Headlines

ಗೋಲುಗಳ ಸುರಿಮಳೆ… ಫಿಫಾ ವಿಶ್ವಕಪ್​ನಲ್ಲಿ ಹೊಸ ಇತಿಹಾಸ – Kannada News | World Cup 2026: Historic 100 Goal Blitz Sets 68 Year High

ಫಿಫಾ ವಿಶ್ವಕಪ್ 2026ರ ಟೂರ್ನಿಯ ಆರಂಭಿಕ ಪಂದ್ಯಗಳಲ್ಲೇ ಗೋಲುಗಳ ಸುರಿಮಳೆಯಾಗಿದೆ. ಇದಕ್ಕೆ ಸಾಕ್ಷಿ ಕೇವಲ 33 ಪಂದ್ಯಗಳಲ್ಲೇ 100 ಗೋಲುಗಳು ದಾಖಲಾಗಿರುವುದು. ಹೀಗೆ ಅತೀ ಕಡಿಮೆ ಪಂದ್ಯಗಳಲ್ಲಿ ನೂರು ಗೋಲುಗಳು ದಾಖಲಾಗುತ್ತಿರುವುದು 68 ವರ್ಷಗಳ ಬಳಿಕ ಎಂಬುದು ವಿಶೇಷ.

100ನೇ ಗೋಲು:

ಫಿಫಾ ವಿಶ್ವಕಪ್​ನ 33ನೇ ಪಂದ್ಯದಲ್ಲಿ ನೆದರ್​ಲೆಂಡ್ಸ್​  ಮತ್ತು ಸ್ವೀಡನ್ ತಂಡಗಳು ಮುಖಾಮುಖಿಯಾಗಿದ್ದವು. ಹೂಸ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವು 5 ಗೋಲು ಬಾರಿಸಿದರೆ, ಸ್ವೀಡನ್ ವಿರುದ್ಧ 1 ಗೋಲು ದಾಖಲಿಸಿತ್ತು. ಈ ಪಂದ್ಯದಲ್ಲಿ ನೆದರ್​ಲೆಂಡ್ಸ್​  ವಿಂಗರ್ ಕೋಡಿ ಗ್ಯಾಕ್ಪೋ ಬಾರಿಸಿದ ಗೋಲು ಈ ಬಾರಿಯ ವಿಶ್ವಕಪ್‌ನ 100ನೇ ಐತಿಹಾಸಿಕ ಗೋಲಾಗಿ ದಾಖಲಾಯಿತು.

ಹೊಸ ಇತಿಹಾಸ:

ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ 100 ಗೋಲು ದಾಖಲಾಗಿರುವುದು 1954 ರಲ್ಲಿ. ಇದಾದ ಬಳಿಕ 1958 ರಲ್ಲಿ ಅತೀ ಕಡಿಮೆ ಪಂದ್ಯಗಳಲ್ಲಿ ನೂರು ಗೋಲುಗಳು ದಾಖಲಾಗಿತ್ತು. ಆ ನಂತರ 35 ಕ್ಕಿಂತ ಕಡಿಮೆ ಮ್ಯಾಚ್​ಗಳಲ್ಲಿ 100 ಗೋಲುಗಳು ಮೂಡಿಬಂದಿರಲಿಲ್ಲ.

  • 1954 ರಲ್ಲಿ ಸ್ವಿಟ್ಜರ್ಲೆಂಡ್​ನಲ್ಲಿ ನಡೆದ ವಿಶ್ವಕಪ್​ನಲ್ಲಿ ಕೇವಲ 20 ಪಂದ್ಯಗಳಲ್ಲಿ 100 ಗೋಲುಗಳು ದಾಖಲಾಗಿದ್ದವು.
  • 1958 ರಲ್ಲಿ ಸ್ವೀಡನ್​ನಲ್ಲಿ ನಡೆದ ವಿಶ್ವಕಪ್​ನಲ್ಲಿ 33 ಪಂದ್ಯಗಳಲ್ಲಿ 100 ಗೋಲುಗಳು ದಾಖಲಾಗಿದ್ದವು.

ಇದೀಗ ಕೆನಡಾ/ಮೆಕ್ಸಿಕೋ/ಯುಎಸ್‌ಎ ಜಂಟಿಯಾಗಿ ಆಯೋಜಿಸುತ್ತಿರುವ ಫಿಫಾ ವಿಶ್ವಕಪ್​ನಲ್ಲಿ 33 ಪಂದ್ಯಗಳಲ್ಲಿ 100 ಗೋಲುಗಳು ದಾಖಲಾಗಿವೆ. ಈ ಮೂಲಕ 68 ವರ್ಷಗಳ ಬಳಿಕ ಫಿಫಾ ವಿಶ್ವಕಪ್​ನಲ್ಲಿ ಅತ್ಯಂತ ಕಡಿಮೆ ಪಂದ್ಯಗಳಲ್ಲಿ ನೂರು ಗೋಲುಗಳು ಮೂಡಿಬಂದಿವೆ.

