ಇತ್ತೀಚೆಗಷ್ಟೆ ಸ್ನೇಹಿತರ ದಿನ ಮುಗಿದಿದೆ. ಸ್ನೇಹಿತರ ದಿನದಂದು ಸಾಮಾನ್ಯ ಆಚರಣೆಯೆಂದರೆ ಹಳೆಯ ಸ್ನೇಹಿತರೆಲ್ಲ ಸೇರಿ ಎಣ್ಣೆ ಹೊಡೆಯುತ್ತಾರೆ, ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಪರಸ್ಪರ ಶುಭ ಸಂದೇಶಗಳನ್ನು ಕಳಿಸಿಕೊಳ್ಳುತ್ತಾರೆ. ಆದರೆ ಸ್ಟಾರ್ ನಟ ಅಲ್ಲು ಅರ್ಜುನ್, ಸ್ನೇಹಿತರ ದಿನದಂದು ತಮ್ಮ ಗೆಳೆಯರಿಂದ ಅದ್ಭುತವಾದ ಅವಕಾಶವೊಂದನ್ನು ಸೃಷ್ಟಿಸಿ ಕೊಟ್ಟಿದ್ದಾರೆ. ಯಾರೂ ನೀಡದ ಅಪರೂಪದ ಉಡುಗೊರೆಯೊಂದನ್ನು ತಮ್ಮ ಆಪ್ತ ಸ್ನೇಹಿತರಿಗೆ ಅಲ್ಲು ಅರ್ಜುನ್ (Allu Arjun) ನೀಡಿದ್ದಾರೆ.
ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಭಾರತದ ದೊಡ್ಡ-ದೊಡ್ಡ ನಿರ್ಮಾಪಕರು ಅವರ ಸಿನಿಮಾಕ್ಕೆ ಬಂಡವಾಳ ಹೂಡಲು ಹಣದ ಥೈಲಿ ಹಿಡಿದುಕೊಂಡು ಕಾಯುತ್ತಿದ್ದಾರೆ. ಆದರೆ ಅಲ್ಲು ಅರ್ಜುನ್, ತಮ್ಮ ಗೆಳೆಯರಿಗೆ ತಮ್ಮ ಸಿನಿಮಾದ ನಿರ್ಮಾಪಕರಾಗುವ ಅವಕಾಶ ನೀಡಿದ್ದಾರೆ. ಆ ಮೂಲಕ ಅವರನ್ನು ಬ್ಯುಸಿನೆಸ್ ಪಾರ್ಟನರ್ ಮಾಡಿಕೊಂಡಿದ್ದಾರೆ. ಅಲ್ಲು ಅರ್ಜುನ್ ನಟಿಸಿ, ಲೋಕೇಶ್ ಕನಕರಾಜ್ ನಿರ್ದೇಶನ ಮಾಡಲಿರುವ ‘AA23’ ಸಿನಿಮಾಕ್ಕೆ ಅಲ್ಲು ಅರ್ಜುನ್ ಅವರ ನಾಲ್ಕು ಗೆಳೆಯರು ಸಹ ನಿರ್ಮಾಪಕರಾಗಿದ್ದಾರೆ. ಸ್ನೇಹಿತರ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ, ‘ಪುಷ್ಪ’ ನಟ ತಮ್ಮ ಅತ್ಯಂತ ಆಪ್ತರಾದ ನಾಲ್ವರು ಸ್ನೇಹಿತರನ್ನು ಈ ಚಿತ್ರಕ್ಕೆ ಸಹ-ನಿರ್ಮಾಪಕರನ್ನಾಗಿ ಸೇರಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
‘AA23’ ಚಿತ್ರಕ್ಕೆ ಅಲ್ಲು ಅರ್ಜುನ್ ಅವರ ಆಪ್ತ ಗೆಳೆಯರಾದ ಬನ್ನಿ ವಾಸು, ಸಂದೀಪ್ ರಾಮಿನೇನಿ, ನಟರಾಜ್ ಮತ್ತು ಸ್ವಾತಿ ಅವರನ್ನು ಸಹ-ನಿರ್ಮಾಪಕರಾಗಿ ಅಲ್ಲು ಅರ್ಜುನ್ ಸೇರಿಸಿಕೊಂಡಿದ್ದಾರೆ. ತಮ್ಮ ಕಷ್ಟ-ಸುಖದ ಹಾದಿಯಲ್ಲಿ ಜೊತೆಯಾಗಿ ನಿಂತವರನ್ನು ನಟ ಎಂದಿಗೂ ಮರೆಯುವುದಿಲ್ಲ ಎಂದು ಅಭಿಮಾನಿಗಳು ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾಕ್ಕೆ ಅಲ್ಲು ಅರ್ಜುನ್ ಗೆಳೆಯರ ಜೊತೆಗೆ ಮೈತ್ರಿ ಮೂವಿ ಮೇಕರ್ಸ್ ಸಹ ನಿರ್ಮಾಪಕರಾಗಿ ಜೊತೆಗಿರಲಿದ್ದಾರೆ.
ಇದನ್ನೂ ಓದಿ:ತಮ್ಮ ಫ್ಯಾನ್ಸ್ಗೆ ಬಂಪರ್ ಗಿಫ್ಟ್ ಕೊಟ್ಟ ನಟ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಮತ್ತು ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಅವರುಗಳು ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. ಪ್ರಸ್ತುತ ತಮಿಳಿನ ಅಟ್ಲಿ ನಿರ್ದೇಶನದ ‘ರಾಕಾ’ ಸಿನಿಮಾನಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಮುಗಿದ ಬಳಿಕ ಲೋಕೇಶ್ ಕನಗರಾಜ್ ಅವರ ಚಿತ್ರೀಕರಣ ನಡೆಯಲಿದೆ. ಈ ಸಿನಿಮಾ ರೆಟ್ರೋ ಶೈಲಿಯ ಕತೆ ಹೊಂದಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಅಲ್ಲು ಅರ್ಜುನ್ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ. ಈಗ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಮಲಯಾಳಂ ಸ್ಟಾರ್ ನಟ, ನಿರ್ದೇಶಕ ಬಾಸಿಲ್ ಜೋಸೆಫ್ ನಿರ್ದೇಶನ ಮಾಡಲಿರುವ ಸೂಪರ್ ಹೀರೋ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಸುಕುಮಾರ್ ನಿರ್ದೇಶನ ‘ಪುಷ್ಪ 3’ ಸಿನಿಮಾನಲ್ಲೂ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
