ಕತ್ತಲೆ ಎಂಬುದು ಕೇವಲ ಬೆಳಕಿನ ಗೈರುಹಾಜರಿಯಲ್ಲ, ಅದು ದಿಕ್ಕು ತೋಚದ ಸ್ಥಿತಿ. ಆದರೆ ಒಂದು ಸಣ್ಣ ಹಣತೆಯು ಎಂಥಾ ಭೀಕರ ಕತ್ತಲೆಯನ್ನು ಓಡಿಸುವಂತೆ ಗುರುವಿನ ಕೃಪೆಯು ಮಾನವನ ಜೀವನದಲ್ಲಿದ್ದ ಅಜ್ಞಾನವೆಂಬ ಅಂಧಕಾರವನ್ನು ಓಡಿಸಿ ಜ್ಞಾನದ ಬೆಳಕನ್ನು ನೀಡುತ್ತದೆ. ‘ಗು’ ಎಂದರೆ ಅಂಧಕಾರ, ‘ರು’ ಎಂದರೆ ಅದನ್ನು ನಿವಾರಿಸುವವನು ಎಂದರ್ಥ.
ಒಮ್ಮೆ ಒಬ್ಬ ಶಿಷ್ಯ ತನ್ನ ಗುರುವಿನಲ್ಲಿ ಕೇಳಿದನಂತೆ ‘ಗುರುದೇವ, ಈ ಸಂಸಾರ ಸಾಗರದಲ್ಲಿ ನಾನು ಮುಕ್ತಿ, ಶಾಂತಿಯನ್ನು ಪಡೆಯುವುದು ಹೇಗೆ ಎಂದು’ ಅದನ್ನು ಕೇಳಿದ ಗುರುಗಳು ಮುಗುಳ್ನಕ್ಕು, ಆತನ ಕೈಗೆ ಒಂದು ಸಣ್ಣ ದೀಪ ನೀಡಿ, ಈ ದೀಪದ ಬೆಳಕಿನಲ್ಲಿ ಹೆಜ್ಜೆ ಇಡುತ್ತಾ ಸಾಗು ಎಂದು ಹೇಳಿದ್ದರಂತೆ. ಶಿಷ್ಟಯ ಕತ್ತಲೆಯಲ್ಲಿ ನಡೆಯ ತೊಡಗಿದ.
ದೀಪವು ಕೈಗೆ ಕೇವಲ ಕಾಲ ಬುಡದಲ್ಲಿನ ಜಾಗವನ್ನು ಮಾತ್ರ ಬೆಳಗುತ್ತಿತ್ತು. ಆತ ಭಯದಿಂದ ಗುರುಗಳೇ ಈ ಸಣ್ಣ ದೀಪ ಇಡೀ ಹಾದಿಯನ್ನು ಬೆಳಗುತ್ತಿಲ್ಲವಲ್ಲ ಎಂದು ಕೂಗಿದ. ಆಗ ಗುರುಗಳು ಮಗನೇ ನೀನು ಇಡುವ ಪ್ರತಿಯೊಂದು ಹೆಜ್ಜೆಗೂ ಈ ದೀಪ ಬೆಳಕು ನೀಡುತ್ತದೆ,ಮುನ್ನಡೆಯುತ್ತಾ ಹೋಗು, ಪೂರ್ತಿ ಹಾದಿ ತಾನಾಗಿಯೇ ಕಾಣಿಸುತ್ತದೆ ಎಂದು ಹೇಳಿದ್ದರಂತೆ.
ಈ ಕಥೆಯ ಸಾರಾಂಶವೇನೆಂದರೆ, ಜೀವನವೆಂಬ ಪಯಣದಲ್ಲಿ ನಮಗೆ ಇಡೀ ಭವಿಷ್ಯ ಒಮ್ಮೆಲೇ ತಿಳಿಯುವುದಿಲ್ಲ, ಆದರೆ ಧರ್ಮ ಮತ್ತು ಸತ್ಯದ ಹಾದಿಯಲ್ಲಿ ನಡೆಯಲು ಗುರು ನೀಡುವ ಮಾರ್ಗದರ್ಶನ ಹಾಗೂ ಆಶೀರ್ವಾದವೇ ಆ ದಿವ್ಯ ದೀಪ. ಗುರು ಎಂದರೆ ಕೇವಲ ಅಕ್ಷರ ಕಲಿಸುವ ಶಿಕ್ಷಕನಷ್ಟೇ ಅಲ್ಲ; ಮನಸ್ಸಿನ ಅಹಂಕಾರವನ್ನು ಅಳಿಸಿ, ಜೀವನದ ನಿಜವಾದ ಅರ್ಥವನ್ನು ಸಾಕ್ಷಾತ್ಕರಿಸುವ ದಿವ್ಯ ಚೇತನ. ಅಜ್ಞಾನ, ಕಾಮ, ಕ್ರೋಧ, ಮೋಹಗಳೆಂಬ ಸುಂಟರಗಾಳಿಯಲ್ಲಿ ಸಿಲುಕಿದ ಜೀವಕ್ಕೆ ಗುರುವಿನ ಬೋಧನೆಗಳೇ ದಿಕ್ಸೂಚಿ. ಪ್ರತಿಯೊಬ್ಬರ ಜೀವನದಲ್ಲೂ ಗುರುವಿನ ಉಪಸ್ಥಿತಿ ಅತ್ಯಗತ್ಯ. ಏಕೆಂದರೆ ಗುರುವಿಲ್ಲದ ಜೀವನವು ನಾವಿಕನಿಲ್ಲದ ದೋಣಿಯಂತೆ.
