ಗ್ರಾಮಸ್ಥರ ಅಲೆದಾಟ ತಪ್ಪಿಸಲು ಮನೆಬಾಗಿಲಿಗೇ ಬರಲಿದೆ ಇ-ಸ್ವತ್ತು! ತೊಡಕು ನಿವಾರಣೆಗೆ ಪಂಚ ಸದಸ್ಯರ ಸಮಿತಿ – Kannada News | Karnataka e Khata: E Swathu to Reach Villagers Doorstep, Minister Eshwar Khandre Orders Panel to Resolve Issues

ಸಚಿವ ಈಶ್ವರ್ ಖಂಡ್ರೆ (ಎಡ ಚಿತ್ರ) ಹಾಗೂ ಸಾಂದರ್ಭಿಕ ಚಿತ್ರImage Credit source: tv9

ಬೆಂಗಳೂರು, ಜುಲೈ 18: ಗ್ರಾಮೀಣ ಪ್ರದೇಶದ ಜನರು ಇ-ಸ್ವತ್ತು (E-Swathu) ಪಡೆಯಲು ಪಂಚಾಯಿತಿ ಕಚೇರಿಗಳಿಗೆ ಅಲೆದಾಡುವ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಸಿಗುವ ಸಾಧ್ಯತೆ ಇದೆ. ಗ್ರಾಮಸ್ಥರ ಮನೆಬಾಗಿಲಿಗೇ ಇ-ಸ್ವತ್ತು ತಲುಪಿಸುವ ವ್ಯವಸ್ಥೆ ರೂಪಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ (Eshwar Khandre) ಸೂಚನೆ ನೀಡಿದ್ದಾರೆ. ಇ-ಸ್ವತ್ತು ಪ್ರಕ್ರಿಯೆಯಲ್ಲಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸಲು ಪಂಚ ಸದಸ್ಯರ ಸಮಿತಿ ರಚಿಸುವಂತೆ ಇಲಾಖೆಯ ಕಾರ್ಯದರ್ಶಿಗೆ ಲಿಖಿತ ನಿರ್ದೇಶನ ನೀಡಿದ್ದಾರೆ.

ಸರ್ವರ್ ಸಮಸ್ಯೆಯಿಂದ ಭಾರೀ ಸಮಸ್ಯೆ

ರಾಜ್ಯದಲ್ಲಿ ತಂತ್ರಾಂಶ ಮತ್ತು ಸರ್ವರ್ ಸಮಸ್ಯೆಯಿಂದ ಸಾವಿರಾರು ಇ-ಸ್ವತ್ತು ಅರ್ಜಿಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ನಾಗರಿಕರಿಗೆ ಸುಲಭ ಮತ್ತು ವೇಗವಾಗಿ ಇ-ಸ್ವತ್ತು ಒದಗಿಸುವ ಉದ್ದೇಶದಿಂದ ಸಮಗ್ರ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ.

ಇ-ಸ್ವತ್ತು ತೊಡಕು ನಿವಾರಣೆಗೆ ವಿಶೇಷ ಸಮಿತಿ

ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಡಿ. ರಂದೀಪ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು, ಮಂಗಳೂರು, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಒಳಗೊಂಡ ಪಂಚ ಸದಸ್ಯರ ಸಮಿತಿ ರಚಿಸಲು ಸಚಿವರು ಸೂಚಿಸಿದ್ದಾರೆ. ಈ ಸಮಿತಿಯು ಇ-ಸ್ವತ್ತು ಪ್ರಕ್ರಿಯೆಯಲ್ಲಿ ಅಗತ್ಯವಿರುವ ನಿಯಮ ಬದಲಾವಣೆಗಳು, ತಾಂತ್ರಿಕ ಸುಧಾರಣೆಗಳು ಹಾಗೂ ಆಡಳಿತಾತ್ಮಕ ಕ್ರಮಗಳ ಕುರಿತು 10 ದಿನಗಳೊಳಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಲಾಗಿದೆ.

