ಗಾಂಧಿ ಕುಟುಂಬವನ್ನು ಸಂತೋಷಪಡಿಸಲು ನಿಮ್ಮ ಘನತೆ ಕಳೆದುಕೊಂಡಿರಿ; ಖರ್ಗೆಗೆ ಯಡಿಯೂರಪ್ಪ ತಿರುಗೇಟು – Kannada News | Karnataka Former CM BS Yediyurappa condems Mallikarjun Kharges Terrorist Statement on PM Modi

ಬೆಂಗಳೂರು, ಏಪ್ರಿಲ್ 21: ತಮಿಳುನಾಡಿನ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭಯೋತ್ಪಾದಕ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, “ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರೇ, ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಭಯೋತ್ಪಾದಕ’ ಎಂದು ನೀವು ನೀಡಿರುವ ಅತ್ಯಂತ ಹೇಯ ಹೇಳಿಕೆಯು ನಿಮ್ಮ ದುರಹಂಕಾರದ ಪರಮಾವಧಿಯಷ್ಟೇ ಅಲ್ಲ, ನಿಮ್ಮ ಕೊಳಕು, ವಿಷಕಾರಿ ಮನಸ್ಥಿತಿಯನ್ನು ಸಹ ಬಹಿರಂಗಪಡಿಸಿದೆ. ಭಾರತದ ಜನರು, ನಮ್ಮ ಗೌರವಾನ್ವಿತ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಅಚಲ ನಂಬಿಕೆಯೊಂದಿಗೆ, ಅವರನ್ನು ಸತತ ಮೂರನೇ ಬಾರಿಗೆ ಪ್ರಧಾನಿ ಕುರ್ಚಿಯಲ್ಲಿ ಕೂರಿಸಿದ್ದಾರೆ. ಅವರನ್ನು ಟೀಕಿಸುತ್ತಾ ಅವರನ್ನು ಈ ರೀತಿ ಅವಮಾನಿಸುವುದು ಮೋದಿ ಅವರನ್ನು ಬೆಂಬಲಿಸುವ ಕೋಟ್ಯಂತರ ಭಾರತೀಯರನ್ನು ಅವಮಾನಿಸಿದಂತೆ!” ಎಂದಿದ್ದಾರೆ.

“ಮೂರನೇ ಬಾರಿಗೆ ಜನ ಪ್ರಧಾನಿಯಾಗಿ ಮೋದಿ ಅವರನ್ನು ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಇಂತಹ ದುರ್ವರ್ತನೆ ಅಭ್ಯಾಸವಾಗಿದೆ. ನಿಮ್ಮ ರಾಜಕೀಯ ವೈಷಮ್ಯಕ್ಕೆ ಪ್ರಧಾನಿಯವರನ್ನು ಕೀಳಾಗಿ ನೋಡಬೇಡಿ. ಕೂಡಲೇ ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಕೇಳಬೇಕು” ಎಂದು ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದ ಮಲ್ಲಿಕಾರ್ಜುನ ಖರ್ಗೆ; ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ

“ಇಂತಹ ನೀಚ ನಡವಳಿಕೆಯು ಕಾಂಗ್ರೆಸ್ ನಾಯಕರಿಗೆ ಅಭ್ಯಾಸವಾಗಿ ಹೋಗಿದೆ. ಪ್ರತಿ ಬಾರಿ ಚುನಾವಣೆಗಳು ಬಂದಾಗ, ಅವರು ಇಂತಹ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಜನರು ಅವರಿಗೆ ಪ್ರತಿಕ್ರಿಯೆಯಾಗಿ ಪಾಠ ಕಲಿಸುತ್ತಿದ್ದಾರೆ. ಆದರೂ, ಸರಿಪಡಿಸಲು ನಿರಾಕರಿಸುವ ಅವರ ನಡವಳಿಕೆಯು ಅವರ ದುರಹಂಕಾರಕ್ಕೆ ಕನ್ನಡಿಯಾಗಿದೆ” ಎಂದು ಯಡಿಯೂರಪ್ಪ ಕಿಡಿಕಾರಿದ್ದಾರೆ.

ಇದನ್ನೂ ಓದಿ: RSS ಬಗ್ಗೆ ಅವಹೇಳನಕಾರಿ ಮಾತು: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಿಡಿದೆದ್ದ ಬಿಜೆಪಿ, ದೂರು ದಾಖಲು

“ಖರ್ಗೆಯವರೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವದಾದ್ಯಂತ ಅನೇಕ ದೇಶಗಳ ನಾಯಕರು ಅಪ್ರತಿಮ ಜಾಗತಿಕ ನಾಯಕ ಎಂದು ಹೊಗಳುತ್ತಿದ್ದಾರೆ. ವಿಶ್ವದ 26ಕ್ಕೂ ಹೆಚ್ಚು ರಾಷ್ಟ್ರಗಳು ಮೋದಿ ಅವರ ನಾಯಕತ್ವವನ್ನು ಗೌರವಿಸಿ ಅವರಿಗೆ ತಮ್ಮ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಇಡೀ ಜಗತ್ತು ಭಾರತದತ್ತ ಹೆಮ್ಮೆಯಿಂದ ನೋಡುತ್ತಿರುವಾಗ, ನಿಮ್ಮ ರಾಜಕೀಯ ದುರುದ್ದೇಶಕ್ಕಾಗಿ ದೇಶದ ಪ್ರಧಾನಿಯ ವಿರುದ್ಧ ಇಂತಹ ಕೀಳು ಮಟ್ಟದ ಪದಗಳನ್ನು ಬಳಸುತ್ತಿರುವುದು ನಿಮ್ಮ ಕೀಳು ಮನಸ್ಥಿತಿ ಮತ್ತು ನಿಮ್ಮ ರಾಜಕೀಯ ಹತಾಶೆಯನ್ನು ಸಾಬೀತುಪಡಿಸುತ್ತದೆ. ಅಧಿಕಾರಕ್ಕಾಗಿ ನಡೆಯುತ್ತಿರುವ ಹುಚ್ಚು ಹೋರಾಟದಲ್ಲಿ ಒಂದು ಕುಟುಂಬವನ್ನು ಸಂತೋಷಪಡಿಸುವ ಸಲುವಾಗಿ ನೀವು ನಿಮ್ಮ ಘನತೆಯನ್ನು ಕಳೆದುಕೊಂಡಿದ್ದೀರಿ. ನಿಮ್ಮಂತಹ ಹಿರಿಯ ವ್ಯಕ್ತಿಯ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ರಾಷ್ಟ್ರದ ಜನರು ಎಂದಿಗೂ ಕ್ಷಮಿಸುವುದಿಲ್ಲ. ಇಂತಹ ಕೀಳು ಮಟ್ಟದ ಹೇಳಿಕೆಗಾಗಿ ನೀವು ತಕ್ಷಣ ಕ್ಷಮೆಯಾಚಿಸಬೇಕೆಂದು ನಾನು ಒತ್ತಾಯಿಸುತ್ತೇನೆ” ಎಂದು ಮಾಜಿ ಸಿಎಂ ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:56 pm, Tue, 21 April 26

Source link

Leave a Reply

Your email address will not be published. Required fields are marked *