Headlines

ಖ್ಯಾತ ಚಿತ್ರ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಟಿ. ಶಿವಪ್ರಸಾದ್ ನಿಧನ – Kannada News | International Artist KT Shivaprasad passes away In Bengaluru

ಹಾಸನ, (ಜೂನ್ 30): ಕಲಾ ಪ್ರಪಂಚದಲ್ಲಿ ಜಾಗತಿಕ ಮಟ್ಟದ ಐಕಾನ್ ಆಗಿ ಗುರುತಿಸಿಕೊಂಡಿದ್ದ, ಗ್ರಾಮೀಣ ಸೊಗಡಿನ ಜೊತೆಗೆ ಆಧುನಿಕ ಕಲೆಯನ್ನು ಬೆಸೆದ ಕರ್ನಾಟಕದ ಹೆಮ್ಮೆಯ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ (KT Shivaprasad) ಅವರು ನಿಧನರಾಗಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೆ.ಟಿ.ಶಿವಪ್ರಸಾದ್ ಅವರು ಇಂದು (ಜೂನ್ 30) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ತಳಸಮುದಾಯಗಳ, ರೈತರ ಧ್ವನಿಯಾಗಿ ಕಲೆಯ ಮೂಲಕವೇ ಕ್ರಾಂತಿ ಸೃಷ್ಟಿಸಿದ್ದ ಈ ಅಪರೂಪದ ಪ್ರತಿಭೆ ನಿಧನದಿಂದಾಗಿ ಭಾರತೀಯ ಕಲಾ ರಂಗದ ಸುವರ್ಣ ಅಧ್ಯಾಯವೊಂದು ಕೊನೆಗೊಂಡಂತಾಗಿದೆ.

1947ರಲ್ಲಿ ಕೊಡಗಿನ ಮಡಿಕೇರಿ (ಮರ್ಕಾರ) ತಾಲೂಕಿನ ಬಡ ಕೃಷಿ ಕುಟುಂಬವೊಂದರಲ್ಲಿ ಜನಿಸಿದ ಶಿವಪ್ರಸಾದ್ ಅವರಿಗೆ ಬಾಲ್ಯದಿಂದಲೇ ಚಿತ್ರಕಲೆಯತ್ತ apparel ಆಸಕ್ತಿ ಇತ್ತು. ಆದರೆ ಆ ಕಾಲದಲ್ಲಿ ಚಿತ್ರಕಲೆಗೆ ಅಷ್ಟಾಗಿ ಮನ್ನಣೆ ಇರದ ಕಾರಣ, ಕುಟುಂಬದ ಇಚ್ಛೆಯಂತೆ ಅವರು ಇಂಜಿನಿಯರಿಂಗ್ ಕಾಲೇಜು ಸೇರಬೇಕಾಯಿತು. ಆದರೆ ಕಲೆಯ ಮೇಲಿದ್ದ ಅದಮ್ಯ ಒಲವಿನಿಂದಾಗಿ ಇಂಜಿನಿಯರಿಂಗ್ ಅಧ್ಯಯನವನ್ನು ಅರ್ಧಕ್ಕೆ ಬಿಟ್ಟು, ಮುಂಬೈನ ಪ್ರತಿಷ್ಠಿತ ‘ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್’ ಸೇರಿದ್ದು, ಅಲ್ಲಿ 1973ರಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪದವಿ ಪಡೆದುಕೊಂಡಿದ್ದಾರೆ.

