IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸಿಕ್ಸ್-ಫೋರ್ಗಳ ಸುರಿಮಳೆಗೈಯುತ್ತಿರುವ 15 ವರ್ಷದ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿ, ಈಗ ಕೇವಲ ಕ್ರಿಕೆಟ್ ಮೈದಾನದಲ್ಲಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಸಂಚಲನ ಮೂಡಿಸಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ನೋಡಿ ಅರಗಿಸಿಕೊಳ್ಳಲಾಗದ ಪಾಕಿಸ್ತಾನದ ವಿಶ್ಲೇಷಕರೊಬ್ಬರು “ಇವರ ಬ್ಯಾಟ್‌ನಲ್ಲಿ AI ಚಿಪ್ ಇದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಾಸ್ಯಾಸ್ಪದ ಆರೋಪಕ್ಕೆ ವೈಭವ್ ಸೂರ್ಯವಂಶಿ ನೀಡಿರುವ ‘ಕ್ಲಾಸ್’ ಪ್ರತಿಕ್ರಿಯೆ ಈಗ ವೈರಲ್ ಆಗುತ್ತಿದೆ.
ಪಾಕಿಸ್ತಾನದ ಖ್ಯಾತ ಕ್ರೀಡಾ ವಿಶ್ಲೇಷಕ ಡಾ. ನೌಮಾನ್ ನಿಯಾಝ್, ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ಈ 15 ವರ್ಷದ ಹುಡುಗ ಹೊಡೆಯುವ ಹೊಡೆತಗಳು ಮನುಷ್ಯನಿಂದ ಸಾಧ್ಯವಿಲ್ಲದಂತಿದೆ. ವೈಭವ್ ಅವರ ಬ್ಯಾಟ್ ಅನ್ನು ವಾಡಾ (WADA) ಪರೀಕ್ಷೆಗೆ ಒಳಪಡಿಸಿದಂತೆ ಲ್ಯಾಬ್‌ನಲ್ಲಿ ಪರೀಕ್ಷಿಸಬೇಕು. ಅವರ ಬ್ಯಾಟ್‌ನಲ್ಲಿ ಯಾವುದೋ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಚಿಪ್ ಇದೆ ಎಂದೆನಿಸುತ್ತಿದೆ” ಎಂದು ಹೇಳಿದ್ದರು.
ಬ್ಯಾಟ್‌ನಲ್ಲಿ ಎಐ ಚಿಪ್ ಇರುವ ಕಾರಣ ವೈಭವ್ ಆ ರೀತಿಯಾಗಿ ಬ್ಯಾಟ್ ಮಾಡುತ್ತಿದ್ದಾನೆ. ಇಲ್ಲದಿದ್ದರೆ ಈ ವಯಸ್ಸಿಗೆ ಅಂತಹ ಆಟ ಆಡಲು ಸಾಧ್ಯವಿಲ್ಲ. ಹೀಗಾಗಿ ಅವರ ಬ್ಯಾಟ್ ಅನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ನೌಮಾನ್ ನಿಯಾಝ್ ಆಗ್ರಹಿಸಿದ್ದರು.
ವೈಭವ್ ಸ್ಮಾರ್ಟ್ ಉತ್ತರ!
ರಾಜಸ್ಥಾನ್ ರಾಯಲ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ವೈಭವ್ ಸೂರ್ಯವಂಶಿ, ಅತ್ಯಂತ ವಿನಮ್ರವಾಗಿ ಮತ್ತು ತಮಾಷೆಯಾಗಿ ಉತ್ತರಿಸಿದ್ದಾರೆ.
“ನನ್ನ ಬ್ಯಾಟ್‌ನಲ್ಲಿ ಚಿಪ್ ಏನಾದರೂ ಇದ್ದರೆ ಅದನ್ನು ದೇವರೆ ಅಳವಡಿಸಿ ಕಳುಹಿಸಿದ್ದಾರೆ. ದೇವರು ಮೇಲಿಂದಲೇ ಹೇಳಿದ್ದ, ನಿನ್ನ ಬ್ಯಾಟ್‌ನಲ್ಲಿ ಒಂದು ವಿಶೇಷ ಶಕ್ತಿ ನೀಡುತ್ತಿದ್ದೇನೆ ಎಂದು. ನಾನು ಕೇವಲ ಅದನ್ನು ಬಳಸುತ್ತಿದ್ದೇನೆ ಅಷ್ಟೇ,” ಎಂದು ವೈಭವ್ ನಗುತ್ತಾ ಹೇಳಿದ್ದಾರೆ. ಅವರ ಈ ಸಮಯಪ್ರಜ್ಞೆಯ ಉತ್ತರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಖ್ಯಾತ ಕ್ರೀಡಾ ವಿಶ್ಲೇಷಕ ಡಾ. ನೌಮಾನ್ ನಿಯಾಝ್, ವೈಭವ್ ಬ್ಯಾಟ್ ಮೇಲೆ ಸಂದೇಹ ವ್ಯಕ್ತಪಡಿಸಲು ಮುಖ್ಯ ಕಾರಣ ಯುವ ದಾಂಡಿಗನ ಆರ್ಭಟ. ಅಂದರೆ ಪ್ರಸ್ತುತ ಐಪಿಎಲ್ನಲ್ಲಿ ವೈಭವ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.
- ವೇಗದ 400 ರನ್: ಐಪಿಎಲ್ ಇತಿಹಾಸದಲ್ಲಿ ಕೇವಲ 167 ಎಸೆತಗಳಲ್ಲಿ 400 ರನ್ ಪೂರೈಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
- ಅಬ್ಬರದ ಶತಕ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದರು.
- ಕೊನೆಯ ಪ್ರದರ್ಶನ: ಪಂಜಾಬ್ ಕಿಂಗ್ಸ್ ವಿರುದ್ಧ ಕೇವಲ 16 ಎಸೆತಗಳಲ್ಲಿ 43 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ.
ಇದನ್ನೂ ಓದಿ: IPL 2026: ಬ್ಯಾಟಿಂಗ್, ಬೌಲಿಂಗ್ ಮಾಡದೇ ದಾಖಲೆ ಬರೆದ ಶಾರ್ದೂಲ್ ಠಾಕೂರ್..!
ಸದ್ಯ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ವೈಭವ್ ಸೂರ್ಯವಂಶಿ ತಮ್ಮ ಮೇಲೆ ಕೇಳಿ ಬರುತ್ತಿರುವ ಟೀಕೆ ಮತ್ತು ವಿಲಕ್ಷಣ ವಾದಗಳಿಗೆ ತನ್ನ ಬ್ಯಾಟ್ ಮೂಲಕವೇ ಉತ್ತರಿಸುತ್ತಿದ್ದಾರೆ. ಈ ಉತ್ತರದಿಂದಾಗಿ ಬೌಲರ್ಗಳು ಕಂಗೆಟ್ಟಿರುವುದಂತು ಸುಳ್ಳಲ್ಲ!