ಗೋಲುಗಳ ಸುರಿಮಳೆಗೆ ಕಾರಣವೇನು?

ಈ ಬಾರಿಯ ಫಿಫಾ ವಿಶ್ವಕಪ್​ನಲ್ಲಿ ಒಟ್ಟು 48 ತಂಡಗಳು ಭಾಗವಹಿಸುತ್ತಿವೆ. ಇಲ್ಲಿ ಬಲಿಷ್ಠ ತಂಡಗಳು ದುರ್ಬಲ ತಂಡಗಳ ವಿರುದ್ಧ ಪಾರುಪತ್ಯ ಮೆರೆಯುತ್ತಿದೆ.  ಉದಾಹರಣೆಗೆ, ಜರ್ಮನಿ ತಂಡವು ಕುರಾಸಾವೊ ವಿರುದ್ಧ 7-1 ರಿಂದ ಮತ್ತು ಕೆನಡಾ ತಂಡವು ಖತಾರ್ ವಿರುದ್ಧ 6-0 ಅಂತರದಿಂದ ಗೆದ್ದಿದೆ. ಅಂದರೆ ದುರ್ಬಲ ತಂಡಗಳ ವಿರುದ್ಧ ಬಲಿಷ್ಠ ಟೀಮ್​ಗಳು ಹೆಚ್ಚು ಗೋಲುಗಳನ್ನು ಬಾರಿಸುತ್ತಿದೆ.

ಹಾಗೆಯೇ ಈ ಬಾರಿ ಕಟ್ಟು ನಿಟ್ಟಿನ ನಿಯಮ ಜಾರಿಯಲ್ಲಿರುವುದರಿಂದ ಪಂದ್ಯವು ಸರಾಗವಾಗಿ ನಡೆಯುತ್ತಿದೆ. ಅಂದರೆ ಆಟಗಾರರ ಸಮಯ ವ್ಯರ್ಥಕ್ಕೆ ಈ ಬಾರಿ ಬ್ರೇಕ್ ಹಾಕಲಾಗಿದೆ. ಇದರಿಂದ ಕೂಡ ಗೋಲುಗಳ ಸಂಖ್ಯೆ ಹೆಚ್ಚಾಗಿದೆ. ಉದಾಹರಣೆಗೆ, ಈವರೆಗಿನ ದಾಖಲಾಗಿರುವ 100 ಗೋಲುಗಳಲ್ಲಿ ಶೇ. 28 ರಷ್ಟು (28 ಗೋಲುಗಳು) ಪಂದ್ಯದ ಕೊನೆಯ 15 ನಿಮಿಷಗಳಲ್ಲಿ ಮತ್ತು ಸ್ಟಾಪೇಜ್ ಸಮಯದಲ್ಲಿ ದಾಖಲಾಗಿವೆ.  ಅಂದರೆ ಸಮಯ ವ್ಯರ್ಥ ಮಾಡುವುದರ ವಿರುದ್ಧದ ಕಠಿಣ ನಿಯಮಗಳು ಮತ್ತು 5 ಆಟಗಾರರ ಬದಲಾವಣೆಗೆ ಆಯ್ಕೆ ಇರುವುದರಿಂದ ಗೋಲುಗಳ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಚೆಂಡೆಸೆದರೆ…. ಬ್ಯಾಟ್ ಎಸಿತೀನಿ: ಕೆರಳಿದ ಕೀರನ್ ಪೊಲಾರ್ಡ್​!

ಇನ್ನು ಈ ಟೂರ್ನಿಯಲ್ಲಿ ಬಳಸಲಾಗುತ್ತಿರುವ ಅಡಿಡಾಸ್ ಕಂಪನಿಯ ಹೊಸ ಚೆಂಡು ಗಾಳಿಯಲ್ಲಿ ಅನಿರೀಕ್ಷಿತವಾಗಿ ತಿರುವು ಪಡೆದುಕೊಳ್ಳುತ್ತಿದೆ ಎಂಬ ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿವೆ. ಚೆಂಡು ಗಾಳಿಯಲ್ಲಿ ವೇಗವಾಗಿ ಸಾಗುತ್ತಿರುವುದರಿಂದ ಗೋಲ್‌ಕೀಪರ್‌ಗಳಿಗೆ ಬಾಲ್ ತಡೆಯುವುದು ಕಷ್ಟವಾಗುತ್ತಿದೆ. ಇದೇ ಕಾರಣದಿಂದಾಗಿ 10ಕ್ಕೂ ಹೆಚ್ಚು ಗೋಲುಗಳು ಬಾಕ್ಸ್‌ನ ಹೊರಗಿನಿಂದಲೇ ದಾಖಲಾಗಿವೆ. ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿ ಕೇವಲ 33 ಪಂದ್ಯಗಳಲ್ಲೇ ನೂರು ಗೋಲುಗಳು ದಾಖಲಾಗಿ ಹೊಸ ಇತಿಹಾಸ ನಿರ್ಮಾಣವಾಗಿದೆ.

Source link

Leave a Reply

Your email address will not be published. Required fields are marked *