ಸರ್ಕಾರಿ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳು ತೀವ್ರ ಅವ್ಯವಸ್ಥೆ
ಗದಗ ಆ. 7: ಓದಿ ಮುಂದೆ ಬರಬೇಕು, ಸಾಧನೆ ಮಾಡಬೇಕು ಎಂಬ ನೂರಾರು ಕನಸು ಹೊತ್ತು ಸರ್ಕಾರಿ ಹಾಸ್ಟೆಲ್ಗೆ ಬಂದ ವಿದ್ಯಾರ್ಥಿಗಳಿಗೆ ಅವ್ಯವಸ್ಥೆಯ ಬಿಸಿ ತಟ್ಟಿದೆ. ಗದಗ ನಗರದ ಸೂರ್ಯ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವು ಸಂಪೂರ್ಣ ಅವ್ಯವಸ್ಥೆಯ ಆಗರವಾಗಿದ್ದು, ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಹಾಸ್ಟೆಲ್ನಲ್ಲಿ ತಿಗಣೆಗಳ ಕಾಟ, ಕಳಪೆ ಆಹಾರ ಸರಬರಾಜು ಹಾಗೂ ಶುದ್ಧ ಕುಡಿಯುವ ನೀರಿನ ಅಭಾವದಿಂದ ಬೇಸತ್ತ ವಿದ್ಯಾರ್ಥಿಗಳು, ವಸತಿ ನಿಲಯಕ್ಕೆ ಭೇಟಿ ನೀಡಿದ ಅಧಿಕಾರಿಗಳನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಹಾಸ್ಟೆಲ್ನಲ್ಲಿ ತಿಗಣೆಗಳ ಕಾಟ ವಿಪರೀತವಾಗಿದ್ದು, ರಾತ್ರಿಯಿಡೀ ವಿದ್ಯಾರ್ಥಿಗಳು ನಿದ್ರೆಯಿಲ್ಲದೆ ಕಳೆಯುವಂತಾಗಿದೆ. ಕ್ರಿಮಿನಾಶಕ ಸಿಂಪಡಿಸಿ ತಿಗಣೆಗಳನ್ನು ನಿಯಂತ್ರಿಸಿ ಎಂದು ಮನವಿ ಮಾಡಿದರೂ ವಾರ್ಡನ್ ಕನಿಷ್ಠ ಗಮನ ಹರಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಗೋಳು ತೋಡಿಕೊಂಡಿದ್ದಾರೆ.
ಹಾಸ್ಟೆಲ್ನಲ್ಲಿದ್ದುಕೊಂಡು ಹೊಟ್ಟೆತುಂಬ ಊಟ ಮಾಡುವುದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹುಳು ಬಿದ್ದಿರುವ ಜೋಳ ಹಾಗೂ ಗೋಧಿಯನ್ನು ಬಳಸಿ ಅಡುಗೆ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ‘ವರ್ಕ್ ಫ್ರಂ ಹೋಂ’ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ್ದ ಖತರ್ನಾಕ್ ದಂಪತಿ ಪೊಲೀಸರ ವಶ!
ಹಾಸ್ಟೆಲ್ನಲ್ಲಿ ಸುಮಾರು 100 ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ಈ ಹಾಸ್ಟೆಲ್ ‘ತಿಪ್ಪೆಗುಂಡಿ’ಯಂತೆ ಇರುತ್ತದೆ. ಆದರೆ, ಲೋಕಾಯುಕ್ತ ಅಧಿಕಾರಿಗಳು ತಪಾಸಣೆಗೆ ಬರುತ್ತಾರೆ ಎಂಬ ಮಾಹಿತಿ ಸಿಕ್ಕ ತಕ್ಷಣ ಮೇಲ್ನೋಟಕ್ಕೆ ಸುಣ್ಣ-ಬಣ್ಣ ಬಳಿದು ಸ್ವಚ್ಛಗೊಳಿಸುವ ನಾಟಕವಾಡುತ್ತಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುದ್ಧ ಕುಡಿಯುವ ನೀರು ಹಾಗೂ ಉತ್ತಮ ಆಹಾರ ಒದಗಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಹಾಸ್ಟೆಲ್ನಲ್ಲಿರುವ ಮೂಲಭೂತ ಅವ್ಯವಸ್ಥೆಗಳನ್ನು ತಕ್ಷಣವೇ ಸರಿಪಡಿಸಬೇಕೆಂದು ವಿದ್ಯಾರ್ಥಿಗಳು ಒಮ್ಮತದಿಂದ ಆಗ್ರಹಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