ಬಳಿಕ ಕೇವಲ ಕೂತು ಬಣ್ಣ ಹಚ್ಚುವ ಕಲಾವಿದರಾಗದೇ, ಕರ್ನಾಟಕದ ಶೋಷಿತ, ಬಡ ಕೃಷಿ ಕಾರ್ಮಿಕರ ಸಬಲೀಕರಣಕ್ಕಾಗಿ ಸೋಷಿಯಲಿಸ್ಟ್, ದಲಿತ ಮತ್ತು ರೈತ ಸಂಘಟನೆಗಳ ಮೂಲಕ ದೀರ್ಘಕಾಲ ಸಕ್ರಿಯ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ಈ ಸಾಮಾಜಿಕ ಕಳಕಳಿ ಅವರ ಕಲಾಕೃತಿಗಳಲ್ಲೂ ಅರಳುತ್ತಿದ್ದವು.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆ

ಶಿವಪ್ರಸಾದ್ ಅವರ ಚಿತ್ರಕಲೆಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆ ಪಡೆದುಕೊಂಡಿವವೆ.
ಬ್ರಿಟನ್‌ನ ಶ್ರೇಷ್ಠ ಮಾಡರ್ನಿಸ್ಟ್ ಲುಸಿಯನ್ ಫ್ರಾಯ್ಡ್ ಅವರಿಗೆ ಹೋಲಿಸಲ್ಪಡುತ್ತಿದ್ದ ಕೆ.ಟಿ. ಶಿವಪ್ರಸಾದ್ ಅವರ ಕಲಾಕೃತಿಗಳು ದೇಶ-ವಿದೇಶಗಳಲ್ಲಿ ಅಪಾರ ಪ್ರಶಂಸೆ ಗಳಿಸಿವೆ. ಇಂಜಿನಿಯರಿಂಗ್‌ನ ಅಲ್ಪಾವಧಿಯ ಅನುಭವದಿಂದಾಗಿ ಅವರು ಅತ್ಯುತ್ತಮ ಛಾಯಾಗ್ರಾಹಕ ಹಾಗೂ ಆರ್ಕಿಟೆಕ್ಚರಲ್ ಕನ್ಸಲ್ಟೆಂಟ್ ಆಗಿಯೂ ಗುರುತಿಸಿಕೊಂಡಿದ್ದರು.

1976 ರಿಂದ ಬೆಂಗಳೂರು, ಮೈಸೂರು, ಮುಂಬೈ ಮತ್ತು ನವದೆಹಲಿಗಳಲ್ಲಿ ಇವರ ಹಲವು ಏಕವ್ಯಕ್ತಿ ಪ್ರದರ್ಶನಗಳು ನಡೆದಿವೆ. ಮುಂಬೈನ ಜಹಾಂಗೀರ್ ಆರ್ಟ್ ಗ್ಯಾಲರಿ, ಚೆನ್ನೈನ ಸಾಕ್ಷಿ ಗ್ಯಾಲರಿ ಹಾಗೂ ನವದೆಹಲಿಯ ಆರ್ಟ್ ಟುಡೇಗಳಲ್ಲಿ ಇವರ ಕಲಾ ಪ್ರದರ್ಶನಗಳು ಕಲಾ ರಸಿಕರ ಮನಗೆದ್ದಿದ್ದವು. ಜೊತೆಗೆ ಭೋಪಾಲ್ ಬಿನ್ನಾಲೆ (1988), ಬಾಂಬೆ ಆರ್ಟ್ ಸೊಸೈಟಿ ಶತಮಾನೋತ್ಸವ ಪ್ರದರ್ಶನ (1989) ಹಾಗೂ ಹಾಂಗ್‌ಕಾಂಗ್ ಗ್ಯಾಲರಿಗಳಲ್ಲೂ (1996) ಇವರ ಕಲಾಕೃತಿಗಳು ಪ್ರದರ್ಶನಗೊಂಡಿದ್ದವು. 1996ರಲ್ಲೇ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ನಡೆದ ಸಮಕಾಲೀನ ಭಾರತೀಯ ಕಲಾವಿದರ ಪ್ರದರ್ಶನದಲ್ಲೂ ಭಾಗವಹಿಸಿದ್ದರು.

ಇನ್ನು ಕಲಾ ಜಗತ್ತಿಗೆ ಇವರು ನೀಡಿದ ಕೊಡುಗೆಯನ್ನು ಗೌರವಿಸಿ ಕರ್ನಾಟಕ ಸರ್ಕಾರವು 2001ರಲ್ಲಿ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *