ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ತೊರೆಯಲಿದ್ದಾರಾ ಸಲ್ಮಾನ್ ಖಾನ್? ಆರು ಅಂತಸ್ತಿನ ಹೊಸ ಮನೆ ನಿರ್ಮಾಣಕ್ಕೆ ಸಜ್ಜು – Kannada News | Salman Khan Leaves Galaxy Apt for Secure New Bandra Beach House After Gun Shooting

ಬಾಲಿವುಡ್‌ ನಟ ಸಲ್ಮಾನ್ ಖಾನ್ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿ ಇರುತ್ತಾರೆ. ಈಗ ಅವರ ಕುರಿತು ಮತ್ತೊಂದು ಪ್ರಮುಖ ಮಾಹಿತಿ ಹೊರಬಿದ್ದಿದೆ. ಸಲ್ಮಾನ್ ಖಾನ್ ಅವರು ಬಾಂದ್ರಾದಲ್ಲಿರುವ ತಮ್ಮ ನೆಚ್ಚಿನ ‘ಗ್ಯಾಲಕ್ಸಿ ಅಪಾರ್ಟ್‌ಮೆಂಟ್’ ಅನ್ನು ತೊರೆಯಲು ನಿರ್ಧರಿಸಿದ್ದಾರೆ. ನಟ ಸದ್ಯದಲ್ಲೇ ಹೊಸ ಮನೆಗೆ ಸ್ಥಳಾಂತರಗೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

2024 ರಲ್ಲಿ ಸಲ್ಮಾನ್ ಖಾನ್ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ಘಟನೆಯ ನಂತರವೇ ನಟ ಈ ದೊಡ್ಡ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ. ಸಲ್ಮಾನ್ ಖಾನ್ ಈಗ ತಮ್ಮ ಸ್ವಂತ ಜಾಗದಲ್ಲಿ ಭವ್ಯವಾದ ಮನೆಯನ್ನು ನಿರ್ಮಿಸಲಿದ್ದಾರೆ. ನಟನಿಗೆ ಈಗಾಗಲೇ ಆರು ಅಂತಸ್ತಿನ ಹೊಸ ಮನೆ ಕಟ್ಟಲು ಅನುಮತಿ ಸಿಕ್ಕಿದೆ. ಈ ಮನೆಯ ಕೆಲಸ ಮುಗಿದ ನಂತರ, ಇಡೀ ಖಾನ್ ಕುಟುಂಬ ಒಂದೇ ಸೂರಿನಡಿ ವಾಸಿಸಬೇಕೆಂಬುದು ನಟನ ಆಸೆಯಾಗಿದೆ.

ಸಲ್ಮಾನ್ ಖಾನ್ ಅವರು ಬಾಂದ್ರಾದ ಚಿಂಬೈ ಪ್ರದೇಶದಲ್ಲಿರುವ ತಮ್ಮ ಸ್ವಂತ ಪ್ಲಾಟ್‌ನಲ್ಲಿ ಆರು ಅಂತಸ್ತಿನ ‘ಬೀಚ್ ಹೌಸ್’ (ಸಮುದ್ರದ ತಟದ ಮನೆ) ನಿರ್ಮಿಸಲಿದ್ದಾರೆ. ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರವು ಜೂನ್ 16 ರಂದು ಈ ಯೋಜನೆಗೆ ಅನುಮೋದನೆ ನೀಡಿದೆ. ಈ ಹೊಸ ಕಟ್ಟಡವು ನೆಲ ಮಹಡಿ, ಸ್ಟಿಲ್ಟ್ ಪಾರ್ಕಿಂಗ್ ಮತ್ತು ಆರು ಮಹಡಿಗಳನ್ನು ಹೊಂದಿರಲಿದೆ. ಇದರ ಒಟ್ಟು ನಿರ್ಮಾಣ ವಿಸ್ತೀರ್ಣ 1,014 ಚದರ ಮೀಟರ್ ಆಗಿರಲಿದೆ. ಈ ಭವ್ಯ ಯೋಜನೆಯನ್ನು ‘ಸಚ್ ಡೆವಲಪರ್ಸ್’ ಸಂಸ್ಥೆಯು ನಿರ್ಮಿಸಲಿದೆ. ಈ ಮನೆಗೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ ಅಕ್ಟೋಬರ್ 2025 ರಲ್ಲೇ ಆರಂಭಿಕ ಅನುಮತಿಯನ್ನು ನೀಡಿತ್ತು.

