ಗ್ವಾಲಿಯರ್, ಏಪ್ರಿಲ್ 27: ಭಾರತೀಯ ನ್ಯಾಯಾಲಯಗಳನ್ನು ತಲುಪುವ ವಿಚ್ಛೇದನ (Divorce) ಅರ್ಜಿಗಳು ಹೆಚ್ಚಾಗಿ ಕೌಟುಂಬಿಕ ಹಿಂಸೆ, ವರದಕ್ಷಿಣೆ ಸಂಬಂಧಿತ ಕಿರುಕುಳ ಅಥವಾ ದೀರ್ಘಕಾಲದ ವೈವಾಹಿಕ ಕಲಹದ ಆರೋಪಗಳನ್ನು ಒಳಗೊಂಡಿರುತ್ತವೆ. ಆದರೆ, ಮಧ್ಯಪ್ರದೇಶದ ವಿಚ್ಛೇದನ ಪ್ರಕರಣವೊಂದು ವಿಚಿತ್ರವಾದ ಕಾರಣದಿಂದ ಸುದ್ದಿಯಲ್ಲಿದೆ. ಮಹಿಳೆಯೊಬ್ಬಳು ತನ್ನ ಗಂಡನಿಂದ ವಿಚ್ಛೇದನ ಪಡೆಯಲು ಆತನಿಗೆ 2ನೇ ಮದುವೆಯಾಗಿದೆ ಎಂದು ಸುಳ್ಳು ಹೇಳಿದ್ದಳು. ಅದಕ್ಕೆ ಕೋರ್ಟ್ ಸಾಕ್ಷಿ ಕೇಳಿದಾಗ ಗಂಡನ ತಂಗಿಯನ್ನೇ ಆತನ 2ನೇ ಹೆಂಡತಿ ಎಂದು ಸುಳ್ಳು ಹೇಳಿದ್ದಳು.
2021ರಲ್ಲಿ ಮಹಿಳೆ ತನ್ನ ಪತಿ ಮರುಮದುವೆಯಾಗಿದ್ದಾರೆ ಎಂದು ಹೇಳಿಕೊಂಡು ಆಕೆ ವಿವಾಹ ವಿಚ್ಛೇದನ ಕೋರಿದ್ದಳು. ಇದಕ್ಕೆ ಸಾಕ್ಷಿಯಾಗಿ ಆಕೆ ಪತಿಯ ಸಹೋದರಿ ಮತ್ತು ಇತರ ಸಂಬಂಧಿಕರೊಂದಿಗೆ ನಿಂತಿರುವ ಕುಟುಂಬದ ಫೋಟೋವನ್ನು ನೀಡಿದ್ದರು. ಅದರಲ್ಲಿ ಆಕೆಯ ಗಂಡನ ಪಕ್ಕ ನಿಂತಿದ್ದ ಆತನ ತಂಗಿಯನ್ನೇ ಆತನ ಎರಡನೇ ಹೆಂಡತಿ ಎಂದು ಕೋರ್ಟ್ಗೆ ನಂಬಿಸಿ ಸಾಕ್ಷಿ ನೀಡಿದ್ದಳು. ಈ ವಿಷಯ ಭಾರೀ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ವಿಚ್ಛೇದನ ನೀಡಿದ್ದಕ್ಕೆ ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಆಸಿಡ್ ಹಾಕಿದ ಪತಿ; ಭಯಾನಕ ವಿಡಿಯೋ ವೈರಲ್
ಏಪ್ರಿಲ್ ಮೊದಲ ವಾರದಲ್ಲಿ ಪತಿಗೆ ವಿಚ್ಛೇದನದ ಆದೇಶದ ಬಗ್ಗೆ ತಿಳಿದಾಗ ಈ ವಿಷಯ ಬೆಳಕಿಗೆ ಬಂದಿತು. ನ್ಯಾಯಾಲಯದ ದಾಖಲೆಗಳನ್ನು ಪರಿಶೀಲಿಸಿದ ನಂತರ ಆಕೆ ತಪ್ಪು ಸಾಕ್ಷಿ ನೀಡಿ, ವಂಚನೆ ಮಾಡಿದ್ದು ಗೊತ್ತಾಯಿತು. ಅವರು ಈಗ ಗ್ವಾಲಿಯರ್ ಹೈಕೋರ್ಟ್‌ನಲ್ಲಿ ಈ ವಿಚ್ಛೇದನದ ತೀರ್ಪನ್ನು ಪ್ರಶ್ನಿಸಿದ್ದಾರೆ. ನ್ಯಾಯಾಲಯವನ್ನು ದಾರಿ ತಪ್ಪಿಸುವ ಮೂಲಕ ತಮ್ಮ ಪತ್ನಿ ಮೋಸದಿಂದ ತೀರ್ಪು ಪಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಲಿದೆ.
ಜಗಳದಿಂದಾಗಿ 2015 ರಿಂದಲೇ ಆ ಮಹಿಳೆ ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದಳು. ದೀರ್ಘಕಾಲದ ಬೇರ್ಪಡುವಿಕೆಯ ಹೊರತಾಗಿಯೂ ಪತಿಗೆ ವಿಚ್ಛೇದನಕ್ಕೆ ಒಪ್ಪಿಗೆ ನೀಡಲು ಇಷ್ಟವಿರಲಿಲ್ಲ. ಆದರೆ ಹೆಂಡತಿ ಮದುವೆಯನ್ನು ವಿಚ್ಛೇದನ ಪಡೆಯಲು ದೃಢನಿಶ್ಚಯದಲ್ಲಿದ್ದಳು. ಹೀಗಾಗಿ, ಸುಳ್ಳು ಸಾಕ್ಷಿ ನೀಡಿ ವಿಚ್ಛೇದನ ಪಡೆಯಲು ನಿರ್ಧರಿಸಿದಳು. ಅದಕ್ಕಾಗಿ 2021 ಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಳು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
