ಗಂಡನ ಮನೆಗೆ ಹೋದ ತಕ್ಷಣ ಹೆತ್ತವರ ಬಾಂಧವ್ಯ ಮುಗಿಯಲ್ಲ!: ಸರ್ಕಾರದ ನಿಯಮ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ – Kannada News

ದೆಹಲಿ, ಜೂ,2: ವಿವಾಹಿತ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ (ಜೂ.2) ಒಂದು ಮಹತ್ವದ ಮತ್ತು ಐತಿಹಾಸಿಕ ತೀರ್ಪನ್ನು ನೀಡಿದೆ. “ಕೇವಲ ವಿವಾಹಿತ ಎಂಬ ಕಾರಣಕ್ಕಾಗಿ ಮಗಳನ್ನು ಯಾವುದೇ ಸರ್ಕಾರಿ ಕಲ್ಯಾಣ ಯೋಜನೆಯ (Welfare Scheme) ಸೌಲಭ್ಯಗಳಿಂದ ವಂಚಿಸುವಂತಿಲ್ಲ” ಎಂದು ಸುಪ್ರೀಂ ಕೋರ್ಟ್​​ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆಲೋಕ್ ಅರಾಧೆ ಅವರಿದ್ದ ಪೀಠವು, ಕಲ್ಯಾಣ ಯೋಜನೆಗಳಿಂದ ವಿವಾಹಿತ ಮಗಳನ್ನು ಹೊರಗಿಡುವುದು ಸಂವಿಧಾನಬಾಹಿರ ಹಾಗೂ ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು) ಮತ್ತು ವಿಧಿ 15 (ತಾರತಮ್ಯದ ನಿಷೇಧ) ರ ಉಲ್ಲಂಘನೆಯಾಗಿದೆ ಎಂದು ತೀವ್ರವಾಗಿ ಆಕ್ಷೇಪಿಸಿದೆ.

“ಮದುವೆಯಾದ ತಕ್ಷಣ ಮಗಳು ತನ್ನ ತಂದೆ-ತಾಯಿಯ ಕುಟುಂಬದ ಸದಸ್ಯಳಾಗಿ ಉಳಿಯುವುದಿಲ್ಲ ಅಥವಾ ಅವರ ಮೇಲೆ ಅವಲಂಬಿತಳಾಗಿರುವುದಿಲ್ಲ ಎಂಬ ಊಹೆ ಸಂವಿಧಾನಾತ್ಮಕವಾಗಿ ಒಪ್ಪಲು ಸಾಧ್ಯವಿಲ್ಲ. ವಿವಾಹವು ಮಗಳು ಮತ್ತು ಆಕೆಯ ಹೆತ್ತವರ ಕುಟುಂಬದ ನಡುವಿನ ಬಾಂಧವ್ಯವನ್ನು ಕೊನೆಗೊಳಿಸುವುದಿಲ್ಲ” ಎಂದು ನ್ಯಾಯಪೀಠವು ಹೇಳಿದೆ. ಇದೇ ವೇಳೆ, ಮಗನಿಗೆ ಮದುವೆಯಾದರೂ ಆತ ಕುಟುಂಬದ ಭಾಗವಾಗಿಯೇ ಇರುತ್ತಾನೆ, ಆದರೆ ಮಗಳಿಗೆ ಮದುವೆಯಾದರೆ ಆಕೆಯನ್ನು ಕುಟುಂಬದಿಂದ ಹೊರಗಿಡುವ ಲಿಂಗ ಆಧಾರಿತ ರೂಢಿಗತ ಸಿದ್ಧಾಂತಗಳನ್ನು ಸಂವಿಧಾನವು ಸಂಪೂರ್ಣವಾಗಿ ತಿರಸ್ಕರಿಸುತ್ತದೆ ಎಂದು ಕೋರ್ಟ್ ಹೇಳಿದೆ.

