IPL 2026: ಐಪಿಎಲ್ 2026ರ ಸೀಸನ್ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (MI) ತಂಡವು ಅತ್ಯಂತ ಕಠಿಣ ಹಂತವನ್ನು ಎದುರಿಸುತ್ತಿದೆ. ಸೋಲಿನ ಸುಳಿಯಿಂದ ಹೊರಬರಲು ಮತ್ತು ಗೆಲುವಿನ ಲಯ ಕಂಡುಕೊಳ್ಳಲು ಮುಂಬೈ ಮ್ಯಾನೇಜ್ಮೆಂಟ್ ಈವರೆಗೆ ಒಟ್ಟು 22 ಆಟಗಾರರನ್ನು ಮೈದಾನಕ್ಕಿಳಿಸಿದೆ. ಈ ಮೂಲಕ ಪ್ರಸಕ್ತ ಸೀಸನ್ನಲ್ಲಿ ಅತಿ ಹೆಚ್ಚು ಆಟಗಾರರನ್ನು ಬಳಸಿಕೊಂಡ ತಂಡ ಎಂಬ ಅಚ್ಚರಿಯ ದಾಖಲೆಗೆ ಮುಂಬೈ ಪಾತ್ರವಾಗಿದೆ.
ಯಾವುದೇ ತಂಡ ಯಶಸ್ವಿಯಾಗಲು ಸ್ಥಿರವಾದ 'ಪ್ಲೇಯಿಂಗ್ ಇಲೆವೆನ್' ಅತ್ಯಗತ್ಯ. ಆದರೆ ಮುಂಬೈ ಈ ಬಾರಿ ಪ್ರತಿ ಪಂದ್ಯದಲ್ಲೂ ಒಂದಿಲ್ಲೊಂದು ಬದಲಾವಣೆ ಮಾಡುತ್ತಲೇ ಸಾಗಿದೆ. ಆರಂಭಿಕ ಬ್ಯಾಟರ್ಗಳಿಂದ ಹಿಡಿದು ಫಿನಿಶರ್ಗಳವರೆಗೆ ಎಲ್ಲೂ ಸ್ಥಿರತೆ ಕಾಣುತ್ತಿಲ್ಲ. ತಂಡವು ಈವರೆಗೆ ಸುಮಾರು 5 ವಿಭಿನ್ನ ಆರಂಭಿಕ ಜೋಡಿಗಳನ್ನು ಕಣಕ್ಕಿಳಿಸಿರುವುದು ತಂಡದ ಅಸ್ಥಿರತೆಗೆ ಸಾಕ್ಷಿಯಾಗಿದೆ.
ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಅಲ್ಲಾ ಗಜನ್ಫರ್, ಮಯಾಂಕ್ ಮಾರ್ಕಾಂಡೆ ಅವರಂತಹ ಸ್ಪಿನ್ನರ್ಗಳನ್ನು ಪದೇ ಪದೇ ಅದಲು ಬದಲು ಮಾಡುತ್ತಿದೆ. ಅಲ್ಲದೆ, ಶರ್ಫೇನ್ ರದರ್ಫೋರ್ಡ್, ರಾಬಿನ್ ಮಿಂಝ್ ಮತ್ತು ಮಯಾಂಕ್ ರಾವತ್ ಅವರಂತಹ ಯುವ ಆಟಗಾರರನ್ನು ಗೆಲುವಿನ ಸೂತ್ರವಾಗಿ ಬಳಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಆದರೆ, ಈ ನಿರಂತರ ಬದಲಾವಣೆಗಳು ಆಟಗಾರರಲ್ಲಿ ಆತ್ಮವಿಶ್ವಾಸದ ಕೊರತೆಯನ್ನು ಉಂಟುಮಾಡುತ್ತಿವೆ ಎಂಬುದಕ್ಕೆ ಬ್ಯಾಕ್ ಟು ಬ್ಯಾಕ್ ಸೋಲುಗಳೇ ಸಾಕ್ಷಿ.
