ಬೆಂಗಳೂರು, ಜೂ.22: ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯ ಮಳೆ ಬಂದರೂ ಹಳೆಯ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ಜಲಾವೃತವಾಗಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇಂಜಿನಿಯರ್ಗಳ ಬೇಜವಾಬ್ದಾರಿತನವೇ ನೇರ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ರಸ್ತೆಗಳಿಗೆ ಮರುಡಾಂಬರೀಕರಣ (Resurfacing) ಮಾಡುವ ಮುನ್ನ ಹಳೆಯ ಡಾಂಬರನ್ನು ಕೆರೆದು ತೆಗೆಯುವ ‘ಮಿಲ್ಲಿಂಗ್’ (Milling) ನಿಯಮವನ್ನು ಗಾಳಿಗೆ ತೂರಿ, ಹಳೆಯ ರಸ್ತೆಯ ಮೇಲೆಯೇ ಪದರ ಪದರವಾಗಿ ಹೊಸ ಡಾಂಬರು ಹಾಕುತ್ತಿರುವುದರಿಂದ ರಸ್ತೆಗಳ ಎತ್ತರ ಹೆಚ್ಚಾಗುತ್ತಿದ್ದು, ಮನೆಗಳು ತಗ್ಗು ಪ್ರದೇಶಕ್ಕೆ ತಳ್ಳಲ್ಪಡುತ್ತಿವೆ ಎಂಬ ದೂರುಗಳು ಕೇಳಿ ಬಂದಿದೆ.
ಬೆಂಗಳೂರು ಪೋಸ್ಟ್ ಎಂಬ ಎಕ್ಸ್ ಖಾತೆಯಲ್ಲಿ ನಾಗರಿಕರು ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ದಶಕಗಳ ಹಿಂದೆ ನಿರ್ಮಿಸಲಾದ ಮನೆಗಳಿಗಿಂತ ಈಗಿನ ರಸ್ತೆಗಳೇ ಎತ್ತರವಾಗಿವೆ. ಮಳೆ ಬಂದಾಗ ರಸ್ತೆಯ ನೀರೆಲ್ಲಾ ಸಹಜವಾಗಿಯೇ ತಗ್ಗಿನಲ್ಲಿರುವ ಮನೆಗಳ ಆವರಣಕ್ಕೆ ನುಗ್ಗುತ್ತಿದೆ. ಜಿಬಿಎ ಇಂಜಿನಿಯರ್ಗಳು ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ” ಎಂದು ನಾಗರಿಕರು ಆತಂಕ ಹಂಚಿಕೊಂಡಿದ್ದಾರೆ.
ಇಲ್ಲಿದೆ ನೋಡಿ ಸ್ಟೋರಿ:
This is exactly why many older homes flood during heavy rains. Instead of milling existing roads before relaying, layers of asphalt are repeatedly added over the years, raising road levels above houses built decades ago and causing water to flow into properties. #Bengaluru
Why… https://t.co/L7AiUcVg60 pic.twitter.com/9UJXIcAPwu
— Bengaluru Post (@bengalurupost1) June 21, 2026
ಪಾಲಿಕೆಯ ನಿಯಮಾವಳಿಗಳ ಪ್ರಕಾರ, ಯಾವುದೇ ರಸ್ತೆಗೆ ಮರುಡಾಂಬರೀಕರಣ ಮಾಡುವ ಮುನ್ನ ಹಳೆಯ ರಸ್ತೆಯ ಮೇಲ್ಭಾಗವನ್ನು ‘ಮಿಲ್ಲಿಂಗ್ ಮೆಷಿನ್’ ಮೂಲಕ ಕೆರೆದು ಸಮತಟ್ಟು ಮಾಡಬೇಕು. ಆದರೆ ಬೆಂಗಳೂರಿನಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ ನೋಡಿ.
ಕ್ವಿಕ್-ಫಿಕ್ಸ್ (Quick-fix) ತಂತ್ರ: ಹಳೆಯ ರಸ್ತೆ ಕೆರೆಯುವ ಪ್ರಕ್ರಿಯೆಗೆ ಸಮಯ ಮತ್ತು ಶ್ರಮ ಹೆಚ್ಚು ಬೇಕಾಗುತ್ತದೆ. ಹೀಗಾಗಿ ಇಂಜಿನಿಯರ್ಗಳು ಮತ್ತು ಗುತ್ತಿಗೆದಾರರು ಶಾರ್ಟ್ಕಟ್ ಹುಡುಕುತ್ತಿದ್ದು, ಕೇವಲ ಕಾಟಾಚಾರಕ್ಕೆ ರಸ್ತೆ ನಿರ್ಮಿಸುತ್ತಿದ್ದಾರೆ.
ವೆಚ್ಚ ಉಳಿತಾಯ ಮತ್ತು ನಿರ್ಲಕ್ಷ್ಯ: ಮಿಲ್ಲಿಂಗ್ ಮಾಡಲು ಪ್ರತ್ಯೇಕ ಯಂತ್ರೋಪಕರಣಗಳು ಹಾಗೂ ಹೆಚ್ಚುವರಿ ಅನುದಾನ ಬೇಕಾಗುತ್ತದೆ. ಗುತ್ತಿಗೆದಾರರು ಲಾಭದ ಆಸೆಗೆ ಬಿದ್ದು ಈ ಹಂತವನ್ನು ಸಂಪೂರ್ಣವಾಗಿ ಕೈಬಿಡುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳ ಮೌನ ಸಮ್ಮತಿಯೂ ಇದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಟೋಲ್ ಕಟ್ಟಲ್ಲ ಅಂದ್ರೆ ಒನ್ ವೇ ನಲ್ಲಿ ನುಗ್ತೀರಾ?: ಬ್ರಹ್ಮರಕೂಟ್ಲು ಟೋಲ್ ಗೇಟ್ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಇನ್ನು ಈ ಬಗ್ಗೆ ಎಕ್ಸ್ನಲ್ಲಿ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ನಿಯಮಗಳಿದ್ದರೂ ಬಿಬಿಎಂಪಿ ಇಂಜಿನಿಯರ್ಗಳು ‘ಮಿಲ್ಲಿಂಗ್’ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಏಕೆ ಜಾರಿಗೊಳಿಸುತ್ತಿಲ್ಲ? ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ಕಾಮಗಾರಿಗಳಲ್ಲಿ ಇಂತಹ ‘ಕ್ವಿಕ್-ಫಿಕ್ಸ್’ ಆಟಗಳಿಗೆ ಬ್ರೇಕ್ ಹಾಕುವುದು ಯಾವಾಗ? ಎಂಬೆಲ್ಲ ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ-ಪಾಸ್ತಿ ನಷ್ಟ ಅನುಭವಿಸುತ್ತಿರುವ ಹಳೆಯ ಮನೆಗಳ ಮಾಲೀಕರು, ಈ ಅವೈಜ್ಞಾನಿಕ ರಸ್ತೆ ಕಾಮಗಾರಿಗಳ ವಿರುದ್ಧ ಜಿಬಿಎ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