ಉತ್ತರ ಪ್ರದೇಶದ ಕುಲ್ಸುಮ್ ನಿಶಾ ಎಂಬ ಮಹಿಳೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಕೋರ್ಟ್ ಈ ತೀರ್ಪು ನೀಡಿದೆ. ನ್ಯಾಯಬೆಲೆ ಅಂಗಡಿ ಮಾಲೀಕರಾಗಿದ್ದ ನಿಶಾ ಅವರ ತಾಯಿ ಮಾರ್ಚ್ 2024 ರಲ್ಲಿ ನಿಧನರಾಗಿದ್ದರು. ಮದುವೆಯಾಗಿದ್ದರೂ ನಿಶಾ ಅವರು ತಮ್ಮ ತಾಯಿ ಮತ್ತು ಸಹೋದರಿಯರೊಂದಿಗೆ ವಾಸಿಸುತ್ತಿದ್ದರು ಮತ್ತು ಅಂಗಡಿ ನಡೆಸಲು ನೆರವಾಗುತ್ತಿದ್ದರು. ತಾಯಿಯ ನಿಧನದ ನಂತರ ಅನುಕಂಪದ ಆಧಾರದ ಮೇಲೆ ತಮಗೆ ಅಂಗಡಿಯನ್ನು ನೀಡಬೇಕು ಎಂದು ಅವರು ಅರ್ಜಿ ಸಲ್ಲಿಸಿದ್ದರು. ಆದರೆ, ಉತ್ತರ ಪ್ರದೇಶ ಸರ್ಕಾರದ ನಿಯಮಾವಳಿಗಳ ಪ್ರಕಾರ “ಮದುವೆಯಾದ ಮಗಳು ಕುಟುಂಬದ ವ್ಯಾಖ್ಯಾನಕ್ಕೆ ಬರುವುದಿಲ್ಲ” ಎಂಬ ಕಾರಣ ನೀಡಿ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ (SDM) ಮತ್ತು ಅಲಹಾಬಾದ್ ಹೈಕೋರ್ಟ್ ಆಕೆಯ ಅರ್ಜಿಯನ್ನು ತಿರಸ್ಕರಿಸಿದ್ದವು. ಇದನ್ನು ಪ್ರಶ್ನಿಸಿ ನಿಶಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: 87ರ ವಯಸ್ಸಿನಲ್ಲಿ ಮೊದಲ ಬಾರಿ ಸಮುದ್ರ ತೀರಕ್ಕೆ ಹೋದ ಅಜ್ಜಿ, ರಿಯಾಕ್ಷನ್ ಹೇಗಿತ್ತು ನೋಡಿ

ವಿವಾಹಿತ ಮಹಿಳೆಯರು ಸಾಮಾನ್ಯವಾಗಿ ಗಂಡನ ಮನೆಗೆ ಹೋಗುವುದರಿಂದ ಸ್ಥಳೀಯ ನಿವಾಸದ ನಿಯಮ ಪಾಲನೆಯಾಗುವುದಿಲ್ಲ ಎಂಬ ಸರ್ಕಾರದ ವಾದವನ್ನು ತಳ್ಳಿಹಾಕಿದ ಕೋರ್ಟ್, “ಪ್ರತಿಯೊಬ್ಬ ವಿವಾಹಿತ ಮಗಳು ಬೇರೆಡೆಯೇ ವಾಸಿಸುತ್ತಾಳೆ ಎಂಬ ಕಲ್ಪನೆಯ ಆಧಾರದ ಮೇಲೆ ಇಡೀ ಮಹಿಳಾ ಸಮುದಾಯವನ್ನು ಯೋಜನೆಯಿಂದ ಹೊರಗಿಡುವುದು ತಪ್ಪು” ಎಂದಿದೆ. ಅನುಕಂಪದ ಆಧಾರದ ಹಂಚಿಕೆಯ ಉದ್ದೇಶವು ಕುಟುಂಬಕ್ಕೆ ತಕ್ಷಣದ ಆರ್ಥಿಕ ಪರಿಹಾರ ನೀಡುವುದಾಗಿದೆ. ಅಧಿಕಾರಿಗಳು ನಿಶಾ ಅವರು ಅದೇ ಹಳ್ಳಿಯಲ್ಲಿ ವಾಸಿಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ, ಕೇವಲ ‘ಮದುವೆಯಾಗಿದೆ’ ಎಂಬ ಕಾರಣಕ್ಕೆ ಆಕೆಗೆ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ, 4 ವಾರಗಳ ಒಳಗಾಗಿ ಕುಲ್ಸುಮ್ ನಿಶಾ ಪರವಾಗಿ ನ್ಯಾಯಬೆಲೆ ಅಂಗಡಿ ಹಂಚಿಕೆ ಆದೇಶ ಹೊರಡಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *