ಪ್ರೊ. ಶಶಿಕಾಂತ್ & ಗುಲ್ಬರ್ಗಾ ವಿವಿImage Credit source: tv9
ಕಲಬುರಗಿ, ಮೇ 9: ಗುಲ್ಬರ್ಗಾ ವಿಶ್ವವಿದ್ಯಾಲಯದ (Gulbarga University) ಕುಲಪತಿ ಪ್ರೊ. ಶಶಿಕಾಂತ್ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಆ್ಯಸಿಡ್ ದಾಳಿ ಮಾಡುವುದಾಗಿ ಬೆದರಿಕೆ ಪತ್ರ ಬರೆದಿದ್ದಾನೆ. 2024ರಲ್ಲಿ ನಡೆದ ಬಿಇಡಿ ಪರೀಕ್ಷೆಯ ಮೌಲ್ಯಮಾಪನದಲ್ಲಿ ನಡೆದಿದ್ದ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ಕುಲಪತಿಗಳು ಪತ್ತೆಹಚ್ಚಿ ತನಿಖೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಈ ಬೆದರಿಕೆ ಹಾಕಲಾಗಿದೆ. ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಕುಲಪತಿಗಳ ವಿರುದ್ಧ ಈ ಮಟ್ಟದ ಬೆದರಿಕೆ ಬಂದಿರುವುದು ಇದೇ ಮೊದಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಮುಖ್ಯಾಂಶಗಳು
- 2024ರ ಬಿಇಡಿ ಮೌಲ್ಯಮಾಪನ ಅಕ್ರಮ ಪತ್ತೆಹಚ್ಚಿದ್ದ ಕುಲಪತಿ ಪ್ರೊ. ಶಶಿಕಾಂತ್.
- ಅಂಕ ತಿದ್ದುಪಡಿ ಹಗರಣದ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ.
- ಮರುಮೌಲ್ಯಮಾಪನದಲ್ಲಿ ಫೇಲ್ ಆದರೆ ಮುಖಕ್ಕೆ ಆ್ಯಸಿಡ್ ಹಾಕುವುದಾಗಿ ಅನಾಮಧೇಯ ಬೆದರಿಕೆ.
ಅಕ್ರಮಕ್ಕೆ ತಡೆಯೊಡ್ಡಿದ್ದೇ ಮುಳುವಾಯಿತೇ?
ಕಳೆದ ಬಿಇಡಿ ಪರೀಕ್ಷೆಯ ಮೌಲ್ಯಮಾಪನದಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿರುವುದು ವಿವಿಯ ಆಂತರಿಕ ಸಮಿತಿಯ ವರದಿಯಿಂದ ದೃಢಪಟ್ಟಿತ್ತು. ಕುಲಪತಿಗಳು ಈ ವಿಷಯವನ್ನು ತಕ್ಷಣವೇ ಸರ್ಕಾರ ಮತ್ತು ರಾಜ್ಯಪಾಲರ ಗಮನಕ್ಕೆ ತಂದಿದ್ದರು. ರಾಜ್ಯಪಾಲರ ಆದೇಶದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆಯಾಗಿದ್ದು, ಸಮಿತಿಯ ಸೂಚನೆಯ ಮೇರೆಗೆ ಸದ್ಯ ಮರುಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದೆ. ಈ ಮರುಮೌಲ್ಯಮಾಪನದಿಂದಾಗಿ ಅಕ್ರಮವಾಗಿ ಅಂಕ ಪಡೆದವರಿಗೆ ಸಂಕಷ್ಟ ಎದುರಾಗಿದೆ.
ಬೆದರಿಕೆ ಪತ್ರದಲ್ಲೇನಿತ್ತು?
‘2 ಲಕ್ಷ ರೂಪಾಯಿ ನೀಡಿ ಬಿಇಡಿ ಪ್ರವೇಶ ಪಡೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ವಿವಿಯ ಸತ್ಯಶೋಧನಾ ಸಮಿತಿಯ ನಿರ್ಧಾರ ನಮಗೆ ಇಷ್ಟವಾಗಿಲ್ಲ. ಒಂದು ವೇಳೆ ಮರುಮೌಲ್ಯಮಾಪನದಿಂದಾಗಿ ಅಂಕಗಳು ಕಡಿಮೆಯಾದರೆ ಅಥವಾ ನಾವು ಅನುತ್ತೀರ್ಣರಾದರೆ, ನಿಮ್ಮ ಮುಖಕ್ಕೆ ಆ್ಯಸಿಡ್ ಹಾಕಿ ನರಳಿ ಬದುಕುವಂತೆ ಮಾಡುತ್ತೇವೆ’ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ಹಣ ಕೊಟ್ಟವರಿಗೆ ಬೇಕಾಬಿಟ್ಟಿ ಅಂಕ: ಗುಲಬರ್ಗಾ ವಿವಿಯ ಕರ್ಮಕಾಂಡ ಬಯಲು
ಈ ಅನಾಮಧೇಯ ಪತ್ರದಿಂದ ಆತಂಕಗೊಂಡ ಕುಲಪತಿಗಳು ನ್ಯಾಯಾಲಯದ ಮೊರೆ ಹೋಗಿದ್ದು, ಈಗ ಕೋರ್ಟ್ ನಿರ್ದೇಶನದಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
