ಮೀರತ್, ಜುಲೈ 18: ಮಹಿಳೆಯೊಬ್ಬಳು ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಲೆ (Murder)ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ನ ಹಸ್ತಿನಾಪುರ ಪ್ರದೇಶದಲ್ಲಿ ನಡೆದಿದೆ. ಅತುಲ್ ಪವಾರ್ ಎಂಬ ಯುವಕನ ಸಾವಿನ ಹಿಂದೆ ಬೆಚ್ಚಿ ಬೀಳಿಸುವ ಪಿತೂರಿ ಕೂಡ ಇದೆ ಎಂದು ತಿಳಿದುಬಂದಿದೆ. ಆರಂಭದಲ್ಲಿ ಕೇವಲ ಹಾವಿನ ಕಡಿತದಿಂದ ಸಾವು ಸಂಭವಿಸಿದೆ ಎಂದು ಭಾವಿಸಲಾಗಿತ್ತು. ಆದರೆ ಪೊಲೀಸರು ನಡೆಸಿದ ತೀಕ್ಷ್ಣ ತನಿಖೆಯಲ್ಲಿ, ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ವಿಷಪೂರಿತ ಹಾವಿನಿಂದ ಕಚ್ಚಿಸಿ ಪತಿಯನ್ನು ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸ್ಕೂಲ್ ವ್ಯಾನ್ ಡ್ರೈವರ್ ಜೊತೆ ಅಕ್ರಮ ಸಂಬಂಧ
ಪೊಲೀಸ್ ವಿಚಾರಣೆಯ ವೇಳೆ ಬಯಲಾದ ಮಾಹಿತಿ ಪ್ರಕಾರ, ಮೃತ ಅತುಲ್ ಪವಾರ್ ಅವರ ಪತ್ನಿ ದಾಮಿನಿ ಸುಮಾರು ಒಂದು ವರ್ಷದ ಹಿಂದೆ ತುಷಾರ್ (ನಿಕ್ಕಿ) ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ವಿಶೇಷವೆಂದರೆ, ಈ ಪ್ರಿಯಕರ ತುಷಾರ್ ಬೇರಾರೂ ಅಲ್ಲ, ಅತುಲ್ ನಡೆಸುತ್ತಿದ್ದ ಶಾಲಾ ವ್ಯಾನ್ನ ಚಾಲಕನಾಗಿದ್ದ. ಇವರಿಬ್ಬರ ಪ್ರೇಮ ಸಂಬಂಧಕ್ಕೆ ಅತುಲ್ ಅಡ್ಡಿಯಾಗಿದ್ದರಿಂದ ಮತ್ತು ಆತನ ಆಸ್ತಿಯನ್ನು ಲೂಟಿ ಮಾಡುವ ಉದ್ದೇಶದಿಂದ ಇಬ್ಬರೂ ಸೇರಿ ಅತುಲ್ನನ್ನು ಮುಗಿಸಲು ನಿರ್ಧರಿಸಿದ್ದರು.
4 ತಿಂಗಳಲ್ಲಿ 2 ಬಾರಿ ಫೇಲ್, 3ನೇ ಬಾರಿ ಹಾವಿನಿಂದ ಅಟ್ಯಾಕ್
ಕೊಲೆಯನ್ನು ಯಾರಿಗೂ ಅನುಮಾನ ಬಾರದಂತೆ ಸಹಜ ಸಾವಿನಂತೆ ತೋರಿಸಲು ಈ ಜೋಡಿ ಸ್ಕೆಚ್ ಹಾಕಿತ್ತು. ಇದಕ್ಕಾಗಿ ಕಳೆದ ನಾಲ್ಕು ತಿಂಗಳಿನಿಂದ ನಿರಂತರ ಪಿತೂರಿ ನಡೆದಿತ್ತು. ಅತುಲ್ನನ್ನು ಕೊಲ್ಲಲು ಆರೋಪಿಗಳು ಈ ಹಿಂದೆ ಎರಡು ಬಾರಿ ಪ್ರಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಅತುಲ್ ಎರಡೂ ಬಾರಿ ಬದುಕುಳಿದಿದ್ದ.
ಮತ್ತಷ್ಟು ಓದಿ: ಪತ್ನಿಯಿಂದಲೇ ವೈದ್ಯನ ಕೊಲೆ ಪ್ರಕರಣ: ಆರೋಪಿ ಡಾ. ಪ್ರಿಯಾಂಕಾ ಎರಡನೇ ಪತ್ನಿ!; ಬಗೆದಷ್ಟೂ ಬಯಲಾಗ್ತಿದೆ ಅಚ್ಚರಿಯ ಮಾಹಿತಿ
ಮೂರನೇ ಪ್ರಯತ್ನದಲ್ಲಿ ಆರೋಪಿಗಳು ಅತ್ಯಂತ ವಿಷಪೂರಿತವಾದ ಹಾವನ್ನು ತಂದು, ಅತುಲ್ ಮಲಗಿದ್ದಾಗ ಅದರಿಂದ ಕಚ್ಚಿಸಿದ್ದಾರೆ. ತೀವ್ರ ವಿಷದ ಪ್ರಭಾವದಿಂದ ಅತುಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕುಟುಂಬಸ್ಥರು ಆಘಾತ, ಎಸ್ಎಸ್ಪಿ ಖಡಕ್ ಭರವಸೆ
ಪತಿ ಸತ್ತ ತಕ್ಷಣವೇ ದಾಮಿನಿ ನಾಟಕವಾಡಿದ್ದಳಾದರೂ, ಅತುಲ್ ಕುಟುಂಬಸ್ಥರ ಅನುಮಾನದ ಮೇರೆಗೆ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಇಡೀ ಜಾಲ ಪತ್ತೆಯಾಗಿದೆ. ಸದ್ಯ ಅತುಲ್ ಕುಟುಂಬಸ್ಥರು ತೀವ್ರ ಆಘಾತದಲ್ಲಿದ್ದಾರೆ.
ಈ ಅಪರಾಧದ ಕುರಿತು ಮಾತನಾಡಿರುವ ಮೀರತ್ ಎಸ್ಎಸ್ಪಿ (SSP) ಅವಿನಾಶ್ ಪಾಂಡೆ, “ಪೊಲೀಸರ ತ್ವರಿತ ಮತ್ತು ಚಾಣಾಕ್ಷ ಕ್ರಮದಿಂದಾಗಿ ಈ ಇಡೀ ಪಿತೂರಿ ಬಯಲಾಗಿದೆ. ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಕರಾರುವಕ್ಕಾಗಿ ಬಂಧಿಸಲಾಗಿದೆ. ಇಂತಹ ಕ್ರೂರ ಕೃತ್ಯ ಎಸಗಿದ ಯಾವುದೇ ಒಬ್ಬ ಆರೋಪಿಯನ್ನೂ ಸುಮ್ಮನೆ ಬಿಡುವುದಿಲ್ಲ, ನ್ಯಾಯಾಲಯದ ಮೂಲಕ ಕಠಿಣ ಶಿಕ್ಷೆ ಕೊಡಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