ದಾಖಲೆ ಇಲ್ಲದ ಗ್ರಾಮಠಾಣಾ ಆಸ್ತಿಗಳಿಗೂ ಇ-ಸ್ವತ್ತು

ರಾಜ್ಯದ ಗ್ರಾಮಠಾಣಾ ಪ್ರದೇಶಗಳಲ್ಲಿ ಹಲವು ದಶಕಗಳಿಂದ ವಾಸಿಸುತ್ತಿರುವ ಅನೇಕ ಕುಟುಂಬಗಳ ಬಳಿ ತಮ್ಮ ಮನೆ ಅಥವಾ ಜಾಗಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳಿಲ್ಲ. ಇದರಿಂದ ಅವರಿಗೆ ಇ-ಸ್ವತ್ತು ದೊರೆಯದೆ ಬ್ಯಾಂಕ್ ಸಾಲ, ಮನೆ ದುರಸ್ತಿ, ಪುನರ್ ನಿರ್ಮಾಣ, ಕಟ್ಟಡ ನಕ್ಷೆ ಅನುಮೋದನೆ ಹಾಗೂ ಆಸ್ತಿ ಮಾರಾಟದಂತಹ ಸೇವೆಗಳಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮನೆಮನೆ ಸಮೀಕ್ಷೆ ನಡೆಸಿ, ದಾಖಲೆರಹಿತ ಸ್ವತ್ತುಗಳಿಗೂ ಇ-ಸ್ವತ್ತು ನೀಡಲು ಅನುಕೂಲವಾಗುವ ಮಾರ್ಗೋಪಾಯಗಳನ್ನು ಸಮಿತಿ ಸೂಚಿಸಬೇಕು ಎಂದು ಸಚಿವರು ಹೇಳಿದ್ದಾರೆ.

ಬಿ-ಖಾತೆ ನೀಡುವ ಬಗ್ಗೆಯೂ ಪರಿಶೀಲನೆ

ಗ್ರಾಮಠಾಣಾ ವ್ಯಾಪ್ತಿಯ ಹೊರಗಿನ ಭೂಪರಿವರ್ತಿತ ಹಾಗೂ ಭೂಪರಿವರ್ತನೆ ಆಗದ ಕಂದಾಯ ಭೂಮಿಗಳಲ್ಲಿಯೂ ಅನೇಕ ಬಡಾವಣೆಗಳು ನಿರ್ಮಾಣವಾಗಿವೆ. ಕೆಲವು ಕಡೆ ಬಿ-ಖರಾಬು ಹಾಗೂ ಗೋಮಾಳ ಭೂಮಿಯನ್ನೂ ಸೇರಿಸಿ ಅಭಿವೃದ್ಧಿಪಡಿಸಿರುವುದರಿಂದ ನಮೂನೆ 11-ಬಿ ನೀಡಲು ತೊಂದರೆ ಉಂಟಾಗಿದೆ. ಆದರೆ ಗ್ರಾಮ ಪಂಚಾಯಿತಿಗಳು ರಸ್ತೆ, ಕುಡಿಯುವ ನೀರು, ಚರಂಡಿ, ಬೀದಿ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿದ್ದರೂ, ಆಸ್ತಿಗಳಿಗೆ ಸೂಕ್ತ ದಾಖಲೆ ಇಲ್ಲದ ಕಾರಣ ತೆರಿಗೆ ಸಂಗ್ರಹದಲ್ಲೂ ಸಮಸ್ಯೆ ಎದುರಿಸುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಪರಿಶೀಲಿಸಿ ಗ್ರಾಮೀಣ ಸ್ವತ್ತುಗಳಿಗೆ ಸುಲಭವಾಗಿ ಇ-ಸ್ವತ್ತು ಹಾಗೂ ಅಗತ್ಯ ದಾಖಲೆಗಳನ್ನು ಒದಗಿಸುವ ಕುರಿತು ವರದಿ ಸಲ್ಲಿಸುವಂತೆ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *