ಗದಗ, ಜುಲೈ 25: ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಅಂತಾರಾಜ್ಯ ‘ಮಾಸ್ಕ್ ಗ್ಯಾಂಗ್’ನ (mask gang) ಮೂವರು ಆರೋಪಿಗಳನ್ನು ಗದಗ (gadag) ಶಹರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಹಮ್ಮದ್ ರಫೀಕ್ (36), ಬೆಳಗಾವಿ ಜಿಲ್ಲೆಯ ಇಮ್ರಾನ್ ತಿಗಡಿ (40) ಹಾಗೂ ಹಾವೇರಿ ಜಿಲ್ಲೆಯ ಮೌಲಾಅಲಿ ದರ್ಗಾ (34) ಬಂಧಿತ ಆರೋಪಿಗಳು. ಬಂಧಿತರಲ್ಲಿ ಓರ್ವ ತರಕಾರಿ ಹಾಗೂ ಗುಜರಿ ವ್ಯಾಪಾರಿಗಳಾಗಿದ್ದು, ಮತ್ತೋರ್ವ ಚಾಲಕನಾಗಿ ಕೆಲಸ ಮಾಡುತ್ತಿದ್ದರು.
ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ದೋಚಿದ್ದ ಖದೀಮರು
ಕಳೆದ ಮೇ 8 ರಂದು ಗದಗ ನಗರದ ಮಂಜುನಾಥ್ ಬಸವಾ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮುಖಕ್ಕೆ ಮಾಸ್ಕ್ ಹಾಗೂ ಕೈಗೆ ಗ್ಲೌಸ್ ಧರಿಸಿ ಬಂದಿದ್ದ ಗ್ಯಾಂಗ್, ಸ್ಥಳದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಸಿಗದಂತೆ ಅತ್ಯಂತ ಚಾಣಾಕ್ಷತನದಿಂದ ಮನೆ ದೋಚಿದ್ದರು. ಕಳ್ಳರು ಮನೆಯಲ್ಲಿದ್ದ 34.20 ಲಕ್ಷ ರೂ ಮೌಲ್ಯದ 342 ಗ್ರಾಂ ಚಿನ್ನಾಭರಣ, 2.2 ಲಕ್ಷ ರೂ ಮೌಲ್ಯದ ಬೆಳ್ಳಿ ವಸ್ತುಗಳು ಹಾಗೂ 8.50 ಲಕ್ಷ ರೂ ನಗದು ದೋಚಿದ್ದರು.
42.73 ಲಕ್ಷ ರೂ ಮೌಲ್ಯದ ಸ್ವತ್ತು ವಶಕ್ಕೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಗದಗ ಪೊಲೀಸರು, ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡುಬಂದ ಅನುಮಾನಾಸ್ಪದ ಕಾರನ್ನು ಬೆನ್ನಟ್ಟಿ ಇಡೀ ಪ್ರಕರಣದ ಜಾಲವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಒಟ್ಟು 42.73 ಲಕ್ಷ ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 33.33 ಲಕ್ಷ ರೂ ಮೌಲ್ಯದ ಚಿನ್ನಾಭರಣ, 90 ಸಾವಿರ ರೂ ಮೌಲ್ಯದ ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 8 ಲಕ್ಷ ರೂ ಮೌಲ್ಯದ ಎರ್ಟಿಗಾ ಮತ್ತು ಆಲ್ಟೋ ಕಾರುಗಳು ಸೇರಿವೆ.
ಇದನ್ನೂ ಓದಿ:
ಇದೇ ವೇಳೆ, ಗದಗ ನಗರದ ಹಾತಲಗೇರಿ ನಾಕಾ ಬಳಿಯಿರುವ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನೂ ಪೊಲೀಸರು ಭೇದಿಸಿದ್ದು, ದೇವಿಗೆ ಹಾಕುತ್ತಿದ್ದ 1.25 ಲಕ್ಷ ರೂ ಮೌಲ್ಯದ ಚಿನ್ನದ ತಾಳಿ, ಬೆಳ್ಳಿಯ ಕಿರೀಟವನ್ನು ವಶಪಡಿಸಿಕೊಂಡಿದ್ದಾರೆ.
ಎಸ್ಪಿ ರೋಹನ್ ಜಗದೀಶ್ ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ಎಸ್ಪಿ ರೋಹನ್ ಜಗದೀಶ್ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ್ದು, ‘‘ಲಾಕ್ ಮಾಡಿದ್ದ ಮನೆಯನ್ನು ಗುರಿಯಾಗಿಸಿಕೊಂಡು, ಯಾವುದೇ ಸಾಕ್ಷ್ಯಗಳು ಸಿಗದಂತೆ ಮಾಸ್ಕ್ ಮತ್ತು ಗ್ಲೌಸ್ ಧರಿಸಿ ಕಳ್ಳತನ ಮಾಡುತ್ತಿದ್ದ ಮೂವರು ಅಂತಾರಾಜ್ಯ ಖದೀಮರನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದ ಅನುಮಾನಾಸ್ಪದ ಕಾರಿನ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದೆ. ಬಂಧಿತರಲ್ಲಿ ಮಹ್ಮದರಫೀಕ್ ಮೇಲೆ ಕರ್ನಾಟಕ ಸೇರಿದಂತೆ 68 ಪ್ರಕರಣಗಳು ದಾಖಲಾಗಿವೆ. ಸದ್ಯ ಬಂಧಿತರಿಂದ ನಗದು, ಆಭರಣಗಳು ಹಾಗೂ ವಾಹನಗಳು ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ’’ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