ಮತ್ತಷ್ಟು ಓದಿ: Guru Purnima 2026: ಇಂದು ಗುರು ಪೂರ್ಣಿಮೆಯ ವಿಶೇಷ ದಿನ, ಏನಿದರ ವಿಶೇಷತೆ?
ಗುರು ಎಂಬುದು ಕೇವಲ ಒಬ್ಬ ವ್ಯಕ್ತಿಯಲ್ಲ, ಅದೊಂದು ಜಾಗೃತ ಶಕ್ತಿ. ಸೂರ್ಯನು ಕಮಲವನ್ನು ಅರಳಿಸುವಂತೆ, ಗುರುವಿನ ದಿವ್ಯ ಸಾನ್ನಿಧ್ಯವು ಮನುಷ್ಯನಲ್ಲಿ ಅಡಗಿರುವ ಸುಪ್ತ ಚೇತನ ಮತ್ತು ಸತ್ಗುಣಗಳನ್ನು ಹೊರತರುತ್ತದೆ. ನಾವು ಪ್ರಪಂಚದ ಎಲ್ಲಾ ವಿದ್ಯೆಗಳನ್ನು ಕಲಿತರೂ, ನಮ್ಮೊಳಗಿನ ಅಹಂಕಾರ ಮತ್ತು ಮಮಕಾರಗಳನ್ನು ಕಳೆದುಕೊಳ್ಳದಿದ್ದರೆ ಆ ವಿದ್ಯೆಗೆ ಬೆಲೆಯಿರುವುದಿಲ್ಲ. ಸದ್ಗುರುವು ನಮ್ಮ ಅಹಂ ಅನ್ನು ಕಳೆದು, ತಾಳ್ಮೆ, ಕರುಣೆ ಹಾಗೂ ಪ್ರೀತಿಯನ್ನು ಬಿತ್ತುತ್ತಾರೆ. ಬದುಕಿನ ಕಷ್ಟ-ಸುಖಗಳೆಂಬ ಬಿರುಗಾಳಿಯಲ್ಲಿ ಮನಸ್ಸು ತೂಗಾಡಿದಾಗ, ಅಚಲವಾದ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕರುಣಿಸುವುದೇ ಗುರುವಿನ ನುಡಿಮುತ್ತುಗಳು.
ಅಜ್ಞಾನದ ಬಂಧನದಿಂದ ಬಿಡುಗಡೆಗೊಳಿಸಿ, ನಮ್ಮ ನಿಜವಾದ ‘ಆತ್ಮ ಸ್ವರೂಪ’ವನ್ನು ದರ್ಶನ ಮಾಡಿಸುವುದೇ ಗುರುವಿನ ಪರಮೋಚ್ಛ ಗುರಿ. ಆದ್ದರಿಂದಲೇ, ಭಗವಂತನಿಗಿಂತಲೂ ಮುಂಚಿತವಾಗಿ ಗುರುವಿಗೆ ಮೊದಲ ನಮನ ಸಲ್ಲಿಸಬೇಕೆಂದು ನಮ್ಮ ಸಂಸ್ಕೃತಿ ಬೋಧಿಸುತ್ತದೆ. ಈ ಶುಭ ಗುರು ಪೂರ್ಣಿಮೆಯಂದು ನಮ್ಮ ಜೀವನಕ್ಕೆ ಜ್ಞಾನದ ಬೆಳಕು ನೀಡಿ, ಸರಿ-ತಪ್ಪುಗಳ ದಾರಿ ತೋರಿದ ಸಕಲ ಗುರುಪರಂಪರೆಗೆ ಕೋಟಿ ಕೋಟಿ ಪ್ರಣಾಮಗಳು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
