ಗೀತು ಮೋಹನ್​​ದಾಸ್ ಯಾರು? ‘ಟಾಕ್ಸಿಕ್’ ನಿರ್ದೇಶನಕ್ಕೆ ಅವರು ಆಯ್ಕೆ ಆಗಿದ್ದೇಕೆ? – Kannada News | Who is Toxic movie director Geethu Mohandas and why she selected to direct Toxic movie

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಪ್ರಸ್ತುತ ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಟೀಸರ್ ಇಂದಷ್ಟೆ ಬಿಡುಗಡೆ ಆಗಿದ್ದು, ಟೀಸರ್ ಸಖತ್ ‘ಬ್ಲಡ್ಡಿ’ ಆಗಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಯಶ್ ಅವರ ಕ್ಯಾರೆಕ್ಟರ್ ಟೀಸರ್ ಸಹ ಸಖತ್ ವೈಲೆಂಟ್ ಆಗಿತ್ತು, ಈಗ ಬಿಡುಗಡೆ ಆಗಿರುವ ಸಿನಿಮಾ ಟೀಸರ್ ಸಹ ಬಹಳ ವೈಲೆಂಟ್ ಆಗಿದೆ. ‘ಟಾಕ್ಸಿಕ್’ ಸಿನಿಮಾ ನಿರ್ದೇಶಕಿ ಗೀತು ಮೋಹನ್​​ದಾಸ್ ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿದವರು, ‘ಟಾಕ್ಸಿಕ್’ ಅವರೇ ನಿರ್ದೇಶಿಸಿರುವ ಸಿನಿಮಾನಾ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಗೀತು ಮೋಹನ್​​ದಾಸ್ ಸೂಕ್ಷ್ಮ, ಭಾವುಕ ಸಿನಿಮಾಗಳಿಂದ ಹೆಸರಾದವರು, ಆದರೆ ಅಂಥಹವರು ಮಾಸ್, ಕಮರ್ಶಿಯಲ್ ಹೀರೋ ಯಶ್​​ಗೆ ಜೊತೆಯಾಗಿದ್ದು ಹೇಗೆ? ಏಕೆ?

ಗೀತು ಮೋಹನ್​​ದಾಸ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬಾಲ ನಟಿಯಾಗಿ. ಆ ನಂತರ 2000 ರಲ್ಲಿ ಮೋಹನ್​​ಲಾಲ್ ಎದುರು ನಾಯಕಿಯಾಗಿ ನಟಿಸಿದರು. ಬಳಿಕ ಮುಂದಿನ ಒಂಬತ್ತು ವರ್ಷಗಳ ವರೆಗೆ ಹಲವಾರು ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ ನಾಯಕಿಯಾಗಿ ಗೀತು ಮೋಹನ್​​ದಾಸ್ ನಟಿಸಿದರು. ಆದರೆ 2009 ರಲ್ಲಿ ನಟನೆಗೆ ವಿದಾಯ ಹೇಳಿ ಸಿನಿಮಾ ನಿರ್ದೇಶನಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡರು. ‘ಟಾಕ್ಸಿಕ್’ ಸಿನಿಮಾ ನಿರ್ದೇಶನಕ್ಕೂ ಮುನ್ನ ಗೀತು ಮೋಹನ್​​ದಾಸ್ ನಿರ್ದೇಶಿಸಿರುವುದು ಕೇವಲ ಎರಡೇ ಸಿನಿಮಾಗಳನ್ನು ಆ ಎರಡೂ ಸಿನಿಮಾಗಳು ಸಹ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಹಿಟ್ ಆಗಿಲ್ಲ ಆದರೆ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿವೆ. ಬಹಳ ಭಿನ್ನವಾಗಿಯೂ, ಮುಖ್ಯ ವಾಹಿನಿ ಪ್ರತ್ಯೇಕವಾಗಿಯೂ ಇವೆ. ತಮ್ಮ ಸಿನಿಮಾಗಳಿಂದ ಸೂಕ್ಷ್ಮ ಸಂವೇದನೆಯ ನಿರ್ದೇಶಕಿ ಎನಿಸಿಕೊಂಡಿದ್ದಾರೆ ಗೀತು ಮೋಹನ್​​ದಾಸ್ ಆದರೆ ಅವರು ‘ಟಾಕ್ಸಿಕ್’ ಅಂಥಹಾ ಮಾಸ್ ಮಸಾಲ ಸಿನಿಮಾ ನಿರ್ದೇಶನಕ್ಕೆ ಮುಂದಾಗಿರುವುದೇ ಆಶ್ಚರ್ಯ ತಂದಿತ್ತು.

