ಗದಗ, ಮಾ.3: ಸಾಮಾನ್ಯವಾಗಿ ಗ್ರಹಣವೆಂದರೆ ಅಶುಭ, ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡಬಾರದು ಎಂಬ ನಂಬಿಕೆ ಬಲವಾಗಿದೆ. ಆದರೆ, ಗದಗ ನಗರದಲ್ಲಿ ಈ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಹೋಳಿ ಹುಣ್ಣಿಮೆ ಹಾಗೂ ಚಂದ್ರಗ್ರಹಣದ ದಿನದಂದೇ 19 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂಧರ ಬಾಳಿನ ಬೆಳಕು, ಪಂಡಿತ ಪುಟ್ಟರಾಜ ಗವಾಯಿಗಳ 112ನೇ ಜಯಂತೋತ್ಸವದ ಅಂಗವಾಗಿ ಈ ಅರ್ಥಪೂರ್ಣ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿತ್ತು. ದಿ. ಕೆ.ಎಚ್. ಪಾಟೀಲ್ ಅಭಿಮಾನಿಗಳ ಬಳಗವು ಗದಗ ಎಪಿಎಂಸಿ ಆವರಣದ ಪುಟ್ಟರಾಜ ಗವಾಯಿಗಳ ಮಠದ ಆವರಣದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಜಾತಿ-ಮತದ ಭೇದವಿಲ್ಲದೆ ಸರ್ವಧರ್ಮದ ಒಟ್ಟು 19 ಜೋಡಿಗಳು ಗಣ್ಯರು ಹಾಗೂ ಮಠಾಧೀಶರ ಸಮ್ಮುಖದಲ್ಲಿ ಸಪ್ತಪದಿ ತುಳಿದರು. ಗವಾಯಿಗಳ 112ನೇ ಜಯಂತಿಯ ಸ್ಮರಣಾರ್ಥ 112 ಕೆಜಿ ತೂಕದ ಬೃಹತ್ ಕೇಕ್ ಕತ್ತರಿಸುವ ಮೂಲಕ ವಿವಾಹ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು. ಮದುವೆಗೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಪುಟ್ಟರಾಜ ಗವಾಯಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು. 112 ಸುಮಂಗಲೆಯರು ಕುಂಭ ಹೊತ್ತು ಸಾಗಿದ್ದು ಮೆರವಣಿಗೆಗೆ ಕಳೆ ನೀಡಿತ್ತು. ಗದಗನ ಗವಾಯಿಗಳ ಮಠದ ಕಲ್ಲಯ್ಯಜ್ಜನವರು ಹಾಗೂ ತೋಂಟದ ಡಾ. ಸಿದ್ದರಾಮ ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ನವಜೋಡಿಗಳನ್ನು ಆಶೀರ್ವದಿಸಿದರು. “ಗ್ರಹಣವು ಒಂದು ನೈಸರ್ಗಿಕ ವಿದ್ಯಮಾನ, ಅದು ಶುಭ ಕಾರ್ಯಗಳಿಗೆ ಅಡ್ಡಿಯಲ್ಲ” ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಜನರಿಗೆ ನೀಡಲಾಯಿತು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
