶ್ರಮಕ್ಕೆ ಜಾಗತಿಕ ಮಟ್ಟದ ಮನ್ನಣೆ ಸಿಕ್ಕಿದೆ.

ಮತ್ತಷ್ಟು ಓದಿ:ಜುಲೈ 18ರಂದು ನಭಕ್ಕೆ ಹಾರಲಿದೆ ಐತಿಹಾಸಿಕ ವಿಕ್ರಮ್-1 ರಾಕೆಟ್; ಜೊತೆಯಲ್ಲಿ ಮೋದಿ ಹಸ್ತಾಕ್ಷರದ ವಂದೇ ಮಾತರಂ ಮೆಸೇಜ್

ಗಣ್ಯರ ಗುಂಪಿಗೆ ಭಾರತಕ್ಕೆ ಎಂಟ್ರಿ: ಈ ಯಶಸ್ಸಿನೊಂದಿಗೆ ಭಾರತವು ಅಮೆರಿಕ, ಚೀನಾ ಮತ್ತು ಜಪಾನ್ ದೇಶಗಳ ನಂತರ ಖಾಸಗಿ ರಾಕೆಟ್ ಅನ್ನು ಬಾಹ್ಯಾಕಾಶದ ಕಕ್ಷೆಗೆ ಕಳುಹಿಸಿದ ವಿಶ್ವದ ಆಯ್ದ ಹೈಟೆಕ್ ದೇಶಗಳ ಗಣ್ಯರ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ.

ಮೋದಿ ಪೋಸ್ಟ್​

ಕಡಿಮೆ ವೆಚ್ಚದ ತಂತ್ರಜ್ಞಾನ: ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಸ್ಥಳೀಯವಾಗಿ ತಯಾರಾದ ಈ ರಾಕೆಟ್, ಜಾಗತಿಕ ಮಟ್ಟದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಣ್ಣ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ತಲುಪಿಸುವ ಸಾಮರ್ಥ್ಯ ಹೊಂದಿದೆ. ಇದು ಮುಂದಿನ ದಿನಗಳಲ್ಲಿ ಜಾಗತಿಕ ವಾಣಿಜ್ಯ ಉಪಗ್ರಹ ಮಾರುಕಟ್ಟೆಯಲ್ಲಿ ಭಾರತದ ದರ್ಬಾರ್ ಹೆಚ್ಚಿಸಲಿದೆ.

ಸ್ಕೈರೂಟ್ ಸಂಸ್ಥೆಯ ಸಿಇಒ ಮತ್ತು ಸಹ-ಸಂಸ್ಥಾಪಕರಾದ ಪವನ್ ಕುಮಾರ್ ಚಂದ್ನಾ ಅವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, “ನೀವು ಇಡೀ ಭಾರತ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ನಿಮ್ಮ ತಂಡವು ಭಾರತದ ಆಕಾಂಕ್ಷೆಗಳನ್ನು ಬಾಹ್ಯಾಕಾಶದಲ್ಲಿ ನೆಟ್ಟಿದೆ ಮತ್ತು ದೇಶದ ಕೋಟ್ಯಂತರ ಯುವಕರ ಕನಸುಗಳಿಗೆ ಗಟ್ಟಿ ಬೇರುಗಳನ್ನು ಹಾಕಿದೆ” ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು.

ವಿಡಿಯೋ:

ಮಾತುಕತೆಯ ವೇಳೆ ಸಿಇಒ ಪವನ್ ಚಂದ್ನಾ ಅವರು, “ನಮ್ಮ ತಂಡದ ವಿಜ್ಞಾನಿಗಳ ಸರಾಸರಿ ವಯಸ್ಸು ಕೇವಲ 28 ವರ್ಷಗಳು” ಎಂದು ಹೆಮ್ಮೆಯಿಂದ ತಿಳಿಸಿದಾಗ ಪ್ರಧಾನಿಯವರು ಮತ್ತಷ್ಟು ಸಂತಸಪಟ್ಟರು. “ಭಾರತದ ಯುವಶಕ್ತಿಯ ಮೇಲಿನ ನನ್ನ ನಂಬಿಕೆಯನ್ನು ನಿಮ್ಮ ತಂಡ ನಿಜ ಮಾಡಿ ತೋರಿಸಿದೆ. ಒಮ್ಮೆ ನಮ್ಮ ಬಾಹ್ಯಾಕಾಶ ಕನಸುಗಳನ್ನು ಜಗತ್ತು ಅನುಮಾನಿಸಿತ್ತು. ಆದರೆ ಭಾರತೀಯ ಯುವಕರು ಮನಸ್ಸು ಮಾಡಿದರೆ ಅದ್ಭುತಗಳನ್ನೇ ಸೃಷ್ಟಿಸಬಹುದು ಎಂಬುದನ್ನು ನೀವು ಜಗತ್ತಿಗೆ ಸಾಬೀತುಪಡಿಸಿದ್ದೀರಿ” ಎಂದು ಪ್ರಧಾನಿ ಹೇಳಿದರು.

ಈ ಒಂಬತ್ತು ನಿಮಿಷಗಳ ಸುದೀರ್ಘ ಕರೆಯಲ್ಲಿ ಅತ್ಯಂತ ಭಾವುಕ ಕ್ಷಣವೊಂದು ಎದುರಾಯಿತು. ಉಡಾವಣೆಗೂ ಮುನ್ನ ಪ್ರಧಾನಿ ಮೋದಿ ಅವರು ತಮ್ಮ ಸ್ವಹಸ್ತದಿಂದ ಕೈಬರಹದಲ್ಲಿ ಬರೆದುಕೊಟ್ಟಿದ್ದ “ವಂದೇ ಮಾತರಂ” ಎಂಬ ವಿಶೇಷ ಶುಭ ಹಾರೈಕೆಯ ಪತ್ರವನ್ನು ವಿಕ್ರಮ್-1 ರಾಕೆಟ್‌ನೊಳಗೆ ಇಟ್ಟು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು.

ಈ ಐತಿಹಾಸಿಕ ಕಾರ್ಯಾಚರಣೆಗೆ ‘ಆಗಮನ್’ (Aagaman) ಎಂದು ಹೆಸರಿಡಲಾಗಿದ್ದು, ಪ್ರಧಾನಿಯವರು ಈ ಹೆಸರನ್ನು ಉಲ್ಲೇಖಿಸಿ ಮಾತನಾಡಿದರು. “ಭಾರತೀಯ ಬಾಹ್ಯಾಕಾಶ ಕಥೆಯನ್ನು ನೀವು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದೀರಿ. ಸ್ಕೈರೂಟ್ ಸಂಸ್ಥೆಯ ಸುದೀರ್ಘ ಪಯಣಕ್ಕೆ ಇದು ಕೇವಲ ಆರಂಭವಷ್ಟೇ. ಈ ಅದ್ಭುತ ಪ್ರತಿಭಾವಂತ ತಂಡಕ್ಕಾಗಿ ಭವಿಷ್ಯದಲ್ಲಿ ಇನ್ನೂ ಇಂತಹ ನೂರಾರು ಮೈಲಿಗಲ್ಲುಗಳು ಕಾಯುತ್ತಿವೆ” ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:35 pm, Sat, 18 July 26

Source link

Leave a Reply

Your email address will not be published. Required fields are marked *