ಸೋಲಿಗೆ ಕಾರಣವೇನು? ತಂಡದ ಪ್ರಮುಖ ಆಟಗಾರರ ಫಾರ್ಮ್ ಕೊರತೆ ಮತ್ತು ಬೌಲಿಂಗ್ ವಿಭಾಗದಲ್ಲಿನ ದೌರ್ಬಲ್ಯ ಮುಂಬೈ ಪಾಲಿಗೆ ಮುಳುವಾಗಿದೆ. ಒಂದು ಗೆಲುವಿಗಾಗಿ ಇಷ್ಟೊಂದು ಆಟಗಾರರನ್ನು ಬದಲಿಸುತ್ತಿರುವುದು ತಂಡದ ಸಂಯೋಜನೆಯನ್ನು ಹಾಳುಮಾಡುತ್ತಿದೆ. ಇದಾಗ್ಯೂ ಹಾರ್ದಿಕ್ ಪಾಂಡ್ಯ ಪಡೆಗೆ ಗೆಲ್ಲಲು ಸಾಧ್ಯವಾಗುತ್ತಿಲ್ಲ.
ಮುಂಬೈ ಇಂಡಿಯನ್ಸ್ ತಂಡಕ್ಕೆ ಈಗ ಬೇಕಿರುವುದು ಕೇವಲ ಆಟಗಾರರ ಬದಲಾವಣೆಯಲ್ಲ, ಬದಲಾಗಿ ಮೈದಾನದಲ್ಲಿ ತೋರುವ ಕೆಚ್ಚೆದೆಯ ಪ್ರದರ್ಶನ. ಉಳಿದ ಪಂದ್ಯಗಳಲ್ಲಾದರೂ ಮುಂಬೈ ಒಂದು ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿದು ಅಭಿಮಾನಿಗಳಿಗೆ ಹಳೆಯ ಸಂಭ್ರಮವನ್ನು ಮರಳಿ ನೀಡುತ್ತದೆಯೇ ಎಂದು ಕಾದು ನೋಡಬೇಕಿದೆ.
ಐಪಿಎಲ್ 2026 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ ಆಟಗಾರರು: ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ, ದಾನಿಶ್ ಮಲೇವಾರ್, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ವಿಲ್ ಜಾಕ್ಸ್, ಶಾರ್ದೂಲ್ ಠಾಕೂರ್, ಕಾರ್ಬಿನ್ ಬಾಷ್, ರಾಜ್ ಅಂಗದ್ ಬಾವಾ, ಮಯಾಂಕ್ ರಾವತ್, ಕ್ರಿಶ್ ಭಗತ್, ಮಿಚೆಲ್ ಸ್ಯಾಂಟ್ನರ್, ಕ್ವಿಂಟನ್ ಡಿ ಕಾಕ್, ರಿಯಾನ್ ರಿಕೆಲ್ಟನ್, ರಾಬಿನ್ ಮಿಂಜ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ದೀಪಕ್ ಚಹಾರ್, ಮಯಾಂಕ್ ಮಾರ್ಕಾಂಡೆ, ಅಲ್ಲಾ ಗಜನ್ಫರ್, ಅಶ್ವಿನಿ ಕುಮಾರ್.
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಯಾನ್ ರಿಕಲ್ಟನ್, ರಾಬಿನ್ ಮಿಂಝ್, ರಾಜ್ ಬಾವಾ, ರಘು ಶರ್ಮಾ, ಕಾರ್ಬಿನ್ ಬಾಷ್, ನಮನ್ ಧೀರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಲ್ಲಾ ಗಫನ್ಝರ್, ಅಶ್ವನಿ ಕುಮಾರ್, ದೀಪಕ್ ಚಹರ್, ವಿಲ್ ಜ್ಯಾಕ್ಸ್, ಶೆರ್ಫೇನ್ ರದರ್ಫೋರ್ಡ್, ಮಯಾಂಕ್ ಮಾರ್ಕಂಡೆ, ಶಾರ್ದೂಲ್ ಠಾಕೂರ್, ಕ್ವಿಂಟನ್ ಡಿ ಕಾಕ್, ಡ್ಯಾನಿಶ್ ಮಾಲೆವಾರ್, ಮೊಹಮ್ಮದ್ ಇಝಾರ್, ಅಥರ್ವ ಅಂಕೋಲೆಕರ್, ಮಯಾಂಕ್ ರಾವತ್.