1956ಕ್ಕಿಂತ ಮೊದಲು ಈ ಜಾಗದಲ್ಲಿ ಹಳೆಯ ಎರಡು ಅಂತಸ್ತಿನ ಮನೆ ಇತ್ತು. ಅದನ್ನು ಖಾನ್ ಕುಟುಂಬವು ಖರೀದಿಸಿ ನಂತರ ಕೆಡವಿತ್ತು. ಇದಲ್ಲದೆ, ಹೊಸ ಕಟ್ಟಡ ನಿರ್ಮಾಣದ ಸಮಯದಲ್ಲಿ ಪರಿಸರಕ್ಕೆ ಧಕ್ಕೆಯಾಗದಂತೆ ಒಂದೇ ಒಂದು ಮರವನ್ನು ಕತ್ತರಿಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ, ಆ ಜಾಗದಲ್ಲಿ ಸ್ಥಳೀಯ ತಳಿಯ ಹೊಸ ಮರಗಳನ್ನು ಸಹ ನೆಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಕರ್ಣನ ಪಾತ್ರದಲ್ಲಿ ಮಿಂಚಲಿರುವ ಸಲ್ಮಾನ್ ಖಾನ್, ಪ್ರಭಾಸ್​​ರ ಮೀರಿಸಬಲ್ಲರೆ?

ಹೊಸ ಮನೆಗೆ ಸ್ಥಳಾಂತರವಾಗಲು ಮುಖ್ಯ ಕಾರಣ ಭದ್ರತೆಯಾಗಿದೆ. ಕಳೆದ 2024 ರಲ್ಲಿ, ಗ್ಯಾಲಕ್ಸಿ ಅಪಾರ್ಟ್‌ಮೆಂಟ್ಸ್‌ನ ಹೊರಗೆ ಇಬ್ಬರು ಬೈಕ್ ಸವಾರರು ಗುಂಡು ಹಾರಿಸಿದ್ದರು. ತನಿಖೆಯ ವೇಳೆ ಅವರು ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದವರು ಎಂದು ತಿಳಿದುಬಂದಿತ್ತು. ಆ ಘಟನೆಯ ನಂತರ ಸಲ್ಮಾನ್ ಅವರಿಗೆ ‘Y+’ ದರ್ಜೆಯ ಭದ್ರತೆಯನ್ನು ಹೆಚ್ಚಿಸಲಾಯಿತು. ಅಷ್ಟೇ ಅಲ್ಲದೆ ಅಭಿಮಾನಿಗಳನ್ನು ಸ್ವಾಗತಿಸಲು ಅವರು ಬಳಸುತ್ತಿದ್ದ ಬಾಲ್ಕನಿಯನ್ನು ಗುಂಡು ನಿರೋಧಕ (ಬುಲೆಟ್ ಪ್ರೂಫ್) ಗಾಜಿನಿಂದ ಸುರಕ್ಷಿತಗೊಳಿಸಲಾಗಿತ್ತು. ಮುಖ್ಯ ರಸ್ತೆಯಿಂದ ದೂರವಿರುವ, ಶಾಂತವಾಗಿರುವ ಲೇನ್‌ನಲ್ಲಿ ನಿರ್ಮಾಣವಾಗಲಿರುವ ಈ ಹೊಸ ಮನೆ ಸಲ್ಮಾನ್ ಮತ್ತು ಅವರ ಕುಟುಂಬಕ್ಕೆ ಹೆಚ್ಚಿನ ಭದ್ರತೆ ಹಾಗೂ ಗೌಪ್ಯತೆಯನ್ನು ಒದಗಿಸಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *