ಗೂಗಲ್ ಮ್ಯಾಪ್ ನಂಬಿ ತಪ್ಪು ದಾರಿಯಲ್ಲಿ ಹೋಗಿ ಪರೀಕ್ಷೆಯಿಂದ ವಂಚಿತರಾದ ನೀಟ್ ವಿದ್ಯಾರ್ಥಿಗಳು – Kannada News | NEET Exam Missed: Google Maps Error Leads Students Astray in Moradabad

ಮೊರಾದಾಬಾದ್, ಜೂನ್ 22: ಗೂಗಲ್ ಮ್ಯಾಪ್(Google Map) ನಂಬಿ ತಪ್ಪು ದಾರಿಯಲ್ಲಿ ಹೋಗಿ ನೀಟ್ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಬಂದಿ ಗೂಗಲ್ ಮ್ಯಾಪ್ ಬಳಕೆ ಮಾಡುತ್ತಿದ್ದಾರೆ. ನೀಟ್ ಯುಜಿ ಮರು ಪರೀಕ್ಷೆಯ ವೇಳೆ ಗೂಗಲ್ ಮ್ಯಾಪ್ ತೋರಿಸಿದ ತಪ್ಪು ಲೋಕೇಶನ್‌ನಿಂದಾಗಿ ಹಲವು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಡವಾಗಿ ತಲುಪಿ, ಪರೀಕ್ಷೆ ಬರೆಯುವ ಅವಕಾಶವನ್ನೇ ತಪ್ಪಿಸಿಕೊಂಡಿದ್ದಾರೆ.

ದೇಶಾದ್ಯಂತ ಸುಮಾರು 22.79 ಲಕ್ಷ ವಿದ್ಯಾರ್ಥಿಗಳು ಈ ಮರು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಗೂಗಲ್ ಆ್ಯಪ್‌ನ ತಾಂತ್ರಿಕ ದೋಷದಿಂದಾಗಿ ಕೆಲ ವಿದ್ಯಾರ್ಥಿಗಳ ಇಡೀ ವರ್ಷದ ಕಷ್ಟ ಮತ್ತು ಭವಿಷ್ಯ ಈಗ ಆತಂಕಕ್ಕೆ ಸಿಲುಕಿದೆ.

ಸಂಭಾಲ್ ನಿವಾಸಿಯಾದ ಫೈಜಾನ್ ಅಲಿ ಎಂಬ ವಿದ್ಯಾರ್ಥಿ ತನಗೆ ನಿಗದಿಯಾಗಿದ್ದ ‘ಆರ್‌ಎನ್ ಇಂಟರ್ ಕಾಲೇಜ್’ ಪರೀಕ್ಷಾ ಕೇಂದ್ರವನ್ನು ಹುಡುಕಲು ಗೂಗಲ್ ಮ್ಯಾಪ್ ಬಳಸಿದ್ದರು. ಆದರೆ ಆ್ಯಪ್ ಕಾಲೇಜಿನ ತಪ್ಪು ವಿಳಾಸವನ್ನು ತೋರಿಸಿದ್ದರಿಂದ ಆತ ಬೇರೆಡೆಯೇ ಹೋಗಿ ತಲುಪಿದ್ದ.

ತಪ್ಪು ದಾರಿಯಿಂದಾಗಿ ಗೊಂದಲಕ್ಕೊಳಗಾದ ಫೈಜಾನ್, ಬಳಿಕ ನಿಜವಾದ ಪರೀಕ್ಷಾ ಕೇಂದ್ರಕ್ಕೆ ಬರುವಷ್ಟರಲ್ಲಿ ನಿಗದಿತ ಸಮಯ ದಾಟಿಹೋಗಿತ್ತು. ಹೀಗಾಗಿ ಪರೀಕ್ಷಾ ನಿಯಮಗಳ ಪ್ರಕಾರ ಆತನಿಗೆ ಒಳಗಡೆ ಪ್ರವೇಶ ನಿರಾಕರಿಸಲಾಯಿತು.

ಮತ್ತಷ್ಟು ಓದಿ: ಗೂಗಲ್​ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪತ್ರ; ಕೊನೆಗೂ ಮ್ಯಾಪ್​ನಲ್ಲಿ ಸರಿಯಾಯ್ತು ಕರ್ನಾಟಕದ ಊರುಗಳ ಹೆಸರು

ಸಾರ್ಥಕ್ ಎಂಬ ಇನ್ನೊಬ್ಬ ವಿದ್ಯಾರ್ಥಿಯೂ ಸಹ ಗೂಗಲ್ ಮ್ಯಾಪ್‌ನ ತಪ್ಪು ಮಾರ್ಗಸೂಚಿಯಿಂದಾಗಿ ಸಮಯಕ್ಕೆ ಸರಿಯಾಗಿ ಕೇಂದ್ರಕ್ಕೆ ತಲುಪಲಾಗದೆ ಪರೀಕ್ಷೆಯಿಂದ ವಂಚಿತನಾಗಿದ್ದಾನೆ.

ತಮ್ಮ ಮಗ ವರ್ಷಗಳಿಂದ ನೀಟ್ ಪರೀಕ್ಷೆಗೆ ಕಷ್ಟಪಟ್ಟು ತಯಾರಿ ನಡೆಸಿದ್ದ. ಕೇವಲ ಒಂದು ತಾಂತ್ರಿಕ ದೋಷದಿಂದಾಗಿ ಆತನ ಇಡೀ ಶೈಕ್ಷಣಿಕ ವರ್ಷವೇ ನಷ್ಟವಾಗುವ ಆತಂಕ ಎದುರಾಗಿದೆ. ಇದಕ್ಕೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಫೈಜಾನ್ ತಂದೆ ಇಕ್ರಾಮ್ ಒತ್ತಾಯಿಸಿದ್ದಾರೆ. ಇತ್ತ ವಿಷಯ ತಿಳಿಯುತ್ತಿದ್ದಂತೆ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಬಂದು ಸಂತ್ರಸ್ತ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಮಾತುಕತೆ ನಡೆಸಿದ್ದಾರೆ.

ಗೂಗಲ್ ಮ್ಯಾಪ್ ಜನರನ್ನು ಅನಾಹುತಕ್ಕೆ ತಳ್ಳುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಗ್ರೇಟರ್ ನೋಯ್ಡಾದ ಐದು ಜನರ ಕುಟುಂಬವೊಂದು ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಹೋಗಿ ಹಾಪುರ ಎಂಬಲ್ಲಿ ದೊಡ್ಡ ಚರಂಡಿಗೆ ಬಿದ್ದು, ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದರು.

ಇಂತಹ ಪ್ರಮುಖ ಪರೀಕ್ಷೆಗಳ ದಿನದಂದು ಕೇವಲ ಡಿಜಿಟಲ್ ನಕ್ಷೆಗಳನ್ನು ನಂಬುವ ಬದಲು, ಒಂದು ದಿನ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರದ ಸರಿಯಾದ ವಿಳಾಸ ಮತ್ತು ದಾರಿಯನ್ನು ಖುದ್ದಾಗಿ ಪರಿಶೀಲಿಸಿಕೊಳ್ಳುವುದು ಒಳಿತು ಎಂದು ತಜ್ಞರು ಕಿವಿಮಾತು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *