IPL 2026: ಐಪಿಎಲ್ ಅಂಗಳದಲ್ಲಿ ಕೊನೆಗೂ ಕ್ಯಾಮರೋನ್ ಗ್ರೀನ್ ಅವರ ಬ್ಯಾಟ್ ಸದ್ದು ಮಾಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಗ್ರೀನ್ ಸಿಡಿಸಿದ ಸಿಕ್ಸರ್ ಕೇವಲ ಬೌಂಡರಿ ಗೆರೆ ದಾಟಲಿಲ್ಲ, ಬದಲಿಗೆ ಕ್ರೀಡಾಂಗಣದಲ್ಲಿ ಪ್ರದರ್ಶನಕ್ಕಿಟ್ಟಿದ್ದ ಹೊಸ ಟಾಟಾ ಸಿಯೆರಾ ಕಾರಿನ ಮೇಲೆಯೇ ಬಿದ್ದಿದೆ! ಈ ಅಮೋಘ ಸಿಕ್ಸರ್‌ನಿಂದಾಗಿ 5 ಲಕ್ಷ ರೂ. ದೇಣಿಗೆ ಸಂಗ್ರಹವಾಗಿದೆ.
ಈ ಪಂದ್ಯದ 13ನೇ ಓವರ್‌ನಲ್ಲಿ ಗುಜರಾತ್ ವೇಗಿ ಅಶೋಕ್ ಶರ್ಮಾ ಎಸೆದ ಎಸೆತವನ್ನು ಕೆಕೆಆರ್ ದಾಂಡಿಗ ಕ್ಯಾಮರೋನ್ ಗ್ರೀನ್ ಅದ್ಭುತವಾಗಿ ಡೀಪ್ ಮಿಡ್-ವಿಕೆಟ್ ಕಡೆಗೆ ಫ್ಲಿಕ್ ಮಾಡಿದರು. ಗಾಳಿಯಲ್ಲಿ ತೇಲಿಬಂದ ಚೆಂಡು ನೇರವಾಗಿ ಬೌಂಡರಿ ಲೈನ್ ಆಚೆಗಿದ್ದ ಕಾರಿನ ಡೋರಿನ ಭಾಗಕ್ಕೆ ಅಪ್ಪಳಿಸಿತು. ಈ ಹೊಡೆತದ ತೀವ್ರತೆಗೆ ಕಾರಿನ ಬಾಡಿ ಮೇಲೆ ಗುಳಿ ಬಿದ್ದಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
₹5 ಲಕ್ಷ ದೇಣಿಗೆ:
ಈ ಒಂದು ಸಿಕ್ಸರ್ನಿಂದ 5 ಲಕ್ಷ ರೂ. ದೇಣಿಗೆ ಸಂಗ್ರಹವಾಗಿದೆ ಎಂದರೆ ನಂಬಲೇಬೇಕು. ಹೌದು, ಟಾಟಾ ಕಂಪನಿಯು, ಬ್ಯಾಟರ್‌ಗಳು ಹೊಡೆಯುವ ಚೆಂಡು ನೇರವಾಗಿ ಕಾರಿಗೆ ಬಡಿದರೆ, ತಳಮಟ್ಟದ ಕ್ರಿಕೆಟ್ ಅಭಿವೃದ್ಧಿಗಾಗಿ 5 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡುವುದಾಗಿ ತಿಳಿಸಿದೆ. ಅದರಂತೆ ಇದೀಗ ಗ್ರೀನ್ ಅವರ ಈ ಭರ್ಜರಿ ಸಿಕ್ಸರ್ನಿಂದ ತಳಮಟ್ಟದ ಕ್ರಿಕೆಟ್ ಅಭಿವೃದ್ಧಿಗೆ 5 ಲಕ್ಷ ರೂ. ಸಿಗಲಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 180 ರನ್ ಕಲೆಹಾಕಿದ್ದರು. ಈ ಗುರಿಯನ್ನು ಗುಜರಾತ್ ಟೈಟಾನ್ಸ್ ತಂಡವು 19.4 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಜಯ ಸಾಧಿಸಿದೆ.