ಇದನ್ನೂ ಓದಿ:‘ಟಾಕ್ಸಿಕ್’ ಟೀಸರ್ ಡೈಲಾಗ್ ಮೂಲಕ ‘ಧುರಂಧರ್ 2’ಗೆ ಎಚ್ಚರಿಕೆ ಕೊಟ್ಟ ಯಶ್

ಗೀತು ಮೋಹನ್​​ದಾಸ್ ಮೊದಲು ನಿರ್ದೇಶಿಸಿದ್ದ ನವಾಜುದ್ಧೀನ್ ಸಿದ್ಧಿಖಿ ‘ಲೈಯರ್ಸ್ ಡೈಸ್’ ಹೆಸರಿನ ಸಿನಿಮಾ ನಿರ್ದೇಶಿಸಿದ್ದರು. ಬಹಳ ಸೂಕ್ಷ್ಮ ಭಾವುಕತೆಗಳನ್ನು ಹೊಂದಿದ್ದ ಈ ಸಿನಿಮಾ 2014 ರಲ್ಲಿ ಬಿಡುಗಡೆ ಆಗಿತ್ತು ಮತ್ತು ಭಾರತದಿಂದ ಆ ವರ್ಷ ಅಧಿಕೃತವಾಗಿ ಆಸ್ಕರ್​​ಗೆ ಸಹ ಆಯ್ಕೆ ಆಗಿತ್ತು. ಸಿನಿಮಾಕ್ಕೆ ಎರಡು ರಾಷ್ಟ್ರಪ್ರಶಸ್ತಿಗಳ ಜೊತೆಗೆ ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದೆ. ಹಿಮಾಚಲದ ಸಣ್ಣ ಹಳ್ಳಿಯಿಂದ ಪತಿಯನ್ನು ಹುಡುಕಿಕೊಂಡು ದೆಹಲಿಗೆ ಬರುವ ಮಹಿಳೆಯೊಬ್ಬಳ ಕತೆಯನ್ನು ಈ ಸಿನಿಮಾ ಒಳಗೊಂಡಿತ್ತು. ಸಿನಿಮಾದ ಬಗ್ಗೆ ಹಾಲಿವುಡ್ ಪತ್ರಿಕೆ ವೆರೈಟಿ ಸಹ ಮೆಚ್ಚಿ ಕೊಂಡಾಡಿತ್ತು.

ಬಳಿಕ ‘ಮೂತನ್’ ಹೆಸರಿನ ಮಲಯಾಳಂ ಸಿನಿಮಾ ನಿರ್ದೇಶಿಸಿದರು ಗೀತು ಮೋಹನ್​​ದಾಸ್ ಈ ಸಿನಿಮಾ ಗ್ಯಾಂಗ್​​ಸ್ಟರ್ ಸಿನಿಮಾ ಆಗಿತ್ತು. ಹೆಸರಿಗೆ ಇದು ಗ್ಯಾಂಗ್​​ಸ್ಟರ್ ಸಿನಿಮಾ ಆಗಿದ್ದರೂ ಸಹ ನಿಜಕ್ಕೂ ಇದು ಲಿಂಗ ಭೇದ, ಸಲಿಂಗಕಾಮದ ಸೂಕ್ಷ್ಮಗಳನ್ನು ಸಹ ಸಿನಿಮಾ ಒಳಗೊಂಡಿತ್ತು. ಇವುಗಳನ್ನು ಒಂದು ಕಮರ್ಶಿಯಲ್ ಚೌಕಟ್ಟಿನಲ್ಲಿ ಗೀತು ಮೋಹನ್​​ದಾಸ್ ಅದ್ಭುತವಾಗಿ ಹಿಡಿದಿಟ್ಟಿದ್ದರು. ಈ ಸಿನಿಮಾನಲ್ಲಿನ ಕೆಲವು ಫ್ರೇಮ್​​ಗಳು ಅದ್ಭುತವಾಗಿದ್ದವು. ಈ ಸಿನಿಮಾ ಸಹ ಕೆಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿತು.

ಮೂಲಗಳ ಪ್ರಕಾರ ‘ಮೂತನ್’ ಸಿನಿಮಾದಿಂದಾಗಿಯೇ ಯಶ್ ಅವರು ಗೀತು ಮೋಹನ್​​ದಾಸ್ ಅವರೊಟ್ಟಿಗೆ ಕೆಲಸ ಮಾಡುವ ನಿರ್ಧಾರ ಮಾಡಿದರು ಎನ್ನಲಾಗಿದೆ. ಗೀತು ಮೋಹನ್​​ದಾಸ್ ಬಳಿ ಕತೆ ಒಂದು ರೆಡಿಯಿತ್ತು, ಆದರೆ ಅದಕ್ಕೆ ಕಮರ್ಶಿಯಲೈಸ್ ಮತ್ತು ಮಾಸ್ ತನಗಳನ್ನು ಬೆರೆಸಿರುವುದು ಯಶ್ ಅವರೇ ಎನ್ನಲಾಗುತ್ತಿದೆ.

ಸಿನಿಮಾದ ಟೀಸರ್, ಟ್ರೈಲರ್​​ನಲ್ಲಿ ಅತಿಯಾದ ಹಿಂಸೆ, ಗ್ಲಾಮರ್ ಕಾಣುತ್ತಿದೆಯಾದರೂ ಸಿನಿಮಾದ ಒಟ್ಟು ಆಶಯ ಇದಕ್ಕೆ ವಿರುದ್ಧವಾಗಿಯೇ ಇರಲಿದೆ ಎಂಬುದು ಗೀತು ಮೋಹನ್​​ದಾಸ್ ಅವರ ಅಭಿಮಾನಿಗಳ ನಿರೀಕ್ಷೆ. ನಿಜ, ಸಿನಿಮಾ ಬಿಡುಗಡೆ ಆದ ಬಳಿಕವೇ ತಿಳಿಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *