ಭಾರತ ತಂಡವು ಟಿ20 ವಿಶ್ವಕಪ್ನ 27ನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಸೂಪರ್-8 ಹಂತಕ್ಕೇರಿದೆ. ಕೊಲಂಬೊದಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 175 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡ 18 ಓವರ್ಗಳಲ್ಲಿ 114 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 61 ರನ್ಗಳ ಜಯ ಸಾಧಿಸಿದೆ.
ಈ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ವಿಶ್ವಕಪ್ ಸೋಲಿನ ಭೀತಿ ಎದುರಾಗಿದೆ. ಅಂದರೆ ಶಿವರಾತ್ರಿಯಂದು ಪಂದ್ಯ ಗೆದ್ದರೆ ಭಾರತ ವಿಶ್ವಕಪ್ ಗೆಲ್ಲುವುದಿಲ್ಲ ಎಂಬ ಪ್ರತೀತಿ ಇದೆ. ಇದಕ್ಕೆ ಸಾಕ್ಷಿಯಾಗಿ ಈ ಹಿಂದಿನ ಅಂಕಿ ಅಂಶಗಳನ್ನು ಮುಂದಿಡಲಾಗುತ್ತಿದೆ. ಕಾಕತಾಳೀಯ ಎಂಬಂತೆ ಈ ಹಿಂದೆ ಭಾರತ ತಂಡವು ಶಿವರಾತ್ರಿಯ ದಿನದಂದು ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದರೂ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ.
- 2023 ರಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ಅಮೋಘ ಗೆಲುವು ದಾಖಲಿಸಿತ್ತು. ಮಹಾ ಶಿವರಾತ್ರಿ ದಿನ ನಡೆದಿದ್ದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್ಗಳ ವಿಜಯ ಸಾಧಿಸಿತ್ತು.
- 2015ರ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡವು ಪಾಕಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಶಿವರಾತ್ತಿಯಂದು ನಡೆದಿದ್ದ ಆ ಪಂದ್ಯವನ್ನು ಟೀಮ್ ಇಂಡಿಯಾ 76 ರನ್ಗಳಿಂದ ಗೆದ್ದುಕೊಂಡಿದ್ದರು.
ಈ ಎರಡೂ ವಿಶ್ವಕಪ್ನಲ್ಲೂ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿರಲಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಈ ಎರಡೂ ವಿಶ್ವಕಪ್ಗಳಲ್ಲೂ ಆಸ್ಟ್ರೇಲಿಯಾ ವಿರುದ್ಧವೇ ಸೋಲನುಭವಿಸಿ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದರು.
- 2003 ರ ಏಕದಿನ ವಿಶ್ವಕಪ್ನ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು 125 ರನ್ಗಳ ಅಂತರದಿಂದ ಹೀನಾಯ ಸೋಲನುಭವಿಸಿತ್ತು.
- 2015 ರ ಏಕದಿನ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಟೀಮ್ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿತ್ತು.
ಅಂದರೆ ಶಿವರಾತ್ರಿಯಂದು ಭಾರತ ತಂಡ ಪಾಕಿಸ್ತಾನ್ ವಿರುದ್ಧ ಗೆದ್ದಾಗ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೇ ಕಾಕತಾಳೀಯತೆಯನ್ನು ಮುಂದಿಟ್ಟುಕೊಂಡು ಈ ಬಾರಿ ಭಾರತ ತಂಡ ಕಪ್ ಗೆಲ್ಲುವುದು ಅನುಮಾನ ಎನ್ನಲಾಗುತ್ತಿದೆ.
ಇದನ್ನೂ ಓದಿ: VIDEO: ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರ ನಡುವೆ ‘ಒಳ’ಜಗಳ
ಆದರೆ ಈ ಬಾರಿ ಬಲಿಷ್ಠ ಪಡೆಯನ್ನೇ ಹೊಂದಿರುವ ಟೀಮ್ ಇಂಡಿಯಾ ಎಲ್ಲಾ ಕಾಕತಾಳೀಯತೆಗಳನ್ನು ಬದಿಗಿರಿಸಿ ವಿಶ್ವ ಚಾಂಪಿಯನ್ ಆಗಿ ಹೊಸ ಇತಿಹಾಸ ಬರೆಯಲಿದೆಯಾ ಕಾದು ನೋಡಬೇಕಿದೆ.